ವೈವಿಧ್ಯತೆ ಸಹಜ, ಏಕತೆ ಸತ್ಯ: ಡಾ. ಮೋಹನ್ ಭಾಗವತ್
ನ್ಯೂಯಾರ್ಕ್, 30ಆಗಸ್ಟ್ (ಹಿ.ಸ.): ಆ್ಯಂಕರ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಭಾರತಕ್ಕೆ ಏಕತೆ ಮತ್ತು ವೈವಿಧ್ಯತೆ ಎರಡೂ ಸ್ವಭಾವದಲ್ಲೇ ಅಂತರ್ಗತವಾಗಿವೆ ಎಂದು ಹೇಳಿದರು. ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ‘ಅಹೆಡ್ ಫೋರಂ’ ವತಿಯಿಂದ ಆಯೋಜ
राष्ट्रीय स्वयंसेवक संघ के सरसंघचालक डॉ. मोहन भागवत के संबोधन का फोटो आरएसएस के एक्स हैंडल से साभार।


ನ್ಯೂಯಾರ್ಕ್, 30ಆಗಸ್ಟ್ (ಹಿ.ಸ.):

ಆ್ಯಂಕರ್:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಭಾರತಕ್ಕೆ ಏಕತೆ ಮತ್ತು ವೈವಿಧ್ಯತೆ ಎರಡೂ ಸ್ವಭಾವದಲ್ಲೇ ಅಂತರ್ಗತವಾಗಿವೆ ಎಂದು ಹೇಳಿದರು.

ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ‘ಅಹೆಡ್ ಫೋರಂ’ ವತಿಯಿಂದ ಆಯೋಜಿಸಿದ್ದ ಸಾರ್ವತ್ರಿಕ ಏಕಾತ್ಮತಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಷ್ಟ್ರಗಳು ಕೇವಲ ಭೌಗೋಳಿಕ ಘಟಕಗಳಲ್ಲ. ಪ್ರತಿಯೊಂದು ರಾಷ್ಟ್ರವೂ ಒಂದು ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಸ್ವಾಮಿ ವಿವೇಕಾನಂದರು ಪ್ರತಿಯೊಂದು ರಾಷ್ಟ್ರಕ್ಕೂ ಜಗತ್ತಿಗೆ ನೀಡಬೇಕಾದ ಸಂದೇಶ, ಪೂರ್ಣಗೊಳಿಸಬೇಕಾದ ಧ್ಯೇಯ ಮತ್ತು ಸಾಕಾರಗೊಳಿಸಬೇಕಾದ ನಿಯತಿ ಇದೆ ಎಂದು ಹೇಳಿದ್ದರು ಎಂದರು.

ಅಮೆರಿಕ ಎಂದು ಹೇಳಿದಾಗ ಬಹುತ್ವದ ಭಾವನೆ ಮೂಡುತ್ತದೆ. ಭಾರತ ಎಂದಾಕ್ಷಣ ವೈವಿಧ್ಯತೆಯಲ್ಲಿ ಏಕತೆಯ ಅರಿವು ಮೂಡುತ್ತದೆ. ಭಾರತದ ವೈಶಿಷ್ಟ್ಯವೇ ಏಕತೆ ಮತ್ತು ವೈವಿಧ್ಯತೆಯ ಸಮನ್ವಯ ಎಂದು ಭಾಗವತ್ ಹೇಳಿದರು.

ಭಾರತದ ಜವಾಬ್ದಾರಿ ವೈವಿಧ್ಯತೆಯಲ್ಲಿ ಅಡಗಿರುವ ಏಕತೆಯ ಸತ್ಯವನ್ನು ಸಾಕ್ಷಾತ್ಕರಿಸಿ, ಆ ಸತ್ಯವನ್ನು ಜಗತ್ತಿಗೂ ಪರಿಚಯಿಸುವುದಾಗಿದೆ. ವೈವಿಧ್ಯತೆಯನ್ನು ಗೌರವಿಸಿ, ಸ್ವೀಕರಿಸಿ, ಸಂಭ್ರಮಿಸಬೇಕು. ಅದೇ ವೇಳೆ ನಮ್ಮೊಳಗಿನ ಏಕಾತ್ಮತೆಯ ಭಾವವನ್ನು ಸದಾ ಕಾಪಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಮನುಷ್ಯನನ್ನು ಪ್ರಾಣಿಗಳಿಗಿಂತ ಭಿನ್ನವಾಗಿಸುವ ಪ್ರಮುಖ ಗುಣ ಆಲೋಚನಾ ಸಾಮರ್ಥ್ಯ. ಸರಿಯಾದ ರೀತಿಯಲ್ಲಿ ಚಿಂತಿಸಿದರೆ ಮನುಷ್ಯ ವಿಶ್ವದ ಒಳಿತಿಗೆ ಕಾರಣನಾಗಬಹುದು. ಆದ್ದರಿಂದ ಚಿಂತನೆಯ ದಿಕ್ಕು ಅತ್ಯಂತ ಮಹತ್ವದ್ದಾಗಿದೆ. ಮನುಷ್ಯನಲ್ಲಿ ಸರಿ-ತಪ್ಪಿನ ವಿವೇಚನೆ ಇರುವುದರಿಂದ ಆತ ವಿಶ್ವದ ಬಗ್ಗೆ ಜವಾಬ್ದಾರಿ ಹೊಂದಿದ್ದಾನೆ ಎಂದು ಹೇಳಿದರು.

ನಮ್ಮ ದೇಹಗಳು ಮತ್ತು ಬಾಹ್ಯ ರೂಪಗಳು ಭಿನ್ನವಾಗಿದ್ದರೂ ನಮ್ಮೊಳಗೆ ಸಾಮಾನ್ಯವಾದ ಅಂಶವಿದೆ. ನಾವೆಲ್ಲರೂ ಪರಸ್ಪರ ಸಂಬಂಧ ಹೊಂದಿದ್ದೇವೆ. ಅಸ್ತಿತ್ವದ ಏಕತೆಯೇ ನಮ್ಮ ಸತ್ಯ. ಜಗತ್ತನ್ನು ಒಂದಾಗಿ ನೋಡುವ ದೃಷ್ಟಿಯೇ ನಮ್ಮ ಜೀವನದ ದೃಷ್ಟಿಕೋನವಾಗಬೇಕು ಎಂದು ಭಾಗವತ್ ಪ್ರತಿಪಾದಿಸಿದರು.

ಭಾರತದ ಸಂತ-ಮಹಾತ್ಮರು ದುಷ್ಟರ ಮನಸ್ಸಿನಿಂದಲೂ ಶತ್ರುತ್ವದ ಭಾವನೆ ದೂರವಾಗಲಿ ಎಂದು ಪ್ರಾರ್ಥಿಸುತ್ತಾರೆ. ‘ಬದುಕು ಮತ್ತು ಬದುಕಲು ಬಿಡು’ ಎಂಬುದು ಒಂದು ಜೀವನ ದೃಷ್ಟಿಯಾದರೆ, ತಮ್ಮ ಮಾತನ್ನು ಕೇಳುವವರಿಗಷ್ಟೇ ಬದುಕುವ ಹಕ್ಕು ಎಂಬುದು ಮತ್ತೊಂದು ಪ್ರವೃತ್ತಿ. ಇಂತಹ ಮನೋಭಾವ ಸಮಾಜಕ್ಕೆ ಅಪಾಯಕಾರಿ ಎಂದು ಅವರು ಹೇಳಿದರು.

ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ತಮ್ಮ ಕರ್ಮಭೂಮಿಯ ಬಗ್ಗೆ ನಿಷ್ಠೆ ಹೊಂದಿರಬೇಕು. ಆ ಕರ್ತವ್ಯವನ್ನು ನಿರ್ವಹಿಸಿದ ಬಳಿಕ ಭಾರತಕ್ಕಾಗಿ ಏನಾದರೂ ಮಾಡಬೇಕೆಂಬ ಆಸೆ ಇದ್ದರೆ, ಭಾರತ ನೀಡಿದ ಮೌಲ್ಯಗಳಿಗೆ ಅನುಗುಣವಾಗಿ ಜೀವನ ನಡೆಸಬೇಕು ಎಂದು ಕರೆ ನೀಡಿದರು.

ಭಾರತದ ಧೇಯ ತನ್ನ ಜೀವನದೃಷ್ಟಿಯನ್ನು ಜಗತ್ತಿಗೆ ತಲುಪಿಸುವುದಾಗಿದೆ. ಹಿಮಾಲಯದಿಂದ ಸಮುದ್ರದವರೆಗೆ ಭಾರತದ ಒಂದೇ ಜವಾಬ್ದಾರಿ ಈ ಜ್ಞಾನವನ್ನು ವಿಶ್ವಕ್ಕೆ ತಲುಪಿಸುವುದು. ಆದರೆ ಭಾರತೀಯರು ಇದನ್ನು ಕೇವಲ ಉಪದೇಶದ ಮೂಲಕವಲ್ಲ, ತಮ್ಮ ಆಚಾರ-ವಿಚಾರಗಳ ಮೂಲಕ ಜಗತ್ತಿಗೆ ತೋರಿಸಬೇಕು ಎಂದರು.

ಧರ್ಮವೆಂದರೆ ಸಂಪೂರ್ಣ ಸೃಷ್ಟಿಯನ್ನು ಧರಿಸುವ ನಿಯಮ. ಮನುಷ್ಯ ತನ್ನ ಜೀವನದ ಗುಣಮಟ್ಟವನ್ನು ಸುಸಂಘಟಿತಗೊಳಿಸುವ ನಿಯಮವೂ ಧರ್ಮವೇ. ಮಧ್ಯಮ ಮಾರ್ಗವೇ ಧರ್ಮದ ಸಾರ ಎಂದು ಭಾಗವತ್ ಹೇಳಿದರು.

ನಾವು ಏಕಾತ್ಮತೆಯಲ್ಲಿ ಒಂದಾಗಿದ್ದೇವೆ ಮತ್ತು ವೈವಿಧ್ಯತೆಯಿಂದ ಅಲಂಕರಿಸಲ್ಪಟ್ಟಿದ್ದೇವೆ. ವೈವಿಧ್ಯತೆ ಸಹಜವಾಗಿದ್ದು, ಏಕತೆ ಸತ್ಯವಾಗಿದೆ. ಜಗತ್ತಿನಿಂದ ನಾವು ಬಹಳಷ್ಟನ್ನು ಸ್ವೀಕರಿಸಿದ್ದೇವೆ. ಆದ್ದರಿಂದ ಜಗತ್ತಿಗೆ ಮರಳಿ ನೀಡುವುದು ನಮ್ಮ ಕರ್ತವ್ಯ. ನಾವು ಎಷ್ಟು ಸಂಪಾದಿಸುತ್ತೇವೆ ಎಂಬುದಕ್ಕಿಂತ ಎಷ್ಟು ಹಂಚಿಕೊಳ್ಳುತ್ತೇವೆ ಎಂಬುದು ಮುಖ್ಯ ಎಂದು ಅವರು ತಿಳಿಸಿದರು.

ಭಾರತದ ಪರಂಪರೆಯೇ ಪಡೆದದ್ದನ್ನು ಸಮಾಜಕ್ಕೆ ಮರಳಿ ನೀಡುವುದಾಗಿದೆ. ಭಾರತೀಯ ಜೀವನದೃಷ್ಟಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಮತ್ತು ಸುಸ್ಥಿರ ಜೀವನ ಪದ್ಧತಿಯ ಆದರ್ಶವನ್ನು ಜಗತ್ತಿನ ಮುಂದೆ ಇಡುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿ ಎಂದು ಡಾ. ಮೋಹನ್ ಭಾಗವತ್ ಹೇಳಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande