
ಶ್ರೀರಂಗಪಟ್ಟಣ, 10ಸೆಪ್ಟೆಂಬರ್(ಹಿ.ಸ.)
ಆ್ಯಂಕರ್:
ಕ್ಷೇತ್ರದ ನಿರುದ್ಯೋಗಿ ಯುವಕ–ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಶ್ರೀರಂಗಪಟ್ಟಣದಲ್ಲಿ ಸೆ.11ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ತಿಳಿಸಿದ್ದಾರೆ.
ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಯೋಗ ಮೇಳವನ್ನು ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದೆ. ವಿವಿಧ ಪ್ರತಿಷ್ಠಿತ ಕಂಪನಿಗಳು ಮೇಳದಲ್ಲಿ ಭಾಗವಹಿಸಲಿದ್ದು, ಉದ್ಯೋಗಾಕಾಂಕ್ಷಿಗಳಿಗೆ ನೇರವಾಗಿ ಉದ್ಯೋಗಾವಕಾಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
10 ಸಾವಿರ ಉದ್ಯೋಗಾವಕಾಶಗಳನ್ನು ಒದಗಿಸುವ ಗುರಿ ಹೊಂದಿದ್ದು, ಕನಿಷ್ಠ 5 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕ್ಷೇತ್ರದ ಹೆಚ್ಚಿನ ಸಂಖ್ಯೆಯ ಯುವಕ–ಯುವತಿಯರು ಮೇಳದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಮನವಿ ಮಾಡಿದ್ದಾರೆ.
“ಕ್ಷೇತ್ರದ ನಿರುದ್ಯೋಗಿ ಯುವಜನರಿಗೆ ಉದ್ಯೋಗ ದೊರಕಿಸಿಕೊಡುವುದು ನಮ್ಮ ಪ್ರಮುಖ ಉದ್ದೇಶ. ಉದ್ಯೋಗ ಮೇಳ ಯಶಸ್ವಿಯಾಗಿ ನಡೆಯಲು ಎಲ್ಲರೂ ಸಹಕರಿಸಬೇಕು.
ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳಬೇಕು,” ಎಂದು ಅವರು ಹೇಳಿದರು.
ಯುವಜನರಿಗೆ ಉದ್ಯೋಗ ಕಲ್ಪಿಸುವ ಮೂಲಕ ಅವರ ಭವಿಷ್ಯಕ್ಕೆ ನೆರವಾಗುವ ಉದ್ದೇಶದಿಂದ ಈ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R