
ನವದೆಹಲಿ, 01 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್;ಏಪ್ರಿಲ್–ಜೂನ್ 2026ರ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆ ಶೇ.7.8ರಷ್ಟು ಬೆಳವಣಿಗೆ ದಾಖಲಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿಯ ವೇಗವನ್ನು ಮುಂದುವರಿಸಲು ಆತ್ಮನಿರ್ಭರತೆ ಮತ್ತು ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡುವಂತೆ ದೇಶವಾಸಿಗಳಿಗೆ ಕರೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಪ್ರಧಾನಿ ಮೋದಿ, ಜಗತ್ತು ಯುದ್ಧ, ವಿವಿಧ ಬಿಕ್ಕಟ್ಟುಗಳು ಹಾಗೂ ಪೂರೈಕೆ ಸರಪಳಿ ಅಡಚಣೆಗಳಿಂದ ಬಳಲುತ್ತಿದ್ದರೂ ಭಾರತ ಉತ್ತಮ ಪ್ರಗತಿ ಸಾಧಿಸಿದೆ ಎಂದು ಹೇಳಿದರು. ಕೋವಿಡ್ ನಂತರ ಜಾಗತಿಕ ಸ್ಥಿರತೆ ಕುಂಠಿತಗೊಂಡಿದ್ದರೂ, ದೇಶದ ನೀತಿಗಳು, ಉದ್ದೇಶಗಳು ಹಾಗೂ ಜನರ ಸಾಮರ್ಥ್ಯದಿಂದ ಭಾರತ ಉತ್ತಮ ಸಾಧನೆ ಮಾಡಿದೆ ಎಂದರು.
ಭಾರತದ ಪ್ರಗತಿ ಕುರಿತು ನಿರಾಶೆ ಮೂಡಿಸುವವರು ಸುಳ್ಳಿನ ಪ್ರತಿಧ್ವನಿ ಹರಡುತ್ತಿದ್ದಾರೆ ಎಂದು ಟೀಕಿಸಿದ ಅವರು, ಇಂತಹ ಸವಾಲುಗಳ ನಡುವೆಯೂ ದೇಶ ಶೇ.7.8ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಿದೆ ಎಂದು ಹೇಳಿದರು.
ಅಭಿವೃದ್ಧಿಯ ವೇಗ ಕಾಯ್ದುಕೊಳ್ಳಲು ಆತ್ಮನಿರ್ಭರತೆ ಅಗತ್ಯ. ‘ಸ್ಥಳೀಯಕ್ಕೆ ಧ್ವನಿ’ ಅಭಿಯಾನವನ್ನು ಮತ್ತಷ್ಟು ಬಲಪಡಿಸಿ, ಸ್ಥಳೀಯ ಹಾಗೂ ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಎಂದು ಮೋದಿ ಕರೆ ನೀಡಿದರು. ಅನಗತ್ಯ ವಿದೇಶ ಪ್ರವಾಸ, ವಿದೇಶದಲ್ಲಿ ಮದುವೆ ಹಾಗೂ ಅಗತ್ಯವಿಲ್ಲದಿದ್ದರೆ ಚಿನ್ನ ಖರೀದಿಸುವುದನ್ನು ತಪ್ಪಿಸುವಂತೆ ಮನವಿ ಮಾಡಿದರು.
ಸ್ವದೇಶಿ ಹಾಗೂ ಆತ್ಮನಿರ್ಭರತೆಗೆ ಹೆಚ್ಚಿನ ಒತ್ತು ನೀಡಿದಷ್ಟೂ ಭಾರತದ ಆರ್ಥಿಕತೆ ಮತ್ತಷ್ಟು ಬಲಗೊಳ್ಳಲಿದೆ. ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಯುವ ಪೀಳಿಗೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ಹಸ್ತಾಂತರಿಸುವ ಗುರಿ ಸಾಧಿಸಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ದೇಶದ ಪ್ರಗತಿಗೆ 140 ಕೋಟಿ ಜನರ ಒಗ್ಗಟ್ಟಿನ ಶಕ್ತಿ ಕಾರಣವಾಗಿದ್ದು, ಸರ್ಕಾರದ ನೀತಿ ಮತ್ತು ಉದ್ದೇಶಗಳು ಸರಿಯಾದ ದಿಕ್ಕಿನಲ್ಲಿವೆ. ದೇಶದ ಯುವಕರ ಕನಸುಗಳನ್ನು ನನಸಾಗಿಸಲು ಪ್ರತಿಯೊಬ್ಬರೂ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಪ್ರಧಾನಿ ಕರೆ ನೀಡಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.