
ಬೆಂಗಳೂರು, 30 ಆಗಸ್ಟ್ (ಹಿ.ಸ.):
ಆ್ಯಂಕರ್:
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲಯ್ಯ ಅವರ ನೇತೃತ್ವದಲ್ಲಿ ಸಾಮಾಜಿಕ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು, ಇದರ ಭಾಗವಾಗಿ ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದ ವೀಕ್ಷಣೆ ಹಾಗೂ ಕ್ಷಯರೋಗಿಗಳಿಗೆ ಉಚಿತ ಪೌಷ್ಟಿಕ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಕೆ. ಗೋಪಾಲಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರ 136ನೇ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ವೀಕ್ಷಿಸಿದರು. ಬಳಿಕ ಶ್ರೀ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಉಚಿತ ನ್ಯೂಟ್ರಿಷನಲ್ ಫುಡ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದೇಶವನ್ನು ಕ್ಷಯರೋಗ ಮುಕ್ತಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ‘ಟಿಬಿ ಮುಕ್ತ ಭಾರತ್’ ಯೋಜನೆಯ ಆಶಯಕ್ಕೆ ಪೂರಕವಾಗಿ ಟ್ರಸ್ಟ್ ವತಿಯಿಂದ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ 152 ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ಧಾನ್ಯಗಳ ಕಿಟ್ಗಳನ್ನು ಉಚಿತವಾಗಿ ವಿತರಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶಾಸಕ ಕೆ. ಗೋಪಾಲಯ್ಯ, ಶ್ರೀ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್ ವತಿಯಿಂದ ಕ್ಷಯರೋಗಿಗಳ ಆರೋಗ್ಯ ಸುಧಾರಣೆಗೆ ನಿರಂತರವಾಗಿ ನೆರವು ನೀಡಲಾಗುತ್ತಿದೆ. ಪೌಷ್ಟಿಕ ಆಹಾರದ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿ, ಕ್ಷಯರೋಗದಿಂದ ಬಳಲುತ್ತಿರುವವರು ಶೀಘ್ರ ಗುಣಮುಖರಾಗಲು ಸಹಾಯ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈವರೆಗೆ ಟ್ರಸ್ಟ್ ವತಿಯಿಂದ ನೆರವು ಪಡೆದ 1,255 ಕ್ಷಯರೋಗಿಗಳು ಸಂಪೂರ್ಣ ಗುಣಮುಖರಾಗಿರುವುದು ಸಂತಸದ ಸಂಗತಿ. ಮುಂದೆಯೂ ಕ್ಷಯರೋಗ ನಿರ್ಮೂಲನೆ ಹಾಗೂ ಆರೋಗ್ಯ ಜಾಗೃತಿಗಾಗಿ ಅಗತ್ಯ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು.
ಕ್ಷಯರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸರ್ಕಾರದ ಯೋಜನೆಗಳ ಜೊತೆಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ಸಮಾಜದ ವಿವಿಧ ವರ್ಗಗಳು ಕೈಜೋಡಿಸಬೇಕು. ರೋಗಿಗಳಿಗೆ ಅಗತ್ಯವಾದ ಪೌಷ್ಟಿಕ ಆಹಾರ ಹಾಗೂ ಮಾನಸಿಕ ಬೆಂಬಲ ದೊರೆತರೆ ಚಿಕಿತ್ಸೆಯ ಫಲಿತಾಂಶ ಇನ್ನಷ್ಟು ಉತ್ತಮವಾಗಲಿದೆ ಎಂದು ಗೋಪಾಲಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ಪದಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R