
ಬೆಂಗಳೂರು, 10 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಕರ್ನಾಟಕವನ್ನು ಆರ್ಥಿಕವಾಗಿ ಸದೃಢ, ಸಾಮಾಜಿಕವಾಗಿ ಸಶಕ್ತ ಹಾಗೂ ತಂತ್ರಜ್ಞಾನದಲ್ಲಿ ಮುಂಚೂಣಿ ರಾಜ್ಯವನ್ನಾಗಿ ರೂಪಿಸುವ ನವ ಸಂಕಲ್ಪವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ಪ್ರಕಟಿಸಿದರು. ಅಧಿಕಾರ ವಹಿಸಿಕೊಂಡು 100 ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ‘ದೃಢ ಕರ್ನಾಟಕದ ಸಂಕಲ್ಪ: ಶತಕದ ಪಥ, ಪ್ರಗತಿಯ ರಥ’ ಕಾರ್ಯಕ್ರಮದಲ್ಲಿ ಸರ್ಕಾರದ ಮುಂದಿನ ಆದ್ಯತೆಗಳು ಹಾಗೂ ಕಳೆದ ಮೂರು ವರ್ಷಗಳ ಸಾಧನೆಗಳನ್ನು ವಿವರಿಸಿದರು.
ಆರೋಗ್ಯ, ಶಿಕ್ಷಣ, ಜಲ ಭದ್ರತೆ, ಹೂಡಿಕೆ ಮತ್ತು ಆರ್ಥಿಕ ಬಲ, ಬೆಂಗಳೂರು ಅಭಿವೃದ್ಧಿ, ಪ್ರಾದೇಶಿಕ ಸಮತೋಲನ, ಸಾಮಾಜಿಕ ನ್ಯಾಯ, ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಮೂಲಕ ಬಲಿಷ್ಠ ಕರ್ನಾಟಕ ನಿರ್ಮಿಸುವುದೇ ಸರ್ಕಾರದ ಗುರಿ ಎಂದು ಹೇಳಿದರು.
2037ರ ವೇಳೆಗೆ ಒಂದು ಟ್ರಿಲಿಯನ್ ಆರ್ಥಿಕತೆ
ಕರ್ನಾಟಕದ ಆರ್ಥಿಕತೆಯನ್ನು 2037ರ ವೇಳೆಗೆ ಒಂದು ಟ್ರಿಲಿಯನ್‌ಗೆ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಸರ್ಕಾರ ಹೊಂದಿದೆ. ಇದರ ಜತೆಗೆ ಅಪೌಷ್ಟಿಕತೆ, ಮಕ್ಕಳು ಶಾಲೆ ತೊರೆಯುವಿಕೆ ಹಾಗೂ ಬಡತನವನ್ನು ಶೇ.5ಕ್ಕಿಂತ ಕಡಿಮೆ ಮಟ್ಟಕ್ಕೆ ತಂದು ಶೂನ್ಯಕ್ಕೆ ಇಳಿಸುವ ಸಂಕಲ್ಪ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
“ನನ್ನಿಂದ ಸಾಧ್ಯವಾಗುವುದಕ್ಕೆ ಮಾತ್ರ ನಾನು ಕೈಹಾಕುತ್ತೇನೆ. ಪಂಚ ಗ್ಯಾರಂಟಿ ಯೋಜನೆಗಳ ಜಾರಿ ಅಸಾಧ್ಯ ಎಂದು ಟೀಕಿಸಲಾಗಿತ್ತು. ಆದರೆ ಅವುಗಳನ್ನು ಸಾಧ್ಯವಾಗಿಸಿ ತೋರಿಸಿದ್ದೇವೆ” ಎಂದು ಹೇಳಿದರು.
ಭೂರಹಿತರಿಗೆ ಐದು ಲಕ್ಷ ನಿವೇಶನ
ಗ್ರಾಮೀಣ ಭಾಗದಲ್ಲಿರುವ ಮನೆರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉಚಿತ ಮನೆ ಹಾಗೂ ನಿವೇಶನ ನೀಡಲು ಸರ್ಕಾರ ತೀರ್ಮಾನಿಸಿದೆ. ನಿವೇಶನ ರಹಿತ ಕುಟುಂಬಗಳಿಗೆ ಐದು ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು.
ಪರಿಶಿಷ್ಟರ ವಸತಿ ಪ್ರದೇಶಗಳಲ್ಲಿ ರಸ್ತೆ, ಚರಂಡಿ ಹಾಗೂ ಬೀದಿ ದೀಪಗಳ ಸೌಲಭ್ಯವನ್ನು ಮೇಲ್ದರ್ಜೆಗೇರಿಸಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ 50 ಸಾವಿರ ಯುವಕರಿಗೆ ಎರಡು ವರ್ಷಗಳಲ್ಲಿ ಸ್ವಯಂ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ರೈತರಿಗಾಗಿ ‘ನೇಗಿಲ ಯೋಗಿ’, ‘ತೇಗದ ಸಿರಿ’
ಬರ ಹಾಗೂ ಒಣಭೂಮಿಯ ಸಮಸ್ಯೆಯಿಂದ ರೈತರು ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ರೈತರಿಗೆ ಕಡಿಮೆ ದರದಲ್ಲಿ ಉಳುಮೆ ಸೌಲಭ್ಯ ಒದಗಿಸಲು ‘ಮುಖ್ಯಮಂತ್ರಿ ನೇಗಿಲ ಯೋಗಿ’ ಯೋಜನೆ ಜಾರಿಗೆ ತರಲಾಗಿದೆ. ಮೂರು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಸಹಾಯಧನದ ಮೂಲಕ ಟ್ರ್ಯಾಕ್ಟರ್‌ಗಳಿಂದ ಉಳುಮೆ ಮಾಡಿಸಿಕೊಡುವ ಉದ್ದೇಶ ಹೊಂದಲಾಗಿದೆ.
ರಸ್ತೆ ಬದಿಗಳಲ್ಲಿ ತೇಗದ ಸಸಿಗಳನ್ನು ನೆಟ್ಟು ಅವುಗಳ ಸಂರಕ್ಷಣೆಯ ಜವಾಬ್ದಾರಿಯನ್ನು ರೈತರಿಗೆ ನೀಡಲಾಗುವುದು. ಮರ ಕಟಾವಿಗೆ ಬಂದ ಬಳಿಕ ದೊರೆಯುವ ಮೊತ್ತದಲ್ಲಿ ಶೇ.70ರಷ್ಟು ರೈತರಿಗೆ ಹಾಗೂ ಶೇ.30ರಷ್ಟು ಸರ್ಕಾರಕ್ಕೆ ನೀಡುವ ‘ತೇಗದ ಸಿರಿ’ ಯೋಜನೆಯನ್ನು ರೂಪಿಸಲಾಗಿದೆ.
ನಗರದ ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕಿನ ಪರಿಚಯ ಮಾಡಿಕೊಡಲು ‘ಗ್ರಾಮಾನುಭವ’ ಯೋಜನೆಯನ್ನೂ ಜಾರಿಗೆ ತರಲಾಗುತ್ತಿದೆ ಎಂದರು.
10 ಸಾವಿರ ಯುವ ಸಂಘಗಳಿಗೆ ಒಂದು ಸಾವಿರ ಕೋಟಿ
ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವುದು, ಗ್ರಾಮೀಣ ಪ್ರತಿಭೆಗಳಿಗೆ ಉತ್ತೇಜನ ನೀಡುವುದು ಹಾಗೂ ರಾಜ್ಯವನ್ನು ನಶಾಮುಕ್ತಗೊಳಿಸುವ ಉದ್ದೇಶದಿಂದ ಪ್ರತಿ ಪಂಚಾಯಿತಿಯಲ್ಲಿ ಭಾರತ ಜೋಡೋ ಯುವ ಸಂಘ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.
ರಾಜ್ಯದಲ್ಲಿ 10 ಸಾವಿರ ಯುವ ಸಂಘಗಳನ್ನು ಸ್ಥಾಪಿಸಿ ಪ್ರತಿ ಸಂಘಕ್ಕೆ ವಾರ್ಷಿಕ 10 ಲಕ್ಷ ರೂ. ಅನುದಾನ ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಒಂದು ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಕನಿಷ್ಠ 25 ಲಕ್ಷ ಯುವಕರು ನೋಂದಣಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಯುವಕರಿಗೆ ಉದ್ಯೋಗ ನಿಧಿ, ಉದ್ಯೋಗ ಸೇತು
ಬೆಂಗಳೂರಿನ ಹೊರಗಿನ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಸುವವರಿಗೆ ಪ್ರತಿ ಉದ್ಯೋಗಕ್ಕೆ 2,500 ರೂ. ನೀಡಲು ‘ಉದ್ಯೋಗ ನಿಧಿ’ ಯೋಜನೆ ಜಾರಿಗೆ ತರಲಾಗುವುದು. ಖಾಸಗಿ ವಲಯದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ‘ಯುವ ಉದ್ಯೋಗ ಸೇತು’ ಮೂಲಕ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸಲಾಗುವುದು.
ಉದ್ಯೋಗದಾತರಿಗೆ ಬೇಕಾದ ಕೌಶಲ್ಯಕ್ಕೆ ಅನುಗುಣವಾಗಿ ಯುವಕರಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.7.5 ಮೀಸಲಾತಿ
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಶೇ.7.5ರಷ್ಟು ಮೀಸಲಾತಿ ನೀಡಲು ಸರ್ಕಾರ ಮುಂದಾಗಿದೆ. ಈಗಾಗಲೇ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15.5ರಷ್ಟು ಮೀಸಲಾತಿ ಇದ್ದು, ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಗ್ರಾಮೀಣ ಭಾಗದ ಮಕ್ಕಳಿಗೆ ನಗರ ಮಟ್ಟದ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಪಂಚಾಯಿತಿ ಮಟ್ಟದಲ್ಲಿ ಒಂದು ಸಾವಿರ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು. ವಿಶ್ವ ಬ್ಯಾಂಕ್ ನೆರವಿನೊಂದಿಗೆ ಈ ವರ್ಷ ಒಂದು ಸಾವಿರ ಶಾಲೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
100 ದಿನಗಳಲ್ಲಿ ₹43,214 ಕೋಟಿ ಹೂಡಿಕೆಗೆ ಅನುಮೋದನೆ
ರಾಜ್ಯದಲ್ಲಿ ಕೈಗಾರಿಕಾ ಪ್ರಗತಿಗೆ ವೇಗದ ಅನುಮೋದನೆ ನೀಡಲಾಗುತ್ತಿದ್ದು, ಅಧಿಕಾರ ವಹಿಸಿಕೊಂಡ 100 ದಿನಗಳಲ್ಲಿ 43,214 ಕೋಟಿ ರೂ. ಹೂಡಿಕೆಗೆ ಅನುಮೋದನೆ ನೀಡಲಾಗಿದೆ.
ಹಿಂದುಳಿದ ತಾಲ್ಲೂಕುಗಳಲ್ಲಿ ಹೂಡಿಕೆಗೆ ವೇಗವರ್ಧನಾ ಪ್ಯಾಕೇಜ್ ನೀಡಲಾಗುವುದು. ಕೈಗಾರಿಕಾ ಪ್ರದೇಶಗಳ ಸಮೀಪ ಕಾರ್ಮಿಕರಿಗೆ ವಸತಿ ಕಲ್ಪಿಸಲು ಶೇ.15ರಿಂದ 20ರಷ್ಟು ಜಾಗದಲ್ಲಿ ಶ್ರಮಿಕ ನಿವಾಸ ಯೋಜನೆಗೆ ಅವಕಾಶ ನೀಡಲಾಗಿದೆ.
ಬಳ್ಳಾರಿ ಜೀನ್ಸ್ ಪಾರ್ಕ್, ಜವಳಿ ನೀತಿ, ಏರೋಸ್ಪೇಸ್ ಮತ್ತು ರಕ್ಷಣಾ ನೀತಿಗೆ ಒತ್ತು ನೀಡಲಾಗುತ್ತಿದೆ. ದೊಡ್ಡಬಳ್ಳಾಪುರದಲ್ಲಿ ನಾಲ್ಕು ಸಾವಿರ ಎಕರೆ ಪ್ರದೇಶದಲ್ಲಿ 20 ಸಾವಿರ ಕೋಟಿ ರೂ. ವೆಚ್ಚದ ಉತ್ಪಾದನಾ ಸಮೂಹ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ
“ನಾವು ಕೃತಕ ಬುದ್ಧಿಮತ್ತೆಯ ಯುಗಕ್ಕೆ ಕಾಲಿಡುತ್ತಿದ್ದೇವೆ. ಮುಂದಿನ ಪೀಳಿಗೆಯನ್ನು ಆಧುನಿಕ ತಂತ್ರಜ್ಞಾನಕ್ಕೆ ಸಿದ್ಧಪಡಿಸಲು ದೇಶದಲ್ಲೇ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದಾಗಿದ್ದೇವೆ. ಆರನೇ ತರಗತಿಯಿಂದಲೇ ಮಕ್ಕಳಿಗೆ ಕೃತಕ ಬುದ್ಧಿಮತ್ತೆ ಶಿಕ್ಷಣ ನೀಡಲು ತೀರ್ಮಾನಿಸಿದ್ದೇವೆ” ಎಂದು ಹೇಳಿದರು.
ಆರೋಗ್ಯ ಕ್ಷೇತ್ರಕ್ಕೆ ಹೊಸ ಯೋಜನೆಗಳು
ಎಲ್ಲ ತಾಲ್ಲೂಕುಗಳಲ್ಲಿ ದೂರಸಂಪರ್ಕ ಆಧಾರಿತ ತೀವ್ರ ನಿಗಾ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯವನ್ನು ಮಾದಕ ವಸ್ತುಮುಕ್ತಗೊಳಿಸಲು ‘ರೈಸ್’ ಹಾಗೂ ‘ಬೇಡ ಬ್ರೋ’ ಅಭಿಯಾನಗಳನ್ನು ನಡೆಸಲಾಗುತ್ತಿದೆ.
ರಾಜ್ಯದಲ್ಲಿ ಒಂದು ಸಾವಿರ ರುದ್ರಭೂಮಿಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ತೀರ್ಮಾನಿಸಿದೆ. ಗದಗ ಜಿಲ್ಲೆಯ ಎಚ್.ಕೆ. ಪಾಟೀಲ್ ಅವರ ಕ್ಷೇತ್ರದಲ್ಲಿ ರೂಪಿಸಿರುವ ‘ಮುಕ್ತಿವನ’ ಮಾದರಿಯನ್ನು ಇತರ ಭಾಗಗಳಲ್ಲೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನಾಚೆ ಕೈಗಾರಿಕೆ, ಪ್ರವಾಸೋದ್ಯಮ ಅಭಿವೃದ್ಧಿ
ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಿ ರಾಜ್ಯದ ಇತರ ಭಾಗಗಳಲ್ಲೂ ಕೈಗಾರಿಕಾ ಹಾಗೂ ತಂತ್ರಜ್ಞಾನ ಅಭಿವೃದ್ಧಿ ಸಾಧಿಸಲು ‘ಬೆಂಗಳೂರಿನಾಚೆ’ ಪರಿಕಲ್ಪನೆ ಜಾರಿಗೆ ತರಲಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಪ್ರವಾಸೋದ್ಯಮ ನೀತಿ ರೂಪಿಸಲಾಗುತ್ತಿದೆ.
ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಹಾಗೂ ಮೈಸೂರಿನಲ್ಲಿ ಐದು ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶವಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಜನರ ಮನೆ ಬಾಗಿಲಿಗೆ ಆಡಳಿತ
ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ವಿಧಾನಸೌಧ, ಸಚಿವರು, ಶಾಸಕರು ಹಾಗೂ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳುವ ವ್ಯವಸ್ಥೆ ರೂಪಿಸಲಾಗುತ್ತಿದೆ.
ಇದಕ್ಕಾಗಿ ಪ್ರಜಾಸೇವೆ ಇಲಾಖೆ ಆರಂಭಿಸಲಾಗಿದೆ. ತಾವು ಚಾಲನೆ ನೀಡಿದ ಕಾರ್ಯಕ್ರಮದಲ್ಲೇ 30 ಸಾವಿರ ಅರ್ಜಿಗಳು ಬಂದಿದ್ದು, ಪಿಂಚಣಿ, ಪೋಡಿ, ಖಾತೆ, ನಿವೇಶನ ಸೇರಿದಂತೆ ಹಲವು ಸಮಸ್ಯೆಗಳನ್ನು ಜನರು ಮುಂದಿಟ್ಟಿದ್ದಾರೆ ಎಂದು ಹೇಳಿದರು.
ಪ್ರತಿ ಸಚಿವರು ತಮ್ಮ ಜಿಲ್ಲೆಗಳಲ್ಲಿ ಈ ಅಭಿಯಾನ ನಡೆಸಬೇಕು. ಶಾಸಕರು ಪಂಚಾಯಿತಿ ಮಟ್ಟಕ್ಕೆ ತೆರಳಿ ಜನರ ಸಮಸ್ಯೆ ಆಲಿಸಬೇಕು. ಶಾಸಕರು ತೆರಳದಿದ್ದರೆ ಅಧಿಕಾರಿಗಳು ತೆರಳಿ ಜನರಿಗೆ ಸ್ಪಂದಿಸಬೇಕು ಎಂದು ಸೂಚಿಸಿದರು.
ಆರನೇ ಗ್ಯಾರಂಟಿಯಾಗಿ ‘ಭೂಮಿ ಗ್ಯಾರಂಟಿ’
“ನಮ್ಮ ಸರ್ಕಾರ ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡುತ್ತಿದೆ. ಬೆಂಗಳೂರಿನಲ್ಲಿ 26 ಲಕ್ಷ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡಲಾಗುತ್ತಿದೆ. ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಆಸ್ತಿ ದಾಖಲೆಗಳ ಪೋಡಿ ಕಾರ್ಯಕ್ಕೆ ಮುಂದಾಗಿದ್ದೇವೆ” ಎಂದು ತಿಳಿಸಿದರು.
ಕರ್ನಾಟಕವನ್ನು ದೇಶದಲ್ಲೇ ವೇಗವಾಗಿ ಬೆಳೆಯುತ್ತಿರುವ ರಾಜ್ಯವನ್ನಾಗಿಸುವುದಷ್ಟೇ ತಮ್ಮ ಗುರಿಯಲ್ಲ. ನಾಳಿನ ಭಾರತಕ್ಕೆ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ರೂಪಿಸುವುದು ತಮ್ಮ ದೃಷ್ಟಿಕೋನವಾಗಿದೆ ಎಂದರು.
ಜಲ ಭದ್ರತೆಗೆ ಮೇಕೆದಾಟು, ಮಹದಾಯಿ
ಮೇಕೆದಾಟು ಯೋಜನೆ ಸೇರಿದಂತೆ ರಾಜ್ಯದ ಜಲ ಭದ್ರತೆಗೆ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಉತ್ತರ ಕರ್ನಾಟಕದ ಮಹದಾಯಿ ಯೋಜನೆಗೆ ಸಣ್ಣ ಅಡೆತಡೆ ಇದ್ದು, ಅದನ್ನು ನಿವಾರಿಸಲು ಕೇಂದ್ರ ಸಚಿವರು ಹಾಗೂ ಸಂಸದರು ಅಗತ್ಯ ಪ್ರಯತ್ನ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಈ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು. ಲಾಲ್‌ಬಾಗ್ ಮಾದರಿಯಲ್ಲಿ ರಾಜ್ಯದಲ್ಲಿ ಇನ್ನೂ ಐದು ಉದ್ಯಾನಗಳನ್ನು ನಿರ್ಮಿಸುವ ಉದ್ದೇಶವಿದ್ದು, ಅರಣ್ಯ ಇಲಾಖೆಯ ಜಾಗಗಳಲ್ಲಿ ಈ ಯೋಜನೆ ಕೈಗೊಳ್ಳಲು ಸರ್ಕಾರ ಮುಂದಾಗಿದೆ ಎಂದರು.
ಐದು ಗ್ಯಾರಂಟಿಗಳಿಗೆ ₹1,45,416 ಕೋಟಿ
ಕಳೆದ ಮೂರು ವರ್ಷಗಳಲ್ಲಿ ಐದು ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ 1,45,416 ಕೋಟಿ ರೂ. ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಗೃಹಲಕ್ಷ್ಮಿ ಯೋಜನೆಯಡಿ 1.24 ಕೋಟಿ ಮಹಿಳೆಯರಿಗೆ ಈವರೆಗೆ 76,951 ಕೋಟಿ ರೂ. ನೀಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ 1.67 ಕೋಟಿ ಮನೆಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಇದಕ್ಕಾಗಿ 30,522 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಅನ್ನಭಾಗ್ಯ ಯೋಜನೆಯಡಿ 4.44 ಕೋಟಿ ಜನರಿಗೆ ತಿಂಗಳಿಗೆ 10 ಕೆ.ಜಿ. ಅಕ್ಕಿ ನೀಡಲಾಗುತ್ತಿದ್ದು, 21,054 ಕೋಟಿ ರೂ. ವೆಚ್ಚವಾಗಿದೆ. ಶಕ್ತಿ ಯೋಜನೆಯಡಿ ಮಹಿಳೆಯರು 821 ಕೋಟಿ ಬಾರಿ ಉಚಿತ ಪ್ರಯಾಣ ಮಾಡಿದ್ದು, 15,735 ಕೋಟಿ ರೂ. ವೆಚ್ಚವಾಗಿದೆ. ಯುವನಿಧಿ ಯೋಜನೆಯಡಿ 3.72 ಲಕ್ಷ ಯುವಕರಿಗೆ ನಿರುದ್ಯೋಗ ಭತ್ಯೆಯಾಗಿ 1,154 ಕೋಟಿ ರೂ. ನೀಡಲಾಗಿದೆ ಎಂದು ವಿವರಿಸಿದರು.
2.70 ಕೋಟಿ ಫಲಾನುಭವಿಗಳಿಗೆ ₹1.41 ಲಕ್ಷ ಕೋಟಿ ನೇರ ವರ್ಗಾವಣೆ
ಸರ್ಕಾರ ಈವರೆಗೆ 2.70 ಕೋಟಿ ಜನರಿಗೆ 1,41,210 ಕೋಟಿ ರೂ. ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಿದೆ. ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ಪ್ರಸಕ್ತ ವರ್ಷ 42,018 ಕೋಟಿ ರೂ. ನೀಡಲಾಗಿದೆ.
ಈ ವರ್ಷ 28.63 ಲಕ್ಷ ರೈತರಿಗೆ ಶೂನ್ಯ ಹಾಗೂ ಕಡಿಮೆ ಬಡ್ಡಿದರದಲ್ಲಿ 25,652 ಕೋಟಿ ರೂ. ಸಾಲ ನೀಡಲಾಗಿದೆ. ರಾಜ್ಯದಲ್ಲಿ 17,073 ಕೋಟಿ ರೂ. ಮೊತ್ತದ 121 ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಾರ್ಷಿಕ ಅನುದಾನವನ್ನು 3 ಸಾವಿರ ಕೋಟಿಯಿಂದ 5 ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿ 88 ಲಕ್ಷ ಮಂದಿಗೆ ತಪಾಸಣೆ
ಗೃಹ ಆರೋಗ್ಯ ಯೋಜನೆಯಡಿ 88 ಲಕ್ಷ ಮಂದಿಗೆ ಮನೆಗಳಲ್ಲೇ ಆರೋಗ್ಯ ತಪಾಸಣೆ ಮಾಡಲಾಗಿದೆ. ಹೃದಯ ಜ್ಯೋತಿ ಯೋಜನೆಯಡಿ 21,659 ಹೃದಯಾಘಾತ ಪ್ರಕರಣಗಳನ್ನು ಅನಾಹುತಕ್ಕೂ ಮುನ್ನ ಪತ್ತೆಹಚ್ಚಲಾಗಿದೆ. ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಶಾಲಾ ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಮೂರು ವರ್ಷಗಳಲ್ಲಿ ₹2.53 ಲಕ್ಷ ಕೋಟಿ ಬಂಡವಾಳ ಹೂಡಿಕೆ
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 2.53 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ. ವಿದೇಶಿ ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ದೇಶದಲ್ಲೇ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ. ಈವರೆಗೆ ಆರು ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ.
ರಾಜ್ಯದ ಒಟ್ಟು ಆಂತರಿಕ ಉತ್ಪನ್ನ 32.81 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದ್ದು, ಶೇ.8.1ರಷ್ಟು ಪ್ರಗತಿ ಸಾಧಿಸಿದೆ. ರಾಷ್ಟ್ರದ ಪ್ರಗತಿಗಿಂತ ಕರ್ನಾಟಕ ಮುನ್ನಡೆ ಸಾಧಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.
100 ದಿನಗಳಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, 10 ಸಾವಿರ ಭಾರತ ಜೋಡೋ ಯುವ ಸಂಘಗಳ ಸ್ಥಾಪನೆ, 2,400 ಚದರ ಅಡಿವರೆಗಿನ ವಸತಿ ಕಟ್ಟಡಗಳಿಗೆ ಸ್ವಾಧೀನ ಪ್ರಮಾಣಪತ್ರ ಹಾಗೂ ನಿರ್ಮಾಣ ಪೂರ್ಣಗೊಂಡ ಪ್ರಮಾಣಪತ್ರದ ವಿನಾಯಿತಿ, ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ರಾಜ್ಯದಾದ್ಯಂತ ವಿಸ್ತರಣೆ, ಖಾಲಿ ಇರುವ 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಚಾಲನೆ ಹಾಗೂ ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ರೌಡಿ ನಿಗ್ರಹ ದಳ ಸ್ಥಾಪಿಸಿ ಸಂಘಟಿತ ಅಪರಾಧ, ಗೂಂಡಾಗಿರಿ ಹಾಗೂ ಸುಲಿಗೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಅಂತರರಾಜ್ಯ ನೀರು ಹಂಚಿಕೆ ವಿಚಾರದಲ್ಲಿ ತುಂಗಭದ್ರಾ ಅಣೆಕಟ್ಟಿನ ಎಲ್ಲ 33 ಹೊಸ ಗೇಟ್‌ಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಒಂದೆಡೆ ಸೇರಿ ಸೌಹಾರ್ದತೆಯ ಸಂದೇಶ ಸಾರಿರುವುದು ತಮ್ಮ ಬದುಕಿನ ಅತ್ಯಂತ ಆತ್ಮತೃಪ್ತಿಯ ಹೆಜ್ಜೆಯಾಗಿದೆ ಎಂದು ಹೇಳಿದರು.
ಮಹಾಬಲಿಪುರಂನಲ್ಲಿ ನಡೆದ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ನ್ಯಾಯಸಮ್ಮತ ತೆರಿಗೆ ಹಂಚಿಕೆ, ನೀರಿನ ಹಕ್ಕು ಹಾಗೂ ರಾಜಕೀಯ ಪ್ರಭಾವದ ರಕ್ಷಣೆಯ ಕುರಿತು ಧ್ವನಿ ಎತ್ತಲಾಗಿದೆ ಎಂದರು.
“ನಮ್ಮ ಗುರಿ ದೃಢ ಕರ್ನಾಟಕ. ಆರ್ಥಿಕವಾಗಿ ಸದೃಢ, ಸಾಮಾಜಿಕವಾಗಿ ಸಶಕ್ತ, ತಂತ್ರಜ್ಞಾನದಲ್ಲಿ ಮುಂದುವರಿದ ಹಾಗೂ ಮೌಲ್ಯಗಳಲ್ಲಿ ಆಳವಾಗಿ ಬೇರೂರಿದ ಕರ್ನಾಟಕ ನಿರ್ಮಾಣ ಮಾಡುವುದು. ನಾನು ಮುಖ್ಯಮಂತ್ರಿ ಮಾತ್ರವಲ್ಲ, ಪ್ರಜಾ ಸೇವಕ. ದಿನದ 24 ಗಂಟೆಯೂ ಜನರ ಸೇವೆಗೆ ಬದ್ಧನಾಗಿದ್ದೇನೆ. ಭ್ರಷ್ಟಾಚಾರರಹಿತ ಆಡಳಿತ ನೀಡಲು ಎಲ್ಲರೂ ಸಹಕಾರ ನೀಡಬೇಕು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.