ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ವೇಗ ಇಳಿಕೆ
ಬೆನ್ನಿಗಾನಹಳ್ಳಿ–ಬೈಯಪ್ಪನಹಳ್ಳಿ ನಡುವೆ ತಾಂತ್ರಿಕ ನಿರ್ವಹಣಾ ಕಾಮಗಾರಿ
purple-line-metro-speed-reduced-between-benniganahalli-baiyappanahalli-due-to-maintenance


ಬೆಂಗಳೂರು, 29 ಆಗಸ್ಟ್ (ಹಿ.ಸ.)

ಆ್ಯಂಕರ್:

ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತಾತ್ಕಾಲಿಕವಾಗಿ ರೈಲು ವೇಗ ಇಳಿಕೆ ಮಾಡಲಾಗಿದೆ. ಬೆನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವಿನ ಓಪನ್ ವೆಬ್ ಗರ್ಡರ್ ನಲ್ಲಿ ನಿಗದಿತ ತಾಂತ್ರಿಕ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಸುರಕ್ಷತೆಯ ದೃಷ್ಟಿಯಿಂದ ಈ ಭಾಗದಲ್ಲಿ ಮೆಟ್ರೋ ರೈಲುಗಳ ವೇಗವನ್ನು ತಾತ್ಕಾಲಿಕವಾಗಿ ಗಂಟೆಗೆ 65 ಕಿ.ಮೀ.ನಿಂದ ಗರಿಷ್ಠ 40 ಕಿ.ಮೀ.ಗೆ ಇಳಿಸಲಾಗಿದೆ. ತಾಂತ್ರಿಕ ಮೇಲ್ವಿಚಾರಣೆಯಲ್ಲಿ ಪರಿಣತ ತಜ್ಞರ ತಂಡವು ಗರ್ಡರ್ನ ನಿಯತಕಾಲಿಕ ತಪಾಸಣೆ ಹಾಗೂ ಅಗತ್ಯ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿದೆ.

ನಿರ್ವಹಣಾ ಕಾಮಗಾರಿ ನಡೆಯುವ ಅವಧಿಯಲ್ಲಿ ವೇಗ ನಿರ್ಬಂಧ ವಿಧಿಸುವುದು ರೈಲು ಕಾರ್ಯಾಚರಣೆಯ ಸುರಕ್ಷತಾ ನಿಯಮಾವಳಿಗಳಲ್ಲಿನ ಪ್ರಮಾಣಿತ ಕ್ರಮವಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ.

ವೇಗ ಇಳಿಕೆ ಮಾಡಲಾಗಿದ್ದರೂ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ ಎಂದಿನಂತೆ ಮುಂದುವರಿಯಲಿದೆ. ಆದರೆ ಪ್ರಯಾಣದ ಒಟ್ಟು ಅವಧಿಯಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸ ಅಥವಾ ತಡವಾಗುವ ಸಾಧ್ಯತೆ ಇದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.

ಈ ತಾಂತ್ರಿಕ ನಿರ್ವಹಣಾ ಕಾಮಗಾರಿ 2026ರ ಅಕ್ಟೋಬರ್ ಎರಡನೇ ವಾರದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕಾಮಗಾರಿ ಪೂರ್ಣಗೊಂಡ ಬಳಿಕ ತಾಂತ್ರಿಕ ಮೌಲ್ಯಮಾಪನ ನಡೆಸಿ, ರೈಲುಗಳ ವೇಗದ ಮಿತಿಯನ್ನು ಮೊದಲಿನ ಸ್ಥಿತಿಗೆ ತರಲಾಗುವುದು ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ.

ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ವಿಶ್ವಾಸಾರ್ಹ ಮೆಟ್ರೋ ಸೇವೆ ಒದಗಿಸುವ ಉದ್ದೇಶದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಪ್ರಯಾಣಿಕರು ಸಹಕರಿಸುವಂತೆ ಬಿಎಂಆರ್ಸಿಎಲ್ ಮನವಿ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande