28ರ ಗುರಿಯತ್ತ ಕಾಶಪ್ಪನವರ ಚಿತ್ತ: ಬರ-ಪ್ರವಾಹ ಅಧ್ಯಯನದ ಜತೆಗೆ ಪಕ್ಷ ಸಂಘಟನೆಗೂ ಆದ್ಯತೆ
ಬಾಗಲಕೋಟೆ, 09 ಆಗಸ್ಟ್ (ಹಿ.ಸ.) ಆ್ಯಂಕರ್ : ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಾಗಲಕೋಟೆ ಜಿಲ್ಲೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಚಿವ ವಿಜಯಾನಂದ ಕಾಶಪ್ಪನವರ ಅವರು, ಕಳೆದ ಮೂರ್ನಾಲ್ಕು ದಿನಗಳಿಂದ ಬರ ಹಾಗೂ ಪ್ರವಾಹ ಪರಿಸ್ಥಿತಿಯ ಅಧ್ಯಯನದ ಜತೆಗೆ ಧಾರ್ಮಿಕ ಕ್ಷೇತ್ರಗಳ ಭೇಟಿ ನಡೆ
ದೂರದೃಷ್ಟಿ


ಬಾಗಲಕೋಟೆ, 09 ಆಗಸ್ಟ್ (ಹಿ.ಸ.)

ಆ್ಯಂಕರ್ : ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಾಗಲಕೋಟೆ

ಜಿಲ್ಲೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಚಿವ ವಿಜಯಾನಂದ ಕಾಶಪ್ಪನವರ ಅವರು, ಕಳೆದ ಮೂರ್ನಾಲ್ಕು ದಿನಗಳಿಂದ ಬರ ಹಾಗೂ ಪ್ರವಾಹ ಪರಿಸ್ಥಿತಿಯ ಅಧ್ಯಯನದ ಜತೆಗೆ ಧಾರ್ಮಿಕ ಕ್ಷೇತ್ರಗಳ ಭೇಟಿ ನಡೆಸಿ ಗಮನ ಸೆಳೆದಿದ್ದಾರೆ. ಇದರ ಮಧ್ಯೆಯೇ ಪಕ್ಷದ ಸಂಘಟನೆಗೂ ಹೆಚ್ಚಿನ ಒತ್ತು ನೀಡುವ ಮೂಲಕ 2028ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸುವ ಸಂದೇಶವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಿದ್ದಾರೆ.

ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜಿಲ್ಲೆಗೆ ಆಗಮಿಸಿರುವ ಕಾಶಪ್ಪನವರ ಅವರು ಇಂದು ಕೂಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಎರಡನೇ ಬಾರಿಗೆ ಭೇಟಿ ನೀಡಿದ್ದು, ಪಕ್ಷದ ಸಂಘಟನೆಯ ವಿಚಾರದಲ್ಲಿ ತಮ್ಮ ಆಸಕ್ತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ನ ನೂತನ ಅಧ್ಯಕ್ಷರ ಆಯ್ಕೆ ಕುರಿತಂತೆ ಎಐಸಿಸಿ ವೀಕ್ಷಕ ಬೆಳ್ಳಯ್ಯ ನಾಯಕ್ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ ಎಂದು ಸ್ಥಳೀಯ ಪತ್ರಕರ್ತ ಮಲ್ಲಪ್ಪ ಹೊಸಮನಿ ತಿಳಿಸಿದರು.

ಸಚಿವ ಕಾಶಪ್ಪನವರ ಅವರ ದೂರದೃಷ್ಟಿ ಕುರಿತು ವಿಶ್ಲೇಷಣೆ ನೀಡಿರುವ ಅವರು,

ಪಕ್ಷದ ಕಚೇರಿಗೆ ಸಚಿವರ ನಿರಂತರ ಭೇಟಿ

ಸಾಮಾನ್ಯವಾಗಿ ಸಚಿವ ಸ್ಥಾನ ದೊರೆತ ಬಳಿಕ ಕೆಲವರು ಪಕ್ಷದ ಸಂಘಟನಾ ಚಟುವಟಿಕೆಗಳಿಂದ ದೂರ ಉಳಿಯುವ ಅಥವಾ ಪಕ್ಷದ ಕಚೇರಿಗಳತ್ತ ಹೆಚ್ಚಿನ ಗಮನ ನೀಡದಿರುವ ನಿದರ್ಶನಗಳಿವೆ. ಆದರೆ ಕಾಶಪ್ಪನವರ ಅವರು ಇದಕ್ಕೆ ಭಿನ್ನವಾಗಿ ನಡೆದುಕೊಂಡಿರುವುದು ಕಾಂಗ್ರೆಸ್ ಕಾರ್ಯಕರ್ತರ ಗಮನ ಸೆಳೆದಿದೆ.

ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸಚಿವರಾಗಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದ ಅವರು, ಇದೀಗ ಎರಡನೇ ಬಾರಿಗೆ ಪಕ್ಷದ ಕಚೇರಿಗೆ ಆಗಮಿಸಿದ್ದಾರೆ. ಪಕ್ಷದ ಸಂಘಟನೆ, ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಮುಖಂಡರು ಹಾಗೂ ಪಕ್ಷದ ಪ್ರಮುಖರೊಂದಿಗೆ ಚರ್ಚೆ ನಡೆಸಿದ್ದಾರೆ.

ಸಚಿವರ ಈ ನಡೆ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸಿದ್ದು, ಅಧಿಕಾರದ ಜತೆಗೆ ಸಂಘಟನೆಗೂ ಆದ್ಯತೆ ನೀಡುತ್ತಿದ್ದಾರೆ ಎಂಬ ಅಭಿಪ್ರಾಯ ಕಾಂಗ್ರೆಸ್ ಪಾಳಯದಲ್ಲಿ ವ್ಯಕ್ತವಾಗುತ್ತಿದೆ.

ಸಾಮರ್ಥ್ಯ ಇರುವವರಿಗೆ ಸ್ಥಾನ ನೀಡುವ ಮಾತು

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯ ಜತೆಗೆ ಪಕ್ಷದ ವಿವಿಧ ಮುಂಚೂಣಿ ಘಟಕಗಳಿಗೂ ಉತ್ಸಾಹಿ ಹಾಗೂ ಸಂಘಟನಾ ಸಾಮರ್ಥ್ಯ ಹೊಂದಿರುವ ಕಾರ್ಯಕರ್ತರನ್ನು ನೇಮಕ ಮಾಡುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಚಿಂತನೆ ನಡೆಯುತ್ತಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು 2028ರ ವಿಧಾನಸಭಾ ಚುನಾವಣೆಯಲ್ಲಿ ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಈಗಿನಿಂದಲೇ ಸಂಘಟನೆಗೆ ಒತ್ತು ನೀಡಬೇಕಾಗಿದೆ. ಪಕ್ಷದಲ್ಲಿ ಅಸಮಾಧಾನ, ಭಿನ್ನಮತ, ಆಂತರಿಕ ಪೈಪೋಟಿ ಇರುವುದು ಸಹಜ. ಆದರೆ ಇವೆಲ್ಲವನ್ನೂ ಮೀರಿ ಪಕ್ಷದ ಹಿತದೃಷ್ಟಿಯಿಂದ ಸಂಘಟನೆಗೆ ಆದ್ಯತೆ ನೀಡಲಾಗುವುದು ಎಂಬ ಸಂದೇಶವನ್ನು ಸಚಿವರು ನೀಡಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 30ಕ್ಕೂ ಅಧಿಕ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅಧ್ಯಕ್ಷರ ಆಯ್ಕೆ ಸುಲಭದ ಕೆಲಸವಲ್ಲ. ಹಲವರ ನಡುವೆ ಪೈಪೋಟಿ ಇರುವುದರಿಂದ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ, ಸಂಘಟನಾ ಕೌಶಲ್ಯ ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸುವ ಶಕ್ತಿಯುಳ್ಳ ವ್ಯಕ್ತಿಯನ್ನು ಗುರುತಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗುವುದು ಎಂಬ ಚರ್ಚೆ ನಡೆದಿದೆ.

ಅಧ್ಯಕ್ಷ ಸ್ಥಾನ ಯಾರಿಗೆ ದೊರೆಯುತ್ತದೆ ಎಂಬುದು ಇನ್ನೂ ಕುತೂಹಲದ ವಿಷಯವಾಗಿದ್ದರೂ, ಪಕ್ಷ ಸಂಘಟನೆಯ ವಿಷಯದಲ್ಲಿ ನೂತನ ಅಧ್ಯಕ್ಷರಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂಬ ಸಚಿವರ ಭರವಸೆ ಕಾಂಗ್ರೆಸ್ ಕಾರ್ಯಕರ್ತರಿಗೆ ಟಾನಿಕ್ ನೀಡಿದಂತಾಗಿದೆ.

ಶಾಸಕರ ಅನುಪಸ್ಥಿತಿ ಚರ್ಚೆಗೆ ಗ್ರಾಸ

ಇದರ ಮಧ್ಯೆ ಸಚಿವ ಕಾಶಪ್ಪನವರ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಎರಡು ಬಾರಿ ಭೇಟಿ ನೀಡಿದ ಸಂದರ್ಭ ಜಿಲ್ಲೆಯ ಕಾಂಗ್ರೆಸ್ ಶಾಸಕರ ಅನುಪಸ್ಥಿತಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಮೊದಲ ಬಾರಿ ಸಚಿವರು ಪಕ್ಷದ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕ ಉಮೇಶ ಮೇಟಿ ಮಾತ್ರ ಹಾಜರಿದ್ದರು. ಆದರೆ ಎರಡನೇ ಬಾರಿ ಸಚಿವರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ವೇಳೆ ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದರೂ ಯಾರೊಬ್ಬರೂ ಕಚೇರಿಯಲ್ಲಿ ಕಾಣಿಸಿಕೊಳ್ಳದಿರುವುದು ಗಮನ ಸೆಳೆಯಿತು.

ಶಾಸಕರ ಅನುಪಸ್ಥಿತಿಯ ಬಗ್ಗೆ ಸಚಿವ ಕಾಶಪ್ಪನವರ ಅವರೇ ಸಮರ್ಥನೆಯ ಮಾತುಗಳ ಮೂಲಕ ತೇಪೆ ಹಚ್ಚುವ ಪ್ರಯತ್ನ ಮಾಡಿರುವುದು ಕಂಡುಬಂದಿತು. ಆದರೆ ಪಕ್ಷದ ಸಂಘಟನೆಯನ್ನು ಬಲಪಡಿಸುವ ಸಂದರ್ಭದಲ್ಲಿ ಸಚಿವರೊಂದಿಗೆ ಜಿಲ್ಲೆಯ ಪ್ರಮುಖ ನಾಯಕರು ಹಾಗೂ ಶಾಸಕರು ಒಗ್ಗಟ್ಟಾಗಿ ಕಾಣಿಸಿಕೊಳ್ಳಬೇಕಿತ್ತು ಎಂಬ ಅಭಿಪ್ರಾಯವೂ ಪಕ್ಷದ ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿದೆ.

ಸೋತ ಅಭ್ಯರ್ಥಿಗಳೂ ಸಚಿವರ ಸುತ್ತಮುತ್ತ

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಸಚಿವ ಕಾಶಪ್ಪನವರ ಅವರನ್ನು ಹೊರತುಪಡಿಸಿದರೆ ಉಳಿದ ನಾಲ್ವರು ಶಾಸಕರು ಪಕ್ಷದ ಕಚೇರಿಯಲ್ಲಿ ನಡೆದ ಪ್ರಮುಖ ಚರ್ಚೆಯ ಸಂದರ್ಭದಲ್ಲಿ ಕಾಣಿಸಿಕೊಳ್ಳದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇದರ ಜತೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಈ ಸಂದರ್ಭದಲ್ಲಿ ಕಾಣಿಸಿಕೊಳ್ಳದಿರುವುದು ಮತ್ತೊಂದು ಚರ್ಚೆಯ ವಿಷಯವಾಗಿದೆ.

ಸಚಿವರ ಸುತ್ತಮುತ್ತ ಮುಖ್ಯವಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಹಾಗೂ 2023ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ಕಾಣಿಸಿಕೊಂಡಿದ್ದು, ಪಕ್ಷದ ಮುಂದಿನ ಸಂಘಟನಾ ರಾಜಕಾರಣದ ಬಗ್ಗೆ ಹಲವು ರೀತಿಯ ವಿಶ್ಲೇಷಣೆಗಳಿಗೆ ಕಾರಣವಾಗಿದೆ.

ಬರ-ಪ್ರವಾಹ ಅಧ್ಯಯನದಲ್ಲಿ ಶಾಸಕರ ಸಾಥ್

ಆದಾಗ್ಯೂ, ಬರ ಹಾಗೂ ಪ್ರವಾಹ ಪರಿಸ್ಥಿತಿಯ ಅಧ್ಯಯನಕ್ಕಾಗಿ ಸಚಿವರು ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಬಂಧಪಟ್ಟ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಚಿವರಿಗೆ ಸಾಥ್ ನೀಡಿರುವುದು ಸಮಾಧಾನದ ಸಂಗತಿಯಾಗಿದೆ.

ರೈತರ ಸಮಸ್ಯೆಗಳನ್ನು ಆಲಿಸುವುದು, ಬೆಳೆ ಹಾನಿ ಪರಿಶೀಲಿಸುವುದು, ಬರ ಪರಿಸ್ಥಿತಿಯ ವಾಸ್ತವ ಸ್ಥಿತಿಯನ್ನು ಅರಿಯುವುದು ಹಾಗೂ ಪ್ರವಾಹದಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಶೀಲಿಸುವ ಕಾರ್ಯದಲ್ಲಿ ಸಚಿವರು ತೊಡಗಿಸಿಕೊಂಡಿದ್ದಾರೆ.

ಇದರ ಜತೆಗೆ ಧಾರ್ಮಿಕ ಕ್ಷೇತ್ರಗಳಿಗೂ ಭೇಟಿ ನೀಡುತ್ತಿರುವ ಅವರು, ರಾಜಕೀಯ ಹಾಗೂ ಆಡಳಿತಾತ್ಮಕ ಚಟುವಟಿಕೆಗಳ ನಡುವೆ ಪಕ್ಷದ ಸಂಘಟನೆಯ ಮೇಲೂ ಗಮನ ಹರಿಸುತ್ತಿರುವುದು ಗಮನಾರ್ಹವಾಗಿದೆ.

2028ರ ಗುರಿ ಸಾಧನೆ ಹೇಗೆ?

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ 2028ರ ಚುನಾವಣೆಯಲ್ಲಿ ಪಕ್ಷದ ಗುರಿ ಸಾಧಿಸುವುದು ಹೇಗೆ ಎಂಬ ಚಿಂತೆ ಕಾಂಗ್ರೆಸ್ನ ಹಲವು ಕಾರ್ಯಕರ್ತರಲ್ಲಿ ಮೂಡಿದೆ.

ಪಕ್ಷದೊಳಗಿನ ಅಸಮಾಧಾನ, ಆಂತರಿಕ ಭಿನ್ನಮತ ಹಾಗೂ ನಾಯಕತ್ವದ ಪೈಪೋಟಿಯನ್ನು ಬದಿಗಿಟ್ಟು ಸಂಘಟನೆಯನ್ನು ಬಲಪಡಿಸುವ ಅಗತ್ಯವಿದೆ. ವಿಶೇಷವಾಗಿ ಅಧಿಕಾರದಲ್ಲಿರುವ ಶಾಸಕರು, ಸಚಿವರು, ಜಿಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಒಂದೇ ವೇದಿಕೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ 2028ರ ಚುನಾವಣೆಯಲ್ಲಿ ಪಕ್ಷದ ಗುರಿ ಸಾಧಿಸಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಈ ಎಲ್ಲ ಸವಾಲುಗಳ ನಡುವೆಯೂ ಸಚಿವ ವಿಜಯಾನಂದ ಕಾಶಪ್ಪನವರ ಅವರು ಪಕ್ಷ ಸಂಘಟನೆಯ ಬಗ್ಗೆ ಉತ್ಸಾಹ ವ್ಯಕ್ತಪಡಿಸಿರುವುದು ಕಾರ್ಯಕರ್ತರಲ್ಲಿ ಹೊಸ ಭರವಸೆ ಮೂಡಿಸಿದೆ.

ಅಧಿಕಾರ ಸಿಕ್ಕ ಬಳಿಕ ಕೇವಲ ಆಡಳಿತಾತ್ಮಕ ಕಾರ್ಯಗಳಿಗೆ ಸೀಮಿತವಾಗದೆ ಪಕ್ಷದ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಸಂಘಟನೆಯ ವಿಚಾರ ಚರ್ಚಿಸಿರುವ ಸಚಿವರ ನಡೆ, 2028ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ರಾಜಕೀಯ ಸಂಘಟನೆಯತ್ತ ಹೆಜ್ಜೆ ಇಡಲಾಗುತ್ತಿದೆ ಎಂಬ ಸಂದೇಶವನ್ನು ನೀಡಿದೆ.

ಮುಂದಿನ ದಿನಗಳಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ, ಮುಂಚೂಣಿ ಘಟಕಗಳ ಪುನರ್ರಚನೆ, ಮುಖಂಡರು ಹಾಗೂ ಕಾರ್ಯಕರ್ತರ ನಡುವಿನ ಸಮನ್ವಯ ಮತ್ತು ಪಕ್ಷದೊಳಗಿನ ಅಸಮಾಧಾನ ನಿವಾರಣೆ—ಇವುಗಳೆಲ್ಲ ಕಾಶಪ್ಪನವರ ಅವರ ಮುಂದಿರುವ ಪ್ರಮುಖ ಸವಾಲುಗಳಾಗಿವೆ.

ಈ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ ಕಾಂಗ್ರೆಸ್ನ್ನು ಜಿಲ್ಲೆಯಲ್ಲಿ ಮತ್ತಷ್ಟು ಸಂಘಟಿತಗೊಳಿಸುವಲ್ಲಿ ಸಚಿವರು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ “2028ರ ಗುರಿ”ಯತ್ತ ಕಾಶಪ್ಪನವರ ಅವರ ಚಿತ್ತ ನೆಟ್ಟಿರುವುದು ಮಾತ್ರ ಇದೀಗ ಕಾಂಗ್ರೆಸ್ ಪಾಳಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande