
ಬೆಂಗಳೂರು, 31 ಆಗಸ್ಟ್ (ಹಿ.ಸ.)
ಆ್ಯಂಕರ್:
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಸೋಮವಾರ ಚಾಲನೆ ದೊರೆಯಲಿದೆ. ಸುಪ್ರೀಂ ಕೋರ್ಟ್, ಹೈಕೋರ್ಟ್ ನಿರ್ದೇಶನಗಳು ಹಾಗೂ ಸರ್ಕಾರದ ಆದೇಶಗಳ ಹಿನ್ನೆಲೆಯಲ್ಲಿ ಹಲವು ವರ್ಷಗಳ ಕಾನೂನು, ಆಡಳಿತಾತ್ಮಕ ಮತ್ತು ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲಾಗಿದೆ.
ಬಡಾವಣೆಯ ಒಟ್ಟು ಯೋಜನೆಗೆ ರೂ.16,419.89 ಕೋಟಿ ವೆಚ್ಚವಾಗಿದ್ದು, ಒಟ್ಟು 24,714 ನಿವೇಶನಗಳನ್ನು ಮೂರು ವರ್ಗಗಳಲ್ಲಿ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಈ ಪೈಕಿ ರೈತರು ಹಾಗೂ ಭೂಮಾಲೀಕರಿಗೆ ಭೂಪರಿಹಾರವಾಗಿ 18,399 ನಿವೇಶನಗಳನ್ನು ನೀಡಲಾಗುವುದು. ಜೊತೆಗೆ 3,500 ಕಂದಾಯ ನಿವೇಶನಗಳನ್ನು ಸಕ್ರಮಗೊಳಿಸಲಾಗುತ್ತಿದ್ದು, 2,815 ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುತ್ತದೆ.
ಎಕರೆಗೆ 9,583 ಚದರ ಅಡಿ ನಿವೇಶನದ ಅರ್ಹತೆ40:60 ಅಭಿವೃದ್ಧಿ ಮಾದರಿಯಡಿ ಸ್ವಾಧೀನಪಡಿಸಿಕೊಂಡ ಪ್ರತಿ ಒಂದು ಎಕರೆ ಭೂಮಿಗೆ 9,583 ಚದರ ಅಡಿ ಅಭಿವೃದ್ಧಿಪಡಿಸಿದ ನಿವೇಶನದ ಅರ್ಹತೆ ನಿಗದಿಪಡಿಸಲಾಗಿದೆ. ಭೂಮಾಲೀಕರಿಗೆ ಸಾಧ್ಯವಾದಷ್ಟು ಅವರ ಮೂಲ ಸರ್ವೇ ಸಂಖ್ಯೆಯಲ್ಲಿಯೇ ನಿವೇಶನ ನೀಡಲು ಮೊದಲ ಆದ್ಯತೆ ನೀಡಲಾಗುತ್ತದೆ. ಮೂಲ ಸರ್ವೇ ಸಂಖ್ಯೆಯ ಪ್ರದೇಶದಲ್ಲಿ ಸಾರ್ವಜನಿಕ ಮೂಲಸೌಕರ್ಯ ನಿರ್ಮಾಣವಾಗಿದ್ದರೆ, ಸಮೀಪದಲ್ಲಿರುವ ಲಭ್ಯ ನಿವೇಶನವನ್ನು ಹಂಚಿಕೆ ಮಾಡಲಾಗುತ್ತದೆ.
ಸಂಪೂರ್ಣ ಗಣಕೀಕೃತ ಹಂಚಿಕೆನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ಸಂಪೂರ್ಣ ಗಣಕೀಕೃತ ಹಾಗೂ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯ ಮೂಲಕ ನಡೆಸಲಾಗುವುದು. ಇದರಿಂದ ಹಂಚಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶ ಹೊಂದಲಾಗಿದೆ.
300 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ನಿವೇಶನಗಳಿಗೆ ನಗದು ಪರಿಹಾರ ನೀಡಲಾಗುವುದು. ಅಲ್ಲದೆ, ಸ್ಪಷ್ಟ ಋಣಭಾರ ರಾಹಿತ್ಯ ಪ್ರಮಾಣಪತ್ರ ಹೊಂದಿರುವ ಭೂಮಾಲೀಕರಿಗೆ ಹಂಚಿಕೆಯಲ್ಲಿ ಮೊದಲ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R