
ಬೆಂಗಳೂರು, 09 ಆಗಸ್ಟ್ (ಹಿ.ಸ.):
ಆ್ಯಂಕರ್:ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್ಶಿಪ್ ಯೋಜನೆಗೆ ಮರುಜೀವ ನೀಡಲಾಗುತ್ತಿದ್ದು, ವಿಶ್ವದರ್ಜೆಯ ಮೂಲಸೌಕರ್ಯ ಹೊಂದಿರುವ ಅತ್ಯಾಧುನಿಕ ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಯೋಜನೆಯಲ್ಲಿ ವಿಶ್ವದರ್ಜೆಯ ರಸ್ತೆಗಳು, ಮೆಟ್ರೋ ಸಂಪರ್ಕ, ಅತ್ಯಾಧುನಿಕ ಕ್ರೀಡಾಂಗಣ, ಉದ್ಯಾನವನಗಳು ಹಾಗೂ ಸುಸಜ್ಜಿತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಈ ಯೋಜನೆಯಿಂದ ಬೆಂಗಳೂರು ದಕ್ಷಿಣ ಜಿಲ್ಲೆಯ ಚಿತ್ರಣವೇ ಬದಲಾಗಲಿದೆ ಎಂದು ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ರೈತರ ಹಿತರಕ್ಷಣೆ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಹಿಂದಿನ ಸರ್ಕಾರ ಎಕರೆಗೆ ₹25 ಲಕ್ಷ ನಿಗದಿಪಡಿಸಿದ್ದರೆ, ತಮ್ಮ ಸರ್ಕಾರ ಪ್ರತಿ ಎಕರೆಗೆ ₹3 ಕೋಟಿಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ ಎಂದು ಹೇಳಿದ್ದಾರೆ.
ಹಣದ ಬದಲಾಗಿ ಭೂಮಿ ಬಯಸುವ ರೈತರಿಗೆ ಶೇ.50ರಷ್ಟು ಅಭಿವೃದ್ಧಿಪಡಿಸಿದ ಜಾಗ ನೀಡಲಾಗುವುದು. ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣ ಐಚ್ಛಿಕವಾಗಿದ್ದು, ಯೋಜನೆಗೆ ಜಮೀನು ನೀಡಲು ಇಚ್ಛಿಸದ ರೈತರ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ರೈತರಿಗೆ ಗೌರವಯುತ ಜೀವನ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಯೋಜನೆಗೆ ಎಲ್ಲರ ಸಹಕಾರ ಅಗತ್ಯ ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.