
ಬೆಂಗಳೂರು, 10 ಸೆಪ್ಟೆಂಬರ್(ಹಿ.ಸ.)
ಆ್ಯಂಕರ್:
ದೇವನಹಳ್ಳಿ ಏರೋಸ್ಪೇಸ್ ಪಾರ್ಕ್ನಲ್ಲಿ ಆರಂಭಗೊಂಡಿರುವ ಎಂಎಸ್ಎಂಇ ತಂತ್ರಜ್ಞಾನ ಕೇಂದ್ರವು ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಕೈಗಾರಿಕಾ ವಲಯದ ಅಗತ್ಯಗಳಿಗೆ ಅನುಗುಣವಾದ ಆಧುನಿಕ ಕೌಶಲ್ಯ ತರಬೇತಿ ನೀಡುವುದರ ಜತೆಗೆ, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಅತ್ಯಾಧುನಿಕ ತಂತ್ರಜ್ಞಾನ,
ವಿನ್ಯಾಸ ಹಾಗೂ ಪರೀಕ್ಷಾ ಸೌಲಭ್ಯಗಳನ್ನು ಒದಗಿಸಲಿದೆ ಎಂದು ಕರ್ನಾಟಕ ಸರ್ಕಾರದ ಎಂಎಸ್ಎಂಇ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ತಿಳಿಸಿದರು.
ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಎಂಎಸ್ಎಂಇ ಸಚಿವಾಲಯವು ಸುಮಾರು ₹156 ಕೋಟಿ ವೆಚ್ಚದಲ್ಲಿ, ರಾಜ್ಯ ಸರ್ಕಾರ ಒದಗಿಸಿರುವ 10 ಎಕರೆ ಜಾಗದಲ್ಲಿ ಈ ಕೇಂದ್ರವನ್ನು ಸ್ಥಾಪಿಸಿದೆ. ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ ಹಾಗೂ ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳಿಗೆ ಕೇಂದ್ರವು ವಿಶೇಷ ಒತ್ತು ನೀಡಲಿದೆ ಎಂದರು.
ಕೇಂದ್ರದಲ್ಲಿ ಸರ್ಫೇಸ್ ಮೌಂಟ್ ಟೆಕ್ನಾಲಜಿ , ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್, CNC ಮಷಿನಿಂಗ್, ವಿನ್ಯಾಸ, ಪ್ರೋಟೋಟೈಪಿಂಗ್ ಹಾಗೂ ಅಡ್ವಾನ್ಸ್ಡ್ ಟೆಸ್ಟಿಂಗ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳಿವೆ.
ದುಬಾರಿ ಯಂತ್ರೋಪಕರಣ ಮತ್ತು ಪರೀಕ್ಷಾ ಪ್ರಯೋಗಾಲಯಗಳಲ್ಲಿ ಪ್ರತ್ಯೇಕವಾಗಿ ಹೂಡಿಕೆ ಮಾಡಲು ಸಾಧ್ಯವಾಗದ ಸಣ್ಣ ಉದ್ಯಮಗಳು ಈ ಸೌಲಭ್ಯಗಳನ್ನು ಬಳಸಿಕೊಂಡು ಉತ್ಪನ್ನದ ಗುಣಮಟ್ಟ ಹಾಗೂ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದರು.
ಕೇಂದ್ರವು ಪ್ರತಿವರ್ಷ ಸುಮಾರು 10 ಸಾವಿರ ಮಂದಿಗೆ ತರಬೇತಿ ನೀಡುವ ಸಾಮರ್ಥ್ಯ ಹೊಂದಿದ್ದು, ಕೈಗಾರಿಕೆಗಳಿಗೆ ಅಗತ್ಯವಿರುವ ಪ್ರಾಯೋಗಿಕ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಲಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಯುವ ವೃತ್ತಿಪರರಿಗೆ ನವೀನ ತಂತ್ರಜ್ಞಾನಗಳ ನೇರ ಅನುಭವ ದೊರೆಯಲಿದೆ ಎಂದರು.
ದೇವನಹಳ್ಳಿ–ಬೆಂಗಳೂರು ವಲಯದಲ್ಲಿ ಏರೋಸ್ಪೇಸ್, ರಕ್ಷಣಾ ಉತ್ಪಾದನೆ, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳು ವೇಗವಾಗಿ ಬೆಳೆಯುತ್ತಿವೆ. ಈ ಹಿನ್ನೆಲೆಯಲ್ಲಿ ತಂತ್ರಜ್ಞಾನ ಕೇಂದ್ರವು ವಿದ್ಯಾರ್ಥಿಗಳು, ಎಂಎಸ್ಎಂಇಗಳು ಮತ್ತು ದೊಡ್ಡ ಕೈಗಾರಿಕೆಗಳ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಸಿಂಧೂರಿ ಹೇಳಿದರು.
ತಂತ್ರಜ್ಞಾನ ಅಳವಡಿಕೆ, ಕ್ಲಸ್ಟರ್ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ, ಗುಣಮಟ್ಟ, ನವೋದ್ಯಮ, ಡಿಜಿಟಲೀಕರಣ, ಮಾರುಕಟ್ಟೆ ಪ್ರವೇಶ ಹಾಗೂ ಹಸಿರು ಉತ್ಪಾದನೆ ಮುಂತಾದವು ಮುಂದಿನ ಹಂತದ ಎಂಎಸ್ಎಂಇ ಅಭಿವೃದ್ಧಿಯಲ್ಲಿ ಪ್ರಮುಖವಾಗಲಿವೆ ಎಂದರು.
ದೇವನಹಳ್ಳಿ ಎಂಎಸ್ಎಂಇ ತಂತ್ರಜ್ಞಾನ ಕೇಂದ್ರವನ್ನು ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು, ಕೈಗಾರಿಕಾ ವಲಯದ ಪ್ರತಿನಿಧಿಗಳು ಹಾಗೂ ಉದ್ಯಮಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R