ಮಂಟೂರಿನಲ್ಲಿ ₹2.05 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಬಾಗಲಕೋಟೆ, 09 ಆಗಸ್ಟ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರ ಗ್ರಾಮದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಒಟ್ಟು ₹2.05 ಕೋಟಿ (₹205 ಲಕ್ಷ) ಮೊತ್ತದ ವಿವಿಧ ಜನಪರ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಶಾಸಕ ಆರ
ರಸ್ತೆ


ಬಾಗಲಕೋಟೆ, 09 ಆಗಸ್ಟ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರ ಗ್ರಾಮದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಒಟ್ಟು ₹2.05 ಕೋಟಿ (₹205 ಲಕ್ಷ) ಮೊತ್ತದ ವಿವಿಧ ಜನಪರ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಶಾಸಕ ಆರ್.ಬಿ. ತಿಮ್ಮಾಪೂರ ಚಾಲನೆ ನೀಡಿದರು.

ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿ, ರಸ್ತೆ ಸಂಪರ್ಕ ಸುಧಾರಣೆ, ಸಾರ್ವಜನಿಕರಿಗೆ ಅಗತ್ಯವಿರುವ ಸಮುದಾಯ ಭವನಗಳ ನಿರ್ಮಾಣ ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ನೀರಾವರಿ ಸಂಬಂಧಿತ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದ್ದು, ಮಂಟೂರ ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಈ ಕಾಮಗಾರಿಗಳು ಮಹತ್ವದ ಹೆಜ್ಜೆಯಾಗಿವೆ.

ಭೂಮಿ ಪೂಜೆ ನೆರವೇರಿಸಲಾದ ಪ್ರಮುಖ ಕಾಮಗಾರಿಗಳಲ್ಲಿ ಮಂಟೂರ–ಕೊಣ್ಣೂರ ರಸ್ತೆಯ ಕಿ.ಮೀ. 0.50ರಿಂದ 2.00ರವರೆಗೆ ರಸ್ತೆ ಸುಧಾರಣೆಗೆ ₹40 ಲಕ್ಷ, ಇದೇ ರಸ್ತೆಯ ಕಿ.ಮೀ. 0.50ರಿಂದ 2.50ರವರೆಗೆ ಸುಧಾರಣೆಗೆ ₹75 ಲಕ್ಷ ಅನುದಾನ ಮೀಸಲಿಡಲಾಗಿದೆ.

ಅದೇ ರೀತಿ ಮಂಟೂರ–ಕಿಶೋರಿ ರಸ್ತೆಯ ಕಿ.ಮೀ. 0.00ರಿಂದ 2.00ರವರೆಗೆ ರಸ್ತೆ ಸುಧಾರಣೆಗೆ ₹20 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ಅಭಿವೃದ್ಧಿಯಿಂದ ಗ್ರಾಮಸ್ಥರು, ರೈತರು ಹಾಗೂ ವಾಹನ ಸವಾರರಿಗೆ ಸಂಚಾರ ಮತ್ತಷ್ಟು ಸುಗಮವಾಗುವ ನಿರೀಕ್ಷೆಯಿದೆ.

ಸಾರ್ವಜನಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮಂಟೂರ ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಸಮೀಪ ₹10 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಹಾಗೂ ಶ್ರೀ ಕೆಂಚವ್ವ ದೇವಿ ದೇವಸ್ಥಾನದ ಸಮೀಪ ₹10 ಲಕ್ಷ ವೆಚ್ಚದಲ್ಲಿ ಮತ್ತೊಂದು ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.

ಇದರ ಜೊತೆಗೆ ಕೃಷಿ ಹಾಗೂ ಗ್ರಾಮೀಣ ಪ್ರದೇಶದ ನೀರಿನ ಸಂರಕ್ಷಣೆಗೆ ಮಹತ್ವ ನೀಡಲಾಗಿದ್ದು, ಮಂಟೂರ ಗ್ರಾಮದ ಶ್ರೀ ರಾಚಪ್ಪ ಮೆಟಗುಡ್ಡ ಅವರ ಸರ್ವೇ ನಂ.412ರ ಜಮೀನಿನ ಸಮೀಪ ಹಳ್ಳಕ್ಕೆ ಅಡ್ಡಲಾಗಿ ₹50 ಲಕ್ಷ ವೆಚ್ಚದಲ್ಲಿ ಬಾಂದಾರ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಲಾಯಿತು. ಈ ಬಾಂದಾರದಿಂದ ಮಳೆ ನೀರಿನ ಸಂಗ್ರಹ, ಅಂತರ್ಜಲ ಮಟ್ಟ ಹೆಚ್ಚಳ ಹಾಗೂ ಸುತ್ತಮುತ್ತಲಿನ ಕೃಷಿ ಪ್ರದೇಶಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ.

ಒಟ್ಟಾರೆ, ರಸ್ತೆ ಅಭಿವೃದ್ಧಿ, ಸಮುದಾಯ ಮೂಲಸೌಕರ್ಯ ಹಾಗೂ ಜಲಸಂರಕ್ಷಣೆಗೆ ಸಂಬಂಧಿಸಿದಂತೆ ₹2.05 ಕೋಟಿ ಮೊತ್ತದ ಕಾಮಗಾರಿಗಳು ಮಂಟೂರ ಗ್ರಾಮದಲ್ಲಿ ಆರಂಭವಾಗಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

ಈ ಸಂದರ್ಭದಲ್ಲಿ ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದುಗೌಡ ಪಾಟೀಲ, ಲೋಕಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಕೀಲರಾದ ಅಶೋಕ್ ಕಿವಡಿ, ಮುಧೋಳ ಎಪಿಎಂಸಿ ಅಧ್ಯಕ್ಷರಾದ ಸಂಗಪ್ಪ ಇಮ್ಮನ್ನವರ, ಪಕ್ಷದ ಮುಖಂಡರಾದ ರಾಜು ಬಾಗವಾನ, ಬಾಬು ಗೋಲಶೆಟ್ಟಿ ಸೇರಿದಂತೆ ಗ್ರಾಮದ ಹಿರಿಯರು, ಮುಖಂಡರು, ಕಾರ್ಯಕರ್ತರು ಹಾಗೂ ಅಸಂಖ್ಯಾತ ಸಾರ್ವಜನಿಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಧೋಳ ಶಾಸಕ ಆರ್.ಬಿ. ತಿಮ್ಮಾಪೂರ, ಮತಕ್ಷೇತ್ರದ ಪ್ರತಿಯೊಂದು ಹಳ್ಳಿಯಲ್ಲಿಯೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶಗಳ ರಸ್ತೆ, ಕುಡಿಯುವ ನೀರು, ಜಲಸಂರಕ್ಷಣೆ, ಸಾರ್ವಜನಿಕ ಕಟ್ಟಡಗಳು ಸೇರಿದಂತೆ ಜನರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

“ಮತಕ್ಷೇತ್ರದ ಪ್ರತಿಯೊಂದು ಹಳ್ಳಿಯ ಮೂಲಸೌಕರ್ಯ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ. ಅಭಿವೃದ್ಧಿ ಕಾರ್ಯಗಳಿಗೆ ಜನರ ಸಹಕಾರ ಹಾಗೂ ಬೆಂಬಲ ಅತ್ಯಗತ್ಯ. ನಿಮ್ಮೆಲ್ಲರ ಪ್ರೀತಿ, ಬೆಂಬಲ ಮತ್ತು ಆಶೀರ್ವಾದ ಸದಾ ಹೀಗೆಯೇ ಇರಲಿ” ಎಂದು ಅವರು ಮನವಿ ಮಾಡಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande