
ಬೆಂಗಳೂರು, 09 ಆಗಸ್ಟ್ (ಹಿ.ಸ.):
ಆ್ಯಂಕರ್:ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ದೆಹಲಿಯ 10 ಜನಪಥ್‌ನಲ್ಲಿ ‘ನಾಳೆ ಬಾ’ ಎಂಬ ಸಂದೇಶ ಸಿಗುತ್ತಿರುವಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ವಿಜಯೇಂದ್ರ, 1990ರ ದಶಕದಲ್ಲಿ ಬೆಂಗಳೂರಿನ ಮನೆಗಳ ಬಾಗಿಲಿಗೆ ‘ನಾಳೆ ಬಾ’ ಎಂದು ಬರೆದು ದುಷ್ಟಶಕ್ತಿಯನ್ನು ದೂರವಿಡಲಾಗುತ್ತಿತ್ತು. ಇದೀಗ ಕರ್ನಾಟಕದ ಮುಖ್ಯಮಂತ್ರಿಯವರಿಗೂ ಅದೇ ಸಂದೇಶ ಎದುರಾಗಿರುವುದು ವಿಪರ್ಯಾಸ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದು, ಬರದ ಆತಂಕ, ಹದಗೆಟ್ಟ ರಸ್ತೆಗಳು, ಮೂಲಸೌಕರ್ಯ ವೈಫಲ್ಯ ಹಾಗೂ ಜನರ ಅಹವಾಲುಗಳು ಹೆಚ್ಚಾಗುತ್ತಿವೆ. ಆದರೆ ಕಾಂಗ್ರೆಸ್ ಸರ್ಕಾರ ಮಾತ್ರ ಆಂತರಿಕ ಅಧಿಕಾರದ ಕಚ್ಚಾಟದಲ್ಲಿ ಮುಳುಗಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಯಾರು ರಾಜೀನಾಮೆ ನೀಡಬೇಕು, ಯಾರು ಸಚಿವರಾಗಬೇಕು ಹಾಗೂ ಯಾರು ಅಧಿಕಾರ ಉಳಿಸಿಕೊಳ್ಳಬೇಕು ಎಂಬ ಚರ್ಚೆಯಲ್ಲೇ ಕಾಂಗ್ರೆಸ್ ನಾಯಕರು ತೊಡಗಿದ್ದಾರೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಸಚಿವ ಸ್ಥಾನಗಳಿಗಾಗಿ ನಡೆಯುತ್ತಿರುವ ಪೈಪೋಟಿಯೇ ಸರ್ಕಾರದ ಮೇಲಿನ ಜನರ ವಿಶ್ವಾಸ ಕುಸಿದಿರುವುದನ್ನು ತೋರಿಸುತ್ತದೆ. ಕಾಂಗ್ರೆಸ್‌ಗೆ ಕರ್ನಾಟಕದ ಜನತೆ ಐದು ವರ್ಷ ಆಡಳಿತ ನಡೆಸಲು ಸ್ಪಷ್ಟ ಜನಾದೇಶ ನೀಡಿದ್ದಾರೆಯೇ ಹೊರತು ಅಧಿಕಾರಕ್ಕಾಗಿ ಕಚ್ಚಾಡಲು ಅಲ್ಲ ಎಂದು ಹೇಳಿದ್ದಾರೆ.
ಇಂದು ಕಾಂಗ್ರೆಸ್ ನಾಯಕರಿಗೆ 10 ಜನಪಥ್‌ನಲ್ಲಿ ‘ನಾಳೆ ಬಾ’ ಎನ್ನಲಾಗುತ್ತಿದೆ. ಆದರೆ 2028ರಲ್ಲಿ ಮತ ಕೇಳಲು ಕರ್ನಾಟಕದ ಜನರ ಬಳಿಗೆ ಹೋದಾಗ, ಜನರೇ ಅವರಿಗೆ ‘ನಾಳೆ ಬಾ’ ಎಂದು ಹೇಳಲಿದ್ದಾರೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.