


ಬಳ್ಳಾರಿ, 09 ಆಗಸ್ಟ್ (ಹಿ.ಸ.)
ಆ್ಯಂಕರ್ : ಭ್ರಷ್ಟಾಚಾರಕ್ಕೆ ಜಾತಿ ಇಲ್ಲ. ಸಚಿವ ಬಿ. ನಾಗೇಂದ್ರ ಅವರು ತಿಂದಿರುವುದೂ ದಲಿತರ ದುಡ್ಡೇ. ಬಿ. ನಾಗೇಂದ್ರ ಅವರಲ್ಲಿ ಆತ್ಮಸಾಕ್ಷಿ ಇದ್ದಲ್ಲಿ ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮುಂಖಂಡ ಬಿ. ಶ್ರೀರಾಮುಲು ಅವರು ಆಗ್ರಹಿಸಿದ್ದಾರೆ.
ಅವರ ಗೃಹ ಕಚೇರಿಯಲ್ಲಿ ಸುದ್ದಿಗಾರರ ಜೊತೆಯಲ್ಲಿ ಭಾನುವಾರ ಮಾತನಾಡಿದ ಅವರು, ದಲಿತರು ದಲಿತರ ಹಣವನ್ನೇ ಲೂಟಿ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಭ್ರಷ್ಟಾಚಾರಕ್ಕೆ ಯಾವುದೇ ಜಾತಿ ಇಲ್ಲ. ಜಾತಿಯ ಹೆಸರಲ್ಲಿ ರಾಜಕೀಯ ಬೇಡ. ಬಡವರು, ದಲಿತರು, ವಾಲ್ಮೀಕಿಗಳು ಮತ್ತು ವಿದ್ಯಾರ್ಥಿಗಳ ಹಣವನ್ನು ಬಿ. ನಾಗೇಂದ್ರ ಲೂಟಿ ಮಾಡಿ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆ ಮಾಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವಿವಿಧ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆಯಾಗಿದೆ. ಸಾಕ್ಷಿಗಳು, ಆಧಾರಗಳೂ ಇವೆ. ಈ ಭ್ರಷ್ಟಾಚಾರ ನಡೆಯದೇ ಇದಲ್ಲಿ ಬಿ. ನಾಗೇಂದ್ರ ಅವರನ್ನು ನಾನು, `ದಲಿತ ನಾಯಕ' ಎಂದು ತಾನು ಒಪ್ಪಿಕೊಳ್ಳುತ್ತಿದ್ದೆ. ಬಿ. ನಾಗೇಂದ್ರ ಅವರು ಉತ್ತಮ ಕೆಲಸ ಮಾಡಿದ್ದರೆ ಅವರನ್ನು ಹೊಗಳುತ್ತಿದ್ದೆ ಎಂದು ಹೇಳಿದರು.
ಬಿ. ನಾಗೇಂದ್ರ ಅವರ ಸಚಿವ ಸ್ಥಾನದ ರಾಜೀನಾಮೆಗಾಗಿ ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಅವರಲ್ಲಿ ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ `ವಾಲ್ಮೀಕಿಗಳ ಹಣವನ್ನು ತಿಂದವರನ್ನು ಅಧಿಕಾರದಲ್ಲಿ ಮುಂದುವರೆಯಲು ಬಿಡಬಾರದು. ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಸದನದ ಕಲಾಪ ನಡೆಯಲು ಅವಕಾಶ ನೀಡದೇ, ಹೋರಾಡಬೇಕು' ಎಂದು ಕೈಮುಗಿದು ಕೇಳಿದರು.
`ವಾರಕ್ಕೊಬ್ಬರನ್ನು ಸಚಿವರನ್ನಾಗಿಸಿ'
ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿವೆ. ಕೋಟ್ಯಾಂತರ ರೂಪಾಯಿ ವ್ಯವಹಾರದ ಮಾತುಗಳು ಕಾಂಗ್ರೆಸ್ಸಿಗರಿಂದಲೇ ಬಹಿರಂಗಗೊಳ್ಳುತ್ತಿವೆ. ಕಾಂಗ್ರೆಸ್ ಪಕ್ಷದಲ್ಲಿರುವ ಆಂತರಿಕ ಕಚ್ಚಾಟದಿಂದ ಆಡಳಿತ ದಿಕ್ಕೆಟ್ಟಿದೆ. ಬರ ಪರಿಹಾರ ಕಾರ್ಯಗಳು ನಡೆಯುತ್ತಿಲ್ಲ. ಪಕ್ಷದಲ್ಲಿರುವ ಗೊಂದಲ - ಆಂತರಿಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಒಟ್ಟು ಶಾಸಕರನ್ನು `ವಾರಕ್ಕೊಬ್ಬರನ್ನು ಸಚಿವರನ್ನಾಗಿ' ಮಾಡಿರಿ. ಕೊನೆಯಲ್ಲಿ ಮುಖ್ಯಮಂತ್ರಿಗಳೇ ಯಾವಾಗ ಬದಲಾವಣೆ ಆಗುತ್ತಾರೆ ಎನ್ನುವುದೇ ಗೊತ್ತಿಲ್ಲ ಎಂದು ಅವರು ಟೀಕಿಸಿದರು.
ರಾಜ್ಯದಲ್ಲಿ ಜಯರಾಜ್ ಮತ್ತು ಕೊತ್ವಾಲ್ ಅವರ ಶಿಷ್ಯರು ಆಡಳಿತ ನಡೆಸುತ್ತಿದ್ದಾರೆ. ಆ ಇಬ್ಬರು ಶಿಷ್ಯರು ಸೇರಿಕೊಂಡು ಸಭ್ಯ ವ್ಯಕ್ತಿತ್ವದ ಬಸವರಾಜ ಹೊರಟ್ಟಿ ಅವರಿಂದ ಒತ್ತಾಯಪೂರ್ವಕವಾಗಿ - ಬೆದರಿಕೆಗಳಿಂದ ರಾಜೀನಾಮೆ ಪಡೆದಿರುವುದು ಪ್ರಜಾಪ್ರಭುತ್ವದ ವಿಪರ್ಯಾಸ. ರೌಡಿಯಿಸಂನ ಆಡಳಿತ ಕರ್ನಾಟಕದಲ್ಲಿ ವ್ಯಾಪಕವಾಗುತ್ತಿದೆ ಎಂದು ಹೇಳಿದರು.
ಇಂದಿರಾ ಗಾಂಧಿ ಅವರ ಕಾಲದಲ್ಲಿ ವಿಮಾನದ ವೇಗದಲ್ಲಿ ಸಾಗುತ್ತಿದ್ದ ಕಾಂಗ್ರೆಸ್ ಪಕ್ಷ ಇಂದು ಜನರ ವಿರೋಧದಿಂದಾಗಿ ಬಸ್, ದ್ವಿಚಕ್ರವಾನ, ಸೈಕಲ್ ವೇಗದಲ್ಲಿ ಸಾಗಿ ಪ್ರಸ್ತುತ ಎತ್ತಿನಗಾಡಿಯ ವೇಗಕ್ಕೆ ತಲುಪಿದೆ. ಪಕ್ಷದಲ್ಲಿಯ ಭ್ರಷ್ಟಾಚಾರ, ಭಿನ್ನಮತೀಯತೆ, ಆಂತರಿಕ ಕಚ್ಚಾಟಗಳು ಪಕ್ಷದ ವೇಗವನ್ನು ಮತ್ತಷ್ಟು ಕಡಿಮೆ ಮಾಡಿವೆ. ನೆಹರು ಕಾಲದಲ್ಲಿ ಆರಂಭವಾಗಿರುವ ಜೀಪ್ ಹಗರಣದ ಭ್ರಷ್ಟಾಚಾರವು ರಾಹುಲ್ ಗಾಂಧಿ - ಪ್ರಿಯಾಂಕ ಕಾಲದಲ್ಲೂ ವ್ಯಾಪಕವಾಗಿ ಮುಂದುವರೆದಿರುವುದು ವಿಪರ್ಯಾಸ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್