ಕೆಪಿಎಸ್ಸಿ ಹಗರಣ ಆರೋಪ: ಆರ್. ಅಶೋಕ್ಗೆ ಪ್ರಿಯಾಂಕ್ ಖರ್ಗೆ ತಿರುಗೇಟು
KPSC ಹಗರಣದ ಆರೋಪ ತಳ್ಳಿಹಾಕಿದ ಸಚಿವ
ಕೆಪಿಎಸ್ಸಿ ಹಗರಣ ಆರೋಪ: ಆರ್. ಅಶೋಕ್ಗೆ ಪ್ರಿಯಾಂಕ್ ಖರ್ಗೆ ತಿರುಗೇಟು


ಕಲಬುರಗಿ, 01 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಕೆಪಿಎಸ್‌ಸಿ ಹಗರಣದ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿದ್ದಾರೆ ಎಂಬ ಬಿಜೆಪಿ ನಾಯಕ ಆರ್. ಅಶೋಕ್ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ತಿರುಗೇಟು ನೀಡಿದ್ದಾರೆ.

ಕಲಬುರಗಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ಕ್ರಿಕೆಟ್ ರೂಪಕ ಬಳಸಿ ವಾಗ್ದಾಳಿ ನಡೆಸಿದರು. “ಬಿಜೆಪಿಯ ಬೌಲರ್‌ಗಳು ಫುಲ್ ಟಾಸ್ ಮತ್ತು ನೋ ಬಾಲ್ ಹಾಕುತ್ತಿದ್ದಾರೆ. ಇದು ನಮಗೆ ಪ್ರೀ ಹಿಟ್ ಇದ್ದಂತೆ. ಈ ಪಂದ್ಯದಲ್ಲಿ ಯಾರೇ ಅಂಪೈರ್ ಆಗಿದ್ದರೂ ಬಿಜೆಪಿಯವರೇ ಔಟ್ ಆಗುತ್ತಾರೆ” ಎಂದು ವ್ಯಂಗ್ಯವಾಡಿದರು.

ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ ಅವರು, ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ತಾವು ಹೇಳಿದ್ದೇನೆ ಎಂದು ಆರೋಪಿಸುವ ಅಭ್ಯರ್ಥಿಯೊಬ್ಬರು ಧೈರ್ಯವಾಗಿ ಮುಂದೆ ಬಂದು ಹೇಳಲಿ ಎಂದು ಸವಾಲು ಹಾಕಿದರು.

ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದ ಖರ್ಗೆ, ಬೀದರ್‌ನ ಬಸವರಾಜ್ ಕನ್ನಾಳೆ ಹಾಕಿರುವ ಶಾಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಗಲ ಮೇಲಿರುವ ಶಾಲು ಒಂದೇ ಆಗಿದೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರೊಂದಿಗೆ ಕೆಲವರು ಹೊಂದಿರುವ ಸಂಬಂಧವನ್ನು ಪ್ರಶ್ನಿಸಿದರು. ಬಿಜೆಪಿ ನಾಯಕರೊಂದಿಗೆ ಸಂಬಂಧ ಇಟ್ಟುಕೊಂಡು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಅಭ್ಯರ್ಥಿಗಳನ್ನು ರೆಸಾರ್ಟ್‌ಗೆ ಕರೆದೊಯ್ದು ಓಎಂಆರ್‌ ಮಾರ್ಕ್‌ಶೀಟ್ ತಿದ್ದುಪಡಿ ಮಾಡಲಾಗಿದೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿದರು.

“ಓಎಂಆರ್‌ ಮಾರ್ಕ್‌ಶೀಟ್ ಯಾರ ವಶದಲ್ಲಿರುತ್ತದೆ? ಅದು ಕೆಪಿಎಸ್‌ಸಿ ವಶದಲ್ಲಿರುತ್ತದೆ. ನಾನು ಅದರ ಸಂರಕ್ಷಕನಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೂ ಕೆಪಿಎಸ್‌ಸಿ ವಶದಲ್ಲಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರಿಗೆ ಇಷ್ಟು ಸಾಮಾನ್ಯ ಜ್ಞಾನವೂ ಇಲ್ಲವೇ?” ಎಂದು ಪ್ರಶ್ನಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande