
ವಿಜಯಪುರ, 09 ಆಗಸ್ಟ್ (ಹಿ.ಸ.)
ಆ್ಯಂಕರ್ : ವಿಜಯಪುರ ಜಿಲ್ಲೆಯ ದಾಸ್ಯಾಳ ಗ್ರಾಮದ ಜನರ ಸುಮಾರು ನಾಲ್ಕು ದಶಕಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಿದ್ದು, ಗ್ರಾಮಕ್ಕೆ ಬಸ್ ಸಂಚಾರ ಆರಂಭವಾಗಿದೆ. ಗ್ರಾಮಸ್ಥರ ಬಹುದಿನಗಳ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ಪ್ರಯತ್ನದ ಫಲವಾಗಿ ದಾಸ್ಯಾಳ ಗ್ರಾಮಕ್ಕೆ ಬಸ್ ಸೌಲಭ್ಯ ದೊರೆತಿದೆ.
ಕಳೆದ ಸುಮಾರು 40 ವರ್ಷಗಳಿಂದ ದಾಸ್ಯಾಳ ಗ್ರಾಮಕ್ಕೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕೆಂಬುದು ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿತ್ತು. ಬಸ್ ಸೌಲಭ್ಯ ಇಲ್ಲದ ಕಾರಣ ವಿದ್ಯಾರ್ಥಿಗಳು, ಉದ್ಯೋಗಿಗಳು, ರೈತರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಪ್ರತಿನಿತ್ಯ ಸಂಚಾರದ ಸಮಸ್ಯೆ ಎದುರಿಸುತ್ತಿದ್ದರು. ಗ್ರಾಮದಿಂದ ವಿಜಯಪುರ ಸೇರಿದಂತೆ ಸುತ್ತಮುತ್ತಲಿನ ಪಟ್ಟಣಗಳಿಗೆ ತೆರಳಲು ಖಾಸಗಿ ವಾಹನಗಳು ಅಥವಾ ಇತರ ಪರ್ಯಾಯ ಸಾರಿಗೆ ವ್ಯವಸ್ಥೆಗಳನ್ನೇ ಅವಲಂಬಿಸಬೇಕಾಗಿತ್ತು.
ಈ ಹಿನ್ನೆಲೆಯಲ್ಲಿ ದಾಸ್ಯಾಳ ಗ್ರಾಮದ ಗ್ರಾಮಸ್ಥರು ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿ, ಗ್ರಾಮಕ್ಕೆ ನಿಯಮಿತ ಬಸ್ ಸಂಚಾರ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಸಚಿವರು, ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಬಸ್ ಡಿಪೋ ಡಿಸಿ ಅವರಿಗೆ ಮೊಬೈಲ್ ಮೂಲಕ ಕರೆ ಮಾಡಿ, ದಾಸ್ಯಾಳ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.
ಅಷ್ಟೇ ಅಲ್ಲದೆ, ಬಸ್ ಸಂಚಾರ ಆರಂಭವಾಗುವವರೆಗೆ ಈ ಕಾರ್ಯದ ಜವಾಬ್ದಾರಿಯನ್ನು ತಮ್ಮ ಆಪ್ತ ಸಹಾಯಕ ಸಂತೋಷ ಲೋಕುರಿ ಅವರಿಗೆ ವಹಿಸಿದರು. ಸಚಿವರ ಸೂಚನೆಯಂತೆ ಸಂತೋಷ ಲೋಕುರಿ ಅವರು ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಗ್ರಾಮಕ್ಕೆ ಬಸ್ ಸಂಚಾರ ಆರಂಭವಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಂಡರು.
ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿದ ಪರಿಣಾಮ ಇದೀಗ ದಾಸ್ಯಾಳ ಗ್ರಾಮಕ್ಕೆ ಬಸ್ ಸಂಚಾರ ಆರಂಭಗೊಂಡಿದೆ. ಇದರಿಂದ ಸುಮಾರು ನಾಲ್ಕು ದಶಕಗಳಿಂದ ಬಸ್ ಸೌಲಭ್ಯಕ್ಕಾಗಿ ಕಾಯುತ್ತಿದ್ದ ಗ್ರಾಮಸ್ಥರ ಬಹುದಿನಗಳ ಕನಸು ನನಸಾಗಿದೆ.
ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲ
ಗ್ರಾಮಕ್ಕೆ ಬಸ್ ಸೌಲಭ್ಯ ದೊರೆತಿರುವುದರಿಂದ ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಪ್ರತಿನಿತ್ಯ ಶಿಕ್ಷಣಕ್ಕಾಗಿ ಬೇರೆಡೆಗೆ ತೆರಳುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತಮ್ಮ ಗಮ್ಯಸ್ಥಾನ ತಲುಪಲು ಸಾಧ್ಯವಾಗಲಿದೆ.
ಉದ್ಯೋಗಿಗಳು, ರೈತರು, ವ್ಯಾಪಾರಸ್ಥರು ಹಾಗೂ ವಿವಿಧ ಕೆಲಸಗಳಿಗಾಗಿ ಪಟ್ಟಣಗಳಿಗೆ ತೆರಳುವ ಗ್ರಾಮಸ್ಥರಿಗೂ ಇದರಿಂದ ಅನುಕೂಲವಾಗಲಿದೆ.
ಹಿರಿಯ ನಾಗರಿಕರು ಹಾಗೂ ಮಹಿಳೆಯರು ಸಾರಿಗೆ ಸಮಸ್ಯೆಯಿಂದ ಎದುರಿಸುತ್ತಿದ್ದ ತೊಂದರೆಗೂ ಇದೀಗ ಪರಿಹಾರ ದೊರೆತಂತಾಗಿದೆ. ಗ್ರಾಮಕ್ಕೆ ನಿಯಮಿತ ಬಸ್ ಸಂಚಾರ ಆರಂಭವಾಗಿರುವುದು ಗ್ರಾಮೀಣ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
40 ವರ್ಷಗಳ ಕನಸು ನನಸಾದ ಸಂತಸ
ದಾಸ್ಯಾಳ ಗ್ರಾಮದ ಜನರ 40 ವರ್ಷಗಳ ಕನಸಿಗೆ ಇದೀಗ ಮುಕ್ತಿ ಸಿಕ್ಕಿದೆ ಎಂದು ಗ್ರಾಮಸ್ಥ ಧರೆಪ್ಪ ಕೂಚಬಾಳ ಸಂತಸ ವ್ಯಕ್ತಪಡಿಸಿದರು. ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡಲಾಗುತ್ತಿತ್ತು. ಆದರೆ ಇದೀಗ ಸಚಿವ ಎಂ.ಬಿ. ಪಾಟೀಲ್ ಅವರ ಗಮನಕ್ಕೆ ತಂದ ಕೆಲವೇ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ದೊರೆತಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ ಎಂದು ಅವರು ಹೇಳಿದರು.
ಗ್ರಾಮದ ಬಹುದಿನಗಳ ಬೇಡಿಕೆಗೆ ತಕ್ಷಣ ಸ್ಪಂದಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಹಾಗೂ ಬಸ್ ಸಂಚಾರ ಆರಂಭವಾಗುವವರೆಗೆ ನಿರಂತರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಕಾರ್ಯವನ್ನು ಮುನ್ನಡೆಸಿದ ಸಂತೋಷ ಲೋಕುರಿ ಅವರಿಗೆ ದಾಸ್ಯಾಳ ಗ್ರಾಮದ ಯುವಕರು, ಹಿರಿಯರು ಹಾಗೂ ಗ್ರಾಮಸ್ಥರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande