ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಜನಾಂದೋಲನ:ವಿಜಯೇಂದ್ರ
ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಬಿಜೆಪಿಯಿಂದ ಜನಾಂದೋಲನ
ಕೋಲಾರ ನಗರದ ಹೊರವಲಯದ ಚದುಮನಹಳ್ಳಿ ರತ್ನ ಕನ್ವೆನ್ಷನ್ ಹಾಲ್ನಲ್ಲಿ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿ ಸುರೇಶ್ ಪರ ನಡೆದ ಚುನಾವಣಾ ಪೂರ್ವಭಾವಿ ಸಭೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟಿಸಿದರು.


ಕೋಲಾರ, 09 ಆಗಷ್ಟ್ (ಹಿ.ಸ) :

ಆ್ಯಂಕರ್ : ರಾಜ್ಯವು ಭೀಕರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಮಳೆಯ ಕೊರತೆಯಿಂದ ಬಿತ್ತನೆಯಾಗಿಲ್ಲ ಮತ್ತು ರೈತರು ಸಂಕಷ್ಟದಲ್ಲಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಟೊಮೊಟೊ ಬೆಲೆ ತೀವ್ರವಾಗಿ ಕುಸಿದಿದೆ. ಆದರೆ ರಾಜ್ಯ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕಾಂಗ್ರೆಸ್ ದುರಾಡಳಿತ ಮತ್ತು ಜನವಿರೋಧಿ ನೀತಿಗಳ ವಿರುದ್ಧ ರಾಜ್ಯಾದ್ಯಂತ ಜನಾಂದೋಲನ ರೂಪಿಸಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ನಗರ ಹೊರವಲಯದ ಚದುಮನಹಳ್ಳಿ ರತ್ನ ಕನ್ವೆನ್ಷನ್ ಹಾಲ್ನಲ್ಲಿ ಭಾನುವಾರ ಆಗ್ನೇಯ ಪದವೀಧರ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿ ಕೆ.ಎಂ. ಸುರೇಶ್ ಪರ ಚುನಾವಣಾ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕರ್ತರು ಈ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಇದುವರೆಗೂ ಬಿಜೆಪಿ ಅಭ್ಯರ್ಥಿಗಳೇ ಆಯ್ಕೆಯಾಗಿದ್ದಾರೆ ಎಂಬ ಕಾರಣಕ್ಕೆ ಅತಿ ಆತ್ಮವಿಶ್ವಾಸದಿಂದ ಕಾರ್ಯಕರ್ತರು ನಿರ್ಲಕ್ಷ್ಯ ತೋರಬಾರದು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಹಣಬಲ ಮತ್ತು ತೋಳ್ಬಲದಿಂದ ಚುನಾವಣೆ ಗೆಲ್ಲಲು ಹುನ್ನಾರ ನಡೆಸುತ್ತಿದೆ. ಆದ್ದರಿಂದ ಕಾರ್ಯಕರ್ತರು ಎನ್.ಡಿ.ಎ. ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಹೊರಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಎನ್.ಡಿ.ಎ. ಅಭ್ಯರ್ಥಿ ಕೆ.ಎಂ. ಸುರೇಶ್, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ನನ್ನ ಸೇವೆಯನ್ನು ಗುರುತಿಸಿ ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷ ಟಿಕೆಟ್ ನೀಡಿದೆ ಎಂದು ತಿಳಿಸಿ, ಮುಖಂಡರು ಹಾಗೂ ಕಾರ್ಯಕರ್ತರು ತಮ್ಮನ್ನು ಭರ್ಜರಿಯಾಗಿ ಗೆಲ್ಲಿಸುವಂತೆ ಮನವಿ ಮಾಡಿದರು.

ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ ಕೋಲಾರ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದ್ದರೂ ಸಹ ಸಚಿವ ಸ್ಥಾನದ ಗುಂಗಿನಲ್ಲಿರುವ ಕಾಂಗ್ರೆಸ್ ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂಧಿಸಲು ವಿಫಲರಾಗಿದ್ದಾರೆ. ಸಚಿವ ಸ್ಥಾನ ವಂಚಿತರಾಗಿ ಕಾಂಗ್ರೆಸ್ ವಿರುದ್ಧವೇ ಬಂಡಾಯವೆದ್ದಿದ್ದಾರೆ ಎಂದು ಆರೋಪಿಸಿದರು.

ಮಾಜಿ ಶಾಸಕ ವತೂರ್ ಆರ್. ಪ್ರಕಾಶ್ ಮಾತನಾಡಿ ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ ಮೇಲೆ ಕಾಂಗ್ರೆಸ್ ವಿರುದ್ಧ ಅಹಿಂದ ವರ್ಗಗಳು ಆಕ್ರೋಶ ವ್ಯಕ್ತಪಡಿಸಿದೆ. ಪ್ರತಿ ಕ್ಷೇತ್ರದಲ್ಲಿ ಅಹಿಂದ ವರ್ಗಗಳನ್ನು ಸಂಘಟಿಸಿ ಆ ವರ್ಗಗಳ ಬೆಂಬಲವನ್ನು ಚುನಾವಣೆಗೆ ಪಡೆಯುವಂತೆ ಸಲಹೆ ನೀಡಿದರು.

ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂ ಶಕ್ತಿ ಚಲಪತಿ ಮಾತನಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಎಲ್ಲಾ ೬ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ. ಅಷ್ಟೇ ಅಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಬಿ.ವೈ. ವಿಜಯೇಂದ್ರ ರವರು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕರಾದ ಮಂಜುನಾಥಗೌಡ, ಬಿ.ಪಿ.ವೆಂಕಟಮುನಿಯಪ್ಪ, ಸಂಪಂಗಿ, ಮಾಜಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಪಕ್ಷದ ಪ್ರಭಾರಿ ಬ್ಯಾಟರಂಗೇಗೌಡ, ಸಹ ಪ್ರಭಾರಿ ಹಾಗು ವಿಧಾನ ಪರಿಷತ್ ಸದಸ್ಯರಾದ ಕೇಶವ್ ಪ್ರಸಾದ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಪಕ್ಷದ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಮಚಂದ್ರೇಗೌಡ, ಕೋಲಾರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಂಗಾರಪೇಟೆ ಮಹೇಶ್ ಸೇರಿದಂತೆ ಪ್ರಮುಖ ನಾಯಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande