ತಾಯಿಯ ಸ್ಮರಣಾರ್ಥ : ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾ ನೀಡಿದ ನಟ ಸುದೀಪ್
ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾ ನೀಡಿದ ಕಿಚ್ಚ ಸುದೀಪ್
kichcha-sudeep-distributes-free-auto-rickshaws-to-four-families-in-memory-of-his-mother


ಬೆಂಗಳೂರು, 30 ಆಗಸ್ಟ್ (ಹಿ.ಸ.)

ಆ್ಯಂಕರ್:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ತಾಯಿ ಸರೋಜಾ ಸಂಜೀವ್ ಅವರ ಸ್ಮರಣಾರ್ಥವಾಗಿ ಸಮಾಜಮುಖಿ ಕಾರ್ಯವೊಂದನ್ನು ಕೈಗೊಂಡಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾಗಳನ್ನು ವಿತರಿಸಿದ್ದಾರೆ.ತಾಯಿಯ ಸ್ಮರಣಾರ್ಥ ಆಡಂಬರದ ಕಾರ್ಯಕ್ರಮ ನಡೆಸುವ ಬದಲು, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುವ ಉದ್ದೇಶದಿಂದ ಸುದೀಪ್ ಈ ಕಾರ್ಯ ಕೈಗೊಂಡಿದ್ದಾರೆ. ಸ್ವಂತ ದುಡಿಮೆಯ ಮೂಲಕ ಕುಟುಂಬ ನಿರ್ವಹಿಸಲು ಸಾಧ್ಯವಾಗುವಂತೆ ಆಟೋ ರಿಕ್ಷಾಗಳನ್ನು ನೀಡಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಪವಿತ್ರಾ: 2017ರಲ್ಲಿ ಪತಿಯನ್ನು ಕಳೆದುಕೊಂಡಿರುವ ಪವಿತ್ರಾ ಅವರು ಇಬ್ಬರು ಮಕ್ಕಳ ಜವಾಬ್ದಾರಿಯನ್ನು ಏಕಾಂಗಿಯಾಗಿ ನಿರ್ವಹಿಸುತ್ತಿದ್ದಾರೆ. ಮಗಳು 10ನೇ ತರಗತಿಯಲ್ಲಿ ಓದುತ್ತಿದ್ದು, ಮಗನಿಗೆ ನಾಲ್ಕು ವರ್ಷ. ಸ್ಥಿರ ಆದಾಯದ ಮೂಲವಿಲ್ಲದೆ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಆಟೋ ರಿಕ್ಷಾ ನೆರವಾಗಲಿದೆ.

ಮೃತ್ಯುಂಜಯ: ಹುಬ್ಬಳ್ಳಿಯ ನಿವಾಸಿ ಹಾಗೂ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಭಿಮಾನಿಯಾಗಿರುವ ಮೃತ್ಯುಂಜಯ ಅವರು ಹಲವು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಅವರ ಕುಟುಂಬಕ್ಕೆ ಸುದೀಪ್ ಆಟೋ ರಿಕ್ಷಾ ನೀಡಿ ನೆರವಾಗಿದ್ದಾರೆ.

ಫೈಟರ್ ಬಸವರಾಜ್: ಕನ್ನಡ ಚಿತ್ರರಂಗದಲ್ಲಿ ಸಾಹಸ ಕಲಾವಿದರಾಗಿ ದೀರ್ಘಕಾಲ ಸೇವೆ ಸಲ್ಲಿಸಿರುವ ಬಸವರಾಜ್ ಅವರು 900ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಸುದೀಪ್ ಅವರೊಂದಿಗೆ 30ಕ್ಕೂ ಅಧಿಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಸ್ಥಿರ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದ ಬಸವರಾಜ್ ಅವರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆಟೋ ರಿಕ್ಷಾ ನೀಡಲಾಗಿದೆ.

ದಿವಂಗತ ಸಾಯಿ ಮಧು ಅವರ ಕುಟುಂಬ: ಸುದೀಪ್ ಅವರ ತಾಯಿಗೆ ಆಪ್ತರಾಗಿದ್ದ ಸಾಯಿ ಮಧು ಅವರು ಒಂದು ವರ್ಷದ ಹಿಂದೆ ಮಿದುಳಿನ ಪಾರ್ಶ್ವವಾಯುವಿನಿಂದ ನಿಧನರಾಗಿದ್ದರು. ಇಬ್ಬರು ಪುಟ್ಟ ಹೆಣ್ಣುಮಕ್ಕಳಿರುವ ಕುಟುಂಬದಲ್ಲಿ, ಮಗನನ್ನು ಕಳೆದುಕೊಂಡ ವೃದ್ಧ ತಂದೆ ಬಾಡಿಗೆ ಆಟೋ ಓಡಿಸಿ ಮಕ್ಕಳ ಪಾಲನೆ ಮಾಡುತ್ತಿದ್ದರು. ಕುಟುಂಬದ ಪರಿಸ್ಥಿತಿಯನ್ನು ಅರಿತ ಸುದೀಪ್, ಸ್ವಂತ ಆಟೋ ರಿಕ್ಷಾ ನೀಡುವ ಮೂಲಕ ನೆರವಾಗಿದ್ದಾರೆ.

ಕೇವಲ ಆರ್ಥಿಕ ನೆರವು ನೀಡುವುದಕ್ಕೆ ಸೀಮಿತವಾಗದೆ, ಕುಟುಂಬಗಳು ಸ್ವಂತ ದುಡಿಮೆಯ ಮೂಲಕ ಬದುಕು ಕಟ್ಟಿಕೊಳ್ಳಲು ಜೀವನಾಧಾರ ಒದಗಿಸಿರುವ ಸುದೀಪ್ ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ತಾಯಿಯ ಸ್ಮರಣೆಯನ್ನು ಸಮಾಜಮುಖಿ ಕಾರ್ಯದ ಮೂಲಕ ಅರ್ಥಪೂರ್ಣಗೊಳಿಸಿರುವ ಸುದೀಪ್ ಅವರ ನಡೆ ಇತರರಿಗೂ ಮಾದರಿಯಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande