
ಬೆಂಗಳೂರು, 10 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಸಂಘಟನಾ ಸೃಜನ ಅಭಿಯಾನದ ಭಾಗವಾಗಿ ಕರ್ನಾಟಕದ 35 ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಆದೇಶ ಹೊರಡಿಸಿದೆ. ಕಾಂಗ್ರೆಸ್ ಅಧ್ಯಕ್ಷರ ಅನುಮೋದನೆಯೊಂದಿಗೆ ಈ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಕ್ಷದ ಸಂಘಟನೆ ಬಲಪಡಿಸುವ ಉದ್ದೇಶದಿಂದ ಕೈಗೊಂಡಿರುವ ಸಂಘಟನಾ ಸೃಜನ ಅಭಿಯಾನದಡಿ ಪ್ರತಿ ಜಿಲ್ಲೆಗೆ ಎಐಸಿಸಿ ವೀಕ್ಷಕರನ್ನು ನಿಯೋಜಿಸಲಾಗಿತ್ತು. ವೀಕ್ಷಕರು ಆಯಾ ಜಿಲ್ಲೆಗಳ ಪಕ್ಷದ ಪದಾಧಿಕಾರಿಗಳು ಹಾಗೂ ವಿವಿಧ ಹಂತದ ಮುಖಂಡರು ಮತ್ತು ಇತರ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಸಮಗ್ರ ವರದಿ ಸಲ್ಲಿಸಿದ್ದರು. ಈ ವರದಿಗಳ ಬಳಿಕ ವೀಕ್ಷಕರೊಂದಿಗೆ ಪ್ರತ್ಯೇಕ ಚರ್ಚೆ ನಡೆಸಿ ಜಿಲ್ಲಾ ಅಧ್ಯಕ್ಷರ ನೇಮಕಾತಿಯನ್ನು ಅಂತಿಮಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ದಯಾನಂದ ಎಸ್. ಪಾಟೀಲ, ಬೆಂಗಳೂರು ಉತ್ತರಕ್ಕೆ ಅಬ್ದುಲ್ ವಾಜಿದ್, ಬೆಂಗಳೂರು ದಕ್ಷಿಣಕ್ಕೆ ಓ. ಮಂಜುನಾಥ್, ಬೆಂಗಳೂರು ಪೂರ್ವಕ್ಕೆ ಡಿ.ಕೆ. ಮೋಹನ್ ಬಾಬು, ಬೆಂಗಳೂರು ಪಶ್ಚಿಮಕ್ಕೆ ಹನುಮಂತರಾಯಪ್ಪ ಹಾಗೂ ಬೆಂಗಳೂರು ಕೇಂದ್ರಕ್ಕೆ ಜೆ. ಸರವಣನ್ ಅವರನ್ನು ನೇಮಕ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸಿ. ಪ್ರಸನ್ನ ಕುಮಾರ್, ಚಿಕ್ಕೋಡಿಗೆ ಲಕ್ಷ್ಮಣರಾವ್ ಚಿಂಗಳೆ, ಬೆಳಗಾವಿ ನಗರಕ್ಕೆ ಸಲಾವುದ್ದೀನ್ ಸಿ. ಸಲೀಂ ಬಿ. ಖತೀಬ್ (ರಾಜಾಸಲೀಂ), ಬೆಳಗಾವಿ ಗ್ರಾಮಾಂತರಕ್ಕೆ ಬಸವರಾಜ ಶೇಗಾವಿ ಅವರನ್ನು ನೇಮಿಸಲಾಗಿದೆ.
ಬಳ್ಳಾರಿ ನಗರಕ್ಕೆ ಅಬ್ದುಲ್ ಮನ್ನಾನ್ ಸೈಟ್, ಬಳ್ಳಾರಿ ಗ್ರಾಮಾಂತರಕ್ಕೆ ಕೆ. ಮಲ್ಲಿಕಾರ್ಜುನ, ಬೀದರ್‌ಗೆ ಅಲ್ಲಂ ಪ್ರಶಾಂತ್, ಚಾಮರಾಜನಗರಕ್ಕೆ ಜೆ. ಯೋಗೇಶ್, ಚಿಕ್ಕಮಗಳೂರಿಗೆ ಎಚ್.ಪಿ. ಮಂಜೇಗೌಡ, ದಕ್ಷಿಣ ಕನ್ನಡಕ್ಕೆ ಪದ್ಮರಾಜ್ ಆರ್. ಪೂಜಾರಿ ಅವರನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ದಾವಣಗೆರೆಗೆ ಇಬ್ರಾಹಿಂ ಖಲೀಲುಲ್ಲಾ, ಧಾರವಾಡ ಗ್ರಾಮಾಂತರಕ್ಕೆ ಚಂದ್ರಶೇಖರ ಜುಟ್ಟಲ್, ಗದಗಕ್ಕೆ ವಾಸಣ್ಣ ಕುರಡಗಿ, ಕಲಬುರಗಿಗೆ ಡಾ. ಕಿರಣ್ ಎ. ದೇಶಮುಖ್, ಹಾಸನಕ್ಕೆ ಶಶಿಧರ್ ಜಿ.ಬಿ., ಹಾವೇರಿಗೆ ಸಂಜೀಬ್ ಕುಮಾರ್ ನೀರಲಗಿ ಹಾಗೂ ಹುಬ್ಬಳ್ಳಿ-ಧಾರವಾಡ ನಗರಕ್ಕೆ ಸದಾನಂದ ವಿ. ದಂಗನವರ ಅವರನ್ನು ನೇಮಿಸಲಾಗಿದೆ.
ಕೊಡಗು ಜಿಲ್ಲೆಗೆ ಧರ್ಮಜ ಉತ್ತಪ್ಪ, ಕೋಲಾರಕ್ಕೆ ಎನ್. ನಾರಾಯಣಸ್ವಾಮಿ, ಕೊಪ್ಪಳಕ್ಕೆ ಎಂ. ಮಲ್ಲಿಕಾರ್ಜುನ ನಾಗಪ್ಪ, ಮಂಡ್ಯಕ್ಕೆ ಕುಮಾರ್ ಕೊಪ್ಪ, ಮೈಸೂರು ನಗರಕ್ಕೆ ಬೀರಿಹುಂಡಿ ಬಸವಣ್ಣ, ಮೈಸೂರು ಗ್ರಾಮಾಂತರಕ್ಕೆ ಆರ್. ಮೂರ್ತಿ ಅವರನ್ನು ನೇಮಕ ಮಾಡಲಾಗಿದೆ.
ರಾಯಚೂರಿಗೆ ಕೆ. ಶಾಂತಪ್ಪ, ರಾಮನಗರಕ್ಕೆ ಸಿ.ಎನ್. ವೆಂಕಟೇಶ್, ಶಿವಮೊಗ್ಗಕ್ಕೆ ಎಚ್.ಸಿ. ಯೋಗೇಶ್, ಉಡುಪಿಗೆ ಕಿಶನ್ ಕುಮಾರ್ ಹೆಗ್ಡೆ, ಉತ್ತರ ಕನ್ನಡಕ್ಕೆ ಗಜಾನನ ತಿಮ್ಮ ನಾಯ್ಕ್ ಹಾಗೂ ಯಾದಗಿರಿಗೆ ಬಸಾ ರೆಡ್ಡಿ ಎಂ. ಪಾಟೀಲ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.