
ಬೆಂಗಳೂರು, 10 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ 100 ದಿನಗಳ ಆಡಳಿತವನ್ನು ಟೀಕಿಸಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸಾಧನೆಯ ಖಾತೆ ಖಾಲಿಯಾಗಿದ್ದರೂ ಶತದಿನೋತ್ಸವದ ಹೆಸರಿನಲ್ಲಿ ಭರ್ಜರಿ ಸಂಭ್ರಮಾಚರಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, “ಯಾವ ಸಾಧನೆಗೆ ಈ ಸಂಭ್ರಮ? ಯಾವ ಸಾಧನೆಗೆ ಈ ಸಡಗರ?” ಎಂದು ಪ್ರಶ್ನಿಸಿದ್ದಾರೆ.
100 ದಿನಗಳ ಆಡಳಿತಕ್ಕೆ ಬ್ಯಾಂಕ್ವೆಟ್ ಹಾಲ್, ಭರ್ಜರಿ ವೇದಿಕೆ, ವಿದ್ಯುತ್ ದೀಪಾಲಂಕಾರ ಹಾಗೂ ಕೋಟ್ಯಂತರ ರೂಪಾಯಿಗಳ ಪ್ರಚಾರಕ್ಕೆ ಇಷ್ಟೊಂದು ಖರ್ಚು ಮಾಡುತ್ತಿರುವುದು ಯಾವ ಸಾಧನೆಗಾಗಿ ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಜನರಿಗೆ ತೋರಿಸಲು ಒಂದೇ ಒಂದು ದೊಡ್ಡ ಸಾಧನೆಯೂ ಇಲ್ಲದ ಸಂದರ್ಭದಲ್ಲಿ ವೈಫಲ್ಯಗಳನ್ನೇ ಸಾಧನೆಗಳೆಂದು ಬಿಂಬಿಸಲು ಈ ಸಂಭ್ರಮ ನಡೆಸಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಪ್ರತಿಯೊಂದು ವರ್ಗಕ್ಕೂ ದ್ರೋಹ: ಆರೋಪ
ರಾಜ್ಯದ ವಾಸ್ತವ ಚಿತ್ರಣ ನೋಡಿದರೆ ಪ್ರತಿಯೊಂದು ವರ್ಗಕ್ಕೂ ಸರ್ಕಾರ ದ್ರೋಹ ಮಾಡಿದೆ ಎಂದು ಆರೋಪಿಸಿರುವ ಅಶೋಕ್, ಮಹಿಳೆಯರು ಗೃಹಲಕ್ಷ್ಮಿ ಹಣಕ್ಕಾಗಿ ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ. ಕಚೇರಿ ಹಾಗೂ ಬ್ಯಾಂಕ್‌ಗಳ ಬಾಗಿಲು ತಟ್ಟುವಂತಾಗಿದೆ ಎಂದು ಟೀಕಿಸಿದ್ದಾರೆ.
ಯುವಜನತೆಗೆ ಉದ್ಯೋಗ ಸಿಗಬೇಕಾದರೆ ಅರ್ಹತೆಗಿಂತ ಲಂಚವೇ ಮುಖ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಲಜ್ಜೆಗೇಡಿತನದ ಆಡಳಿತ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿದ್ಯಾರ್ಥಿಗಳಿಗೆ ಸಮಯಕ್ಕೆ ಪಠ್ಯಪುಸ್ತಕಗಳು ಸಿಗುತ್ತಿಲ್ಲ. ಶಾಲಾ ಕೊಠಡಿಗಳು ಸೋರುವ ಹಾಗೂ ಕುಸಿಯುವ ಸ್ಥಿತಿಯಲ್ಲಿವೆ. ಕಳಪೆ ಗುಣಮಟ್ಟದ ಶೂ–ಸಾಕ್ಸ್‌ಗಳು ಒಂದೇ ದಿನಕ್ಕೆ ಹರಿದುಹೋಗುವಂತಿವೆ ಎಂದು ಅವರು ಆರೋಪಿಸಿದ್ದಾರೆ.
ಬೆಳೆನಷ್ಟದಿಂದ ಕಂಗಾಲಾಗಿರುವ ರೈತರಿಗೆ ಬರ ಪರಿಹಾರವೂ ಇಲ್ಲ, ಸರ್ಕಾರದ ಸ್ಪಂದನೆಯೂ ಇಲ್ಲ ಎಂದು ಅಶೋಕ್ ಹೇಳಿದ್ದಾರೆ. ವೃದ್ಧರು, ವಿಧವೆಯರು ಹಾಗೂ ಅಂಗವಿಕಲರಿಗೆ ಆಸರೆಯಾಗಿದ್ದ ಪಿಂಚಣಿಗೂ ಕತ್ತರಿ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
ಮಧ್ಯಮ ವರ್ಗದ ಜನರು ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಹಾಗೂ ತೆರಿಗೆಗಳ ಹೊರೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶ್ರೀಸಾಮಾನ್ಯನ ಬದುಕು ದುಬಾರಿಯಾಗಿದೆ ಎಂದು ಹೇಳಿದ್ದಾರೆ.
‘ಬ್ರ್ಯಾಂಡ್ ಬೆಂಗಳೂರು ಅಲ್ಲ, ಬ್ರೋಕನ್ ಬೆಂಗಳೂರು’
ಬೆಂಗಳೂರಿನ ಸ್ಥಿತಿಯನ್ನೂ ಟೀಕಿಸಿರುವ ಪ್ರತಿಪಕ್ಷ ನಾಯಕ, ರಸ್ತೆಯಲ್ಲಿ ಗುಂಡಿಗಳು, ರಸ್ತೆಯಂಚಿನಲ್ಲಿ ಕಸದ ರಾಶಿ ಕಂಡುಬರುತ್ತಿದೆ. ಹೇಳಿದ್ದು ‘ಬ್ರ್ಯಾಂಡ್ ಬೆಂಗಳೂರು’, ಆದರೆ ಕೊಟ್ಟಿದ್ದು ‘ಬ್ರೋಕನ್ ಬೆಂಗಳೂರು’ ಎಂದು ವ್ಯಂಗ್ಯವಾಡಿದ್ದಾರೆ.
“ಜನರ ಬದುಕು ಕತ್ತಲಲ್ಲಿದ್ದರೆ, ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಾತ್ರ ದೀಪಾಲಂಕಾರ ಮಾಡಲಾಗುತ್ತಿದೆ. ರಾಜ್ಯಕ್ಕೆ ಬೇಕಾಗಿರುವುದು ಅಭಿವೃದ್ಧಿಯ ಬೆಳಕು. ಆದರೆ ಸರ್ಕಾರ ನೀಡುತ್ತಿರುವುದು ವೇದಿಕೆಯ ಥಳಕು” ಎಂದು ಅಶೋಕ್ ಟೀಕಿಸಿದ್ದಾರೆ.
ಯುವಕರಿಗೆ ಉದ್ಯೋಗ ಬೇಕಾಗಿದ್ದರೆ ಸರ್ಕಾರ ಜಾಹೀರಾತು ನೀಡುತ್ತಿದೆ. ರೈತರಿಗೆ ಪರಿಹಾರ ಬೇಕಾಗಿದ್ದರೆ ಸಮಾವೇಶ ನಡೆಸಲಾಗುತ್ತಿದೆ. ಮಹಿಳೆಯರಿಗೆ ಸಮಯಕ್ಕೆ ಹಣ ಬೇಕಾಗಿದ್ದರೆ ಫೋಟೋಶೂಟ್ ಮಾಡಲಾಗುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ವಾಸ್ತವದ ಕತ್ತಲೆಯನ್ನು ಮರೆಮಾಚಲು ವೇದಿಕೆ ಮತ್ತು ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಸಾಧನೆಯ ಶೂನ್ಯತೆಯನ್ನು ಮುಚ್ಚಿಹಾಕಲು ಪ್ರಚಾರದ ಆರ್ಭಟ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
‘ಕೆಲಸ ಶೂನ್ಯ, ಪ್ರಚಾರ ಭರಪೂರ’
“ಸಾಧನೆ ತೋರಿಸಲು ಆಗಲಿಲ್ಲ, ಸಿಂಗಾರ ತೋರಿಸುತ್ತಿದ್ದೀರಾ. ಅಭಿವೃದ್ಧಿ ತೋರಿಸಲು ಆಗಲಿಲ್ಲ, ದೀಪಾಲಂಕಾರ ತೋರಿಸುತ್ತಿದ್ದೀರಾ. ಆಡಳಿತ ತೋರಿಸಲು ಆಗಲಿಲ್ಲ, ಆಡಂಬರ ತೋರಿಸುತ್ತಿದ್ದೀರಾ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಅಶೋಕ್ ಪ್ರಶ್ನಿಸಿದ್ದಾರೆ.
“ಕೆಲಸ ಶೂನ್ಯ–ಪ್ರಚಾರ ಭರಪೂರ. ಸಾಧನೆ ಶೂನ್ಯ–ಸಡಗರ ಭರ್ಜರಿ. ಜನರ ಸಂಕಷ್ಟ ಅಪಾರ–ಸರ್ಕಾರದ ಸಂಭ್ರಮ ಅದ್ದೂರಿ” ಎಂದು ಅವರು ಟೀಕಿಸಿದ್ದಾರೆ.
ರಾಜ್ಯ ಬೆಳಗಲಿಲ್ಲ, ಆದರೆ ಸರ್ಕಾರದ ವೇದಿಕೆ ಬೆಳಗಿತು. ಜನರ ಬದುಕು ಬದಲಾಗಲಿಲ್ಲ, ಆದರೆ ಸರ್ಕಾರದ ಪ್ರಚಾರ ಕಂಗೊಳಿಸಿತು ಎಂದು ಅಶೋಕ್ ಆರೋಪಿಸಿದ್ದಾರೆ.
“ಇದು ಶತದಿನೋತ್ಸವವಲ್ಲ, ಸಾಧನೆಯ ಶೂನ್ಯತೆಯನ್ನು ದೀಪಾಲಂಕಾರದ ಹಿಂದೆ ಮುಚ್ಚುವ ವ್ಯರ್ಥ ಪ್ರದರ್ಶನ” ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.