
ಗದಗ, 01 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ಬರ ಪರಿಸ್ಥಿತಿಯ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನುಸಾರ ಬರಪೀಡಿತ ತಾಲ್ಲೂಕುಗಳನ್ನು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೈತರಿಗೆ ಭರವಸೆ ನೀಡಿದರು.
ಮಂಗಳವಾರ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕದಾಂಪೂರ, ಹುಲಕೋಟಿ ಹಾಗೂ ಕುರ್ತಕೋಟಿ ಗ್ರಾಮಗಳಿಗೆ ಭೇಟಿ ನೀಡಿದ ಅವರು, ರೈತರ ಜಮೀನುಗಳಲ್ಲಿ ಬೆಳೆ ಪರಿಸ್ಥಿತಿ ಪರಿಶೀಲಿಸಿ ರೈತರೊಂದಿಗೆ ಚರ್ಚಿಸಿದರು. ಸೂರ್ಯಕಾಂತಿ, ಜೋಳ, ಹತ್ತಿ ಹಾಗೂ ಕಡಲೆಕಾಯಿ ಬೆಳೆಗಳನ್ನು ವೀಕ್ಷಿಸಿ, ಬೆಳೆ ನಷ್ಟದ ಕುರಿತು ಮಾಹಿತಿ ಪಡೆದರು.
ಈ ಬಾರಿ ಮಳೆ ಕೊರತೆಯಿಂದ ಬೆಳೆಗಳು ಹಾನಿಯಾಗಿದ್ದು, ಜಿಲ್ಲೆಯ ಎಲ್ಲ ತಾಲ್ಲೂಕುಗಳೂ ಬರ ಪರಿಸ್ಥಿತಿಯಿಂದ ತತ್ತರಿಸಿವೆ. ಬಾಕಿ ಇರುವ ಆರು ತಾಲ್ಲೂಕುಗಳನ್ನೂ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ರೈತರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಶಿವಕುಮಾರ್, “ಬರ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇನ್ನಷ್ಟು ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಅಧ್ಯಯನ ಮಾಡಲಾಗುವುದು. ಬಳಿಕ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ, ಅದರ ಮಾರ್ಗಸೂಚಿಯಂತೆ ಬರಪೀಡಿತ ತಾಲ್ಲೂಕು ಘೋಷಣೆ ಮಾಡಲಾಗುವುದು” ಎಂದು ತಿಳಿಸಿದರು.
‘ತೇಗದ ಸಿರಿ’ ಯೋಜನೆ ಪರಿಶೀಲನೆ
ಕುರ್ತಕೋಟಿಯಲ್ಲಿ ರೈತ ಜಿ.ಎನ್. ಪಾಟೀಲ ಅವರ ಜಮೀನಿಗೆ ಭೇಟಿ ನೀಡಿದ ಶಿವಕುಮಾರ್, ಜಮೀನಿನ ಬದುಗಳಲ್ಲಿ ಬೆಳೆಸಲಾಗುತ್ತಿರುವ ತೇಗದ ಮರಗಳನ್ನು ಪರಿಶೀಲಿಸಿದರು. ಸರ್ಕಾರದ ‘ತೇಗದ ಸಿರಿ’ ಯೋಜನೆಯ ಅನುಷ್ಠಾನದ ಕುರಿತು ರೈತರೊಂದಿಗೆ ಚರ್ಚಿಸಿದರು.
ನಂತರ ಕೃಷಿ ಕೂಲಿ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ ಅವರು, ಅವರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಕಾರ್ಮಿಕರು ನರೇಗಾ ಯೋಜನೆಯಡಿ ಹೆಚ್ಚಿನ ಕೆಲಸ ದೊರೆಯುತ್ತಿತ್ತು. ಇದೀಗ ವಿಬಿ ಗ್ರಾಮ್ ಜಿ ಯೋಜನೆಯಡಿ ಹೆಚ್ಚಿನ ಉದ್ಯೋಗ ಒದಗಿಸಬೇಕು ಎಂದು ಮನವಿ ಮಾಡಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಸಿಎಂ
ಕೂಲಿ ಕಾರ್ಮಿಕರೊಂದಿಗೆ ಮಾತನಾಡಿದ ಶಿವಕುಮಾರ್, ಸರ್ಕಾರದ ಗ್ಯಾರಂಟಿ ಯೋಜನೆಗಳು ಸರಿಯಾಗಿ ತಲುಪುತ್ತಿವೆಯೇ ಎಂದು ವಿಚಾರಿಸಿದರು. ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಮರುಪರಿಶೀಲನೆ ಸಂದರ್ಭದಲ್ಲಿ ಫಲಾನುಭವಿಗಳು ಸರಿಯಾದ ಮಾಹಿತಿಯನ್ನು ನೀಡಬೇಕು ಎಂದು ಕಿವಿಮಾತು ಹೇಳಿದರು.
ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ವೇಳೆ ಫಲಾನುಭವಿಗಳು ತಮ್ಮದೇ ದೂರವಾಣಿ ಸಂಖ್ಯೆಯನ್ನು ನೀಡಬೇಕು. ಮೂರನೇ ವ್ಯಕ್ತಿಯ ದೂರವಾಣಿ ಸಂಖ್ಯೆಯನ್ನು ನೀಡಬಾರದು ಎಂದು ಸೂಚಿಸಿದರು.
ಗ್ಯಾರಂಟಿ ಯೋಜನೆಗಳು ತಮ್ಮ ಬದುಕಿಗೆ ನೆರವಾಗುತ್ತಿವೆ ಎಂದು ಕೂಲಿ ಕಾರ್ಮಿಕರು ಮುಖ್ಯಮಂತ್ರಿಗಳಿಗೆ ತಿಳಿಸಿದರು. ಪ್ರತಿ ತಿಂಗಳು 10 ಕೆ.ಜಿ. ಅಕ್ಕಿ ದೊರೆಯುತ್ತಿದ್ದು, ಗೃಹಲಕ್ಷ್ಮಿ ಯೋಜನೆಯ ಹಣ ಹಾಗೂ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸಿಗುತ್ತಿದೆ. ಕೆಲಸ ದೊರೆಯದ ಸಂದರ್ಭದಲ್ಲೂ ಈ ಯೋಜನೆಗಳು ಕುಟುಂಬ ನಿರ್ವಹಣೆಗೆ ನೆರವಾಗುತ್ತಿವೆ ಎಂದು ಅವರು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.