
ಹುಬ್ಬಳ್ಳಿ, 09 ಆಗಸ್ಟ್ (ಹಿ.ಸ.):
ಆ್ಯಂಕರ್:
ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡಲು ವಿಶೇಷ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಉತ್ತರ ಕರ್ನಾಟಕ ಪ್ರತಿಭಾವಂತ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷಾ ಹಿತರಕ್ಷಣಾ ಸಮಿತಿಯ ರಾಜ್ಯಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಿಯುಸಿಯಿಂದ ಪದವಿ ಹಂತದವರೆಗೆ ಸಮಗ್ರ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವುದು ಯೋಜನೆಯ ಮೊದಲ ಗುರಿಯಾಗಿದೆ ಎಂದರು.
ಸಂಸ್ಥೆಗೆ ಸೂಕ್ತ ಸ್ಥಳ ಆಯ್ಕೆ, ಶಿಕ್ಷಣ ಮಾದರಿ ಹಾಗೂ ಮೊದಲ ವರ್ಷದ ತರಬೇತಿ ಚಟುವಟಿಕೆಗಳನ್ನು ರೂಪಿಸಲು ತಜ್ಞರ ನೇತೃತ್ವದಲ್ಲಿ ಸಣ್ಣ ಕ್ರಿಯಾ ಸಮಿತಿ ರಚಿಸಲಾಗುವುದು. ಸಂಸ್ಥೆ ನಿರ್ಮಾಣ ಮತ್ತು ಮೂಲಸೌಕರ್ಯಕ್ಕೆ ಅಗತ್ಯವಿರುವ ನಿಧಿ ಸಂಗ್ರಹಿಸಲು ಪ್ರತ್ಯೇಕ ಸಮಿತಿಯನ್ನೂ ರಚಿಸಲಾಗುವುದು. ಮುಂದಿನ ಏಪ್ರಿಲ್ ವೇಳೆಗೆ ತರಬೇತಿ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲೂ ವಿಸ್ತರಣೆ
ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಲಹಂಕ ಬಳಿ ಉತ್ತರ ಕರ್ನಾಟಕ ಒಕ್ಕೂಟಕ್ಕೆ ನೀಡಿದ್ದ ಮೂರು ಎಕರೆ ಜಾಗವನ್ನು ಬಳಸಿಕೊಂಡು ಎರಡನೇ ಹಂತದಲ್ಲಿ ಬೆಂಗಳೂರಿನಲ್ಲೂ ತರಬೇತಿ ಕೇಂದ್ರ ಆರಂಭಿಸುವ ಯೋಜನೆ ಇದೆ. ಬೆಂಗಳೂರಿನ ಅನುಭವಿ ಬೋಧಕರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಜ್ಞರ ಸೇವೆ ಪಡೆಯಲಾಗುವುದು ಎಂದರು.
ಮುಂದಿನ ಹತ್ತು ವರ್ಷಗಳಲ್ಲಿ ಈ ಸಂಸ್ಥೆಯನ್ನು ದೇಶದಲ್ಲೇ ಪ್ರಸಿದ್ಧವಾದ ಅತ್ಯುನ್ನತ ಶಿಕ್ಷಣ ಸಂಸ್ಥೆಯಾಗಿ ಬೆಳೆಸುವ ಗುರಿ ಹೊಂದಲಾಗಿದೆ. ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಯೋಜನೆಯನ್ನು ತಡೆಹಿಡಿಯದೆ ಸವಾಲುಗಳನ್ನು ಎದುರಿಸಿ ಮುನ್ನಡೆಯಬೇಕು ಎಂದು ಬೊಮ್ಮಾಯಿ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.