ಜಿ.ಎಸ್. ಶಿವರುದ್ರಪ್ಪನವರ ಕಾವ್ಯಕ್ಕೆ ಸಹಜ ನ್ಯಾಯ ದಕ್ಕಿಲ್ಲ ; ಡಾ. ಪ್ರಕಾಶ್ ಮಂಟೇದಾ
ಜಿ.ಎಸ್. ಶಿವರುದ್ರಪ್ಪನವರ ಕಾವ್ಯಕ್ಕೆ ಸಹಜ ನ್ಯಾಯ ದಕ್ಕಿಲ್ಲ ; ಡಾ. ಪ್ರಕಾಶ್ ಮಂಟೇದಾ
ಓದುಗ ಕೇಳುಗ ಬಳಗದಿಂದ ಕೋಲಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ. ಎಸ್. ಎಸ್. ಕಾವ್ಯಧಾರೆಯ ಬಗ್ಗೆ ಸಂಸ್ಕೃತಿ ಚಿಂತಕ ಡಾ. ಪ್ರಕಾಶ್ ಮಂಟೇದಾ ಮಾತನಾಡಿದರು.


ಕೋಲಾರ, ೩೦ ಆಗಸ್ಟ್ (ಹಿ.ಸ)

ಆ್ಯಂಕರ್ : ಸೈದ್ಧಾಂತಿಕ ವ್ಯಾಖ್ಯಾನ ದೃಷ್ಟಿಕೋನಗಳಿಗೆ ಸೀಮಿತಗೊಳಿಸಿ ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರನ್ನು ವಿಮರ್ಶಕರು ಸಮನ್ವಯ ಕವಿ ಎಂಬ ಸೀಮಿತ ಅರ್ಥ ವ್ಯಾಪ್ತಿಗೆ ಕಟ್ಟಿ ಹಾಕಿದ್ದಾರೆ. ಅವರ ಕಾವ್ಯಕ್ಕೆ ಸಲ್ಲಬೇಕಾದ ಸಹಜ ನ್ಯಾಯ ದಕ್ಕುತಿಲ್ಲ ಎಂದು ವಿಮರ್ಶಕ, ಸಂಸ್ಕೃತಿ ಚಿಂತಕ ಡಾ. ಪ್ರಕಾಶ್ ಮಂಟೇದಾ ಅವರು ಅಭಿಪ್ರಾಯ ಪಟ್ಟರು.

ಕೋಲಾರದ ಓದುಗ ಕೇಳುಗ ನಮ್ಮ ನಡೆ ಬಳಗದ ೬೪ನೇ ತಿಂಗಳ ಕಾರ್ಯಕ್ರಮದಲ್ಲಿ ಅವರು 'ಜಿ.ಎಸ್.ಎಸ್. ಕಾವ್ಯ' ಕುರಿತು ಮಾತನಾಡಿದರು. ಸಂಸ್ಕೃತಿ ಧಾರ್ಮಿಕತೆ ಪರಂಪರೆಗಳ ವಿಕಾರಗಳನ್ನು ಮೀರುವ ಜಿ. ಎಸ್. ಎಸ್. ಕಾವ್ಯಧಾರೆಯಲ್ಲಿ ಮಾನವ ಜೀವನದ ತರಂಗಗಳಿವೆ, ಪ್ರೀತಿಯ ಜೀವಂತಿಕೆ ಇದೆ. ನಾವಿಂದು ಅವರ ಕಾವ್ಯದಲ್ಲಿನ ಸೃಜನಶೀಲ ಘಳಿಗೆಗಳನ್ನು ಮರು ಅನ್ವೇಷಿಸಿ ಈ ಕಟ್ಟುಪಾಡುಗಳಿಂದ ಬಿಡುಗಡೆ ಹೊಂದಬೇಕಾದ ಅವಶ್ಯಕತೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ, ವಿಮರ್ಶಕಿ ಹಾಗು ಪ್ರಾಧ್ಯಾಪಕರಾದ ಡಾ. ಎಲ್. ಜಿ. ಮೀರಾ ಮಾತನಾಡಿ ಜಿ. ಎಸ್. ಎಸ್. ಸಾಹಿತ್ಯೇತರ ಜನ ಮನವನ್ನು ಗೆದ್ದ ಕವಿ ಎಂದು ಬಣ್ಣಿಸಿದರು. ಜಿ. ಎಸ್. ಎಸ್. ಅವರ ಕವಿತೆಗಳು ಬದುಕಿನ ಮೌಲ್ಯಗಳನ್ನು ಗೌರವಿಸುವ, ವಿಸ್ತರಿಸುವ, ಮನುಷ್ಯತ್ವವನ್ನು ಪ್ರತಿಪಾದಿಸುವ ಗತಿ ಬಿಂಬ ಎಂದು ವಿಶ್ಲೇಷಿಸಿದರು. ಕಾಲವನ್ನು ಕುರಿತ ಅವರ ಕವಿತೆಗಳು ಬೆಳವಣಿಗೆಯನ್ನು ಪ್ರತಿನಿಧಿಸುವುದಲ್ಲದೆ ಬದುಕಿನಲ್ಲಿ ಭರವಸೆಯನ್ನು ಮೂಡಿಸುತ್ತದೆ. ಇವುಗಳನ್ನು ಇಂದು ಮಕ್ಕಳಿಗೆ ತಲುಪಿಸುವ ಮೂಲಕ ಜಿಎಸ್ಎಸ್ ಅವರನ್ನು ಮರು ಸೃಷ್ಟಿಸುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.

ಸ್ನಾತಕೋತ್ತರ ವಿದ್ಯಾರ್ಥಿ ಹೇಮಂತ್ ಜಿಎಸ್ಎಸ್ ಅವರ 'ಎಲ್ಲೋ ಹುಡುಕಿದೆ' ಕವಿತೆಯನ್ನು ಹಾಡಿದರು. ನಂತರ ನಡೆದ ಅರ್ಥಪೂರ್ಣ ಚರ್ಚೆಯಲ್ಲಿ ವಿಮರ್ಶಕ, ಸಾಹಿತಿ ಡಾ. ವಿ ಚಂದ್ರಶೇಖರ ನಂಗಲಿ, ಸಾಹಿತಿ, ಅನುವಾದಕ ಸ. ರಘುನಾಥ, ನಿವೃತ್ತ ಪ್ರಾಧ್ಯಾಪಕ ಪ್ರೊ. ಮುನಿರತ್ನಪ್ಪ ರವರು ಭಾಗವಹಿಸಿ ಜಿಎಸ್ಎಸ್ ಕಾವ್ಯ ಮತ್ತು ವ್ಯಕ್ತಿತ್ವ ಕುರಿತಂತೆ ಅನೇಕ ವಿಚಾರಗಳನ್ನು ಮಂಡಿಸಿದರು. ಲೇಖಕಿ ಹಾಗೂ ಉಪನ್ಯಾಸಕಿ ಡಾ.ನೇತ್ರಾವತಿ ಕಾರ್ಯಕ್ರಮವನ್ನು ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande