
ಬೆಂಗಳೂರು, 29 ಆಗಸ್ಟ್ (ಹಿ.ಸ.):
ಆ್ಯಂಕರ್:
ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ₹5.50 ಕೋಟಿ ಸಂಶೋಧನಾ ಅನುದಾನ ಮಂಜೂರು ಮಾಡಿದೆ.ಅಪರೂಪದ ಆನುವಂಶಿಕ ಚರ್ಮರೋಗವಾದ ಎಪಿಡರ್ಮೊಲಿಸಿಸ್ ಬುಲ್ಲೋಸಾ ಕುರಿತು ಅಧ್ಯಯನ ನಡೆಸಲು ಈ ಅನುದಾನ ನೀಡಲಾಗಿದ್ದು, ನಾಲ್ಕು ವರ್ಷಗಳ ಕಾಲ ಸಂಶೋಧನಾ ಯೋಜನೆ ನಡೆಯಲಿದೆ.
‘ಎಪಿಡರ್ಮೊಲಿಸಿಸ್ ಬುಲ್ಲೋಸಾ ಕಾಯಿಲೆಗೆ ಕೈಗೆಟುಕುವ ದರದಲ್ಲಿ ರೋಗಪತ್ತೆ ಮತ್ತು ಚಿಕಿತ್ಸೆ’ ಎಂಬ ಹೆಸರಿನ ಯೋಜನೆಯನ್ನು ಶ್ರೀ ಮಧುಸೂದನ ಸಾಯಿ ಆಸ್ಪತ್ರೆಯ ಡಾ. ವಂಶೀಕೃಷ್ಣ ಯೆನಮಂದ್ರ ಪ್ರಧಾನ ಸಂಶೋಧಕರಾಗಿ ಮುನ್ನಡೆಸಲಿದ್ದಾರೆ.ಆಸ್ಪತ್ರೆಯ ಡಾ. ದಿವ್ಯಾ ಶೇಷಾದ್ರಿ, ಡಾ. ಮನೋಜ್ ಶ್ರೀನಿವಾಸ್ ಹಾಗೂ ಮೆಹಬೂಬ್ನಗರದ ಎಸ್ವಿಎಸ್ ವೈದ್ಯಕೀಯ ಕಾಲೇಜಿನ ಡಾ. ಶರತ್ ಚಂದ್ರ ಕೊಂಡ ಸಹ-ಸಂಶೋಧಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಎಪಿಡರ್ಮೊಲಿಸಿಸ್ ಬುಲ್ಲೋಸಾ ಅಪರೂಪದ ಆನುವಂಶಿಕ ಚರ್ಮರೋಗಗಳ ಗುಂಪಾಗಿದ್ದು, ಸಣ್ಣ ಪ್ರಮಾಣದ ಉಜ್ಜುವಿಕೆ ಅಥವಾ ಗಾಯವಾದರೂ ಚರ್ಮದ ಮೇಲೆ ಗುಳ್ಳೆಗಳು ಹಾಗೂ ಗಾಯಗಳು ಉಂಟಾಗುತ್ತವೆ. ಚರ್ಮವು ಚಿಟ್ಟೆಯ ರೆಕ್ಕೆಗಳಂತೆ ಸೂಕ್ಷ್ಮವಾಗಿರುವುದರಿಂದ ಇದನ್ನು ‘ಚಿಟ್ಟೆ ಚರ್ಮದ ಕಾಯಿಲೆ’ ಎಂದೂ ಕರೆಯಲಾಗುತ್ತದೆ.ಈ ಕಾಯಿಲೆಯಿಂದ ದೀರ್ಘಕಾಲೀನ ಗಾಯಗಳು, ಕಲೆಗಳು, ಪೌಷ್ಟಿಕಾಂಶದ ಕೊರತೆ ಹಾಗೂ ಚರ್ಮದ ಕ್ಯಾನ್ಸರ್ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ.
ಭಾರತದಲ್ಲಿ ಈ ಕಾಯಿಲೆಗೆ ಸಂಬಂಧಿಸಿದ ರಾಷ್ಟ್ರೀಯ ಮಟ್ಟದ ನೋಂದಣಿ ವ್ಯವಸ್ಥೆ ಇಲ್ಲದಿರುವುದು ಹಾಗೂ ಆನುವಂಶಿಕ ಪರೀಕ್ಷೆ ಮತ್ತು ವಿಶೇಷ ವೈದ್ಯಕೀಯ ಸೇವೆಗಳು ಸೀಮಿತವಾಗಿರುವುದು ಪ್ರಮುಖ ಸವಾಲಾಗಿದೆ. ಇದರಿಂದ ರೋಗಪತ್ತೆಯಲ್ಲಿ ವಿಳಂಬವಾಗುವುದರ ಜೊತೆಗೆ, ರೋಗಿಗಳು ಮತ್ತು ಕುಟುಂಬಗಳಿಗೆ ಆನುವಂಶಿಕ ಸಲಹೆ ಪಡೆಯಲು ತೊಂದರೆ ಉಂಟಾಗುತ್ತಿದೆ.
ಐಸಿಎಂಆರ್ ಅನುದಾನದಡಿ ನಡೆಯಲಿರುವ ಸಂಶೋಧನೆಯು ಭಾರತೀಯ ರೋಗಿಗಳಿಗೆ ಸೂಕ್ತವಾಗುವ ಸಮಗ್ರ ಹಾಗೂ ನಿರ್ದಿಷ್ಟ ಚಿಕಿತ್ಸಾ ವಿಧಾನವನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಲಿದೆ. ಪ್ರಸ್ತುತ ಲಭ್ಯವಿರುವ ಸಂಪೂರ್ಣ ವಂಶವಾಹಿ ವಿಶ್ಲೇಷಣಾ ಪರೀಕ್ಷೆಗಳಿಗೆ ಹೋಲಿಸಿದರೆ ಶೇ.60ಕ್ಕೂ ಹೆಚ್ಚು ಕಡಿಮೆ ವೆಚ್ಚದಲ್ಲಿ ಉದ್ದೇಶಿತ ಆನುವಂಶಿಕ ಪರೀಕ್ಷಾ ವಿಧಾನಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.
ಕಾಯಿಲೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ವಂಶವಾಹಿಗಳನ್ನು ಗುರುತಿಸುವುದು, ಗರ್ಭದಲ್ಲಿರುವ ಶಿಶುವಿನಲ್ಲಿ ಕಾಯಿಲೆಯನ್ನು ಪತ್ತೆಹಚ್ಚುವ ಸಾಧ್ಯತೆಗಳನ್ನು ಪರಿಶೀಲಿಸುವುದು ಹಾಗೂ ದೇಹದ ಕೆಲವು ಜೀವಕೋಶಗಳಲ್ಲಿ ಸಹಜವಾಗಿ ನಡೆಯುವ ಆನುವಂಶಿಕ ಸ್ವಯಂ-ಸರಿಪಡಿಸುವ ಪ್ರಕ್ರಿಯೆಯನ್ನು ಅಧ್ಯಯನ ಮಾಡುವುದು ಯೋಜನೆಯ ಪ್ರಮುಖ ಭಾಗವಾಗಿದೆ.
ಈ ಸಂಶೋಧನೆಯಲ್ಲಿ ಈಗಾಗಲೇ ಲಭ್ಯವಿರುವ ಮತ್ತು ಕಡಿಮೆ ವೆಚ್ಚದಲ್ಲಿ ಬಳಸಬಹುದಾದ ಔಷಧಗಳನ್ನೂ ಪರಿಶೀಲಿಸಲಾಗುತ್ತದೆ. ಕಾಯಿಲೆಗೆ ಸಂಬಂಧಿಸಿದ ಜೈವಿಕ ಪ್ರಕ್ರಿಯೆಗಳ ಮೇಲೆ ಔಷಧಗಳು ಬೀರುವ ಪರಿಣಾಮವನ್ನು ಅಧ್ಯಯನ ಮಾಡುವುದರ ಜೊತೆಗೆ, ರೋಗಿಯ ಆನುವಂಶಿಕ ಗುಣಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡುವ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತದೆ.
ಕಾಯಿಲೆಯ ತಡೆಗಟ್ಟುವಿಕೆ, ಮುಂಚಿತ ಪತ್ತೆ, ಚಿಕಿತ್ಸೆ ಹಾಗೂ ಆನುವಂಶಿಕ ಪರೀಕ್ಷೆ ಆಧಾರಿತ ವೈದ್ಯಕೀಯ ವಿಧಾನಗಳನ್ನು ಒಂದೇ ಸಂಶೋಧನಾ ಚೌಕಟ್ಟಿನಡಿ ತರುವುದು ಯೋಜನೆಯ ಮತ್ತೊಂದು ಪ್ರಮುಖ ಉದ್ದೇಶವಾಗಿದೆ. ಆರಂಭಿಕ ಹಂತದಲ್ಲೇ ಕಾಯಿಲೆ ಪತ್ತೆಹಚ್ಚುವುದು, ಪರಿಣಾಮಕಾರಿ ಆನುವಂಶಿಕ ಸಲಹೆ ನೀಡುವುದು ಹಾಗೂ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸಾ ಕ್ರಮಗಳನ್ನು ರೂಪಿಸುವತ್ತ ಸಂಶೋಧಕರು ಗಮನಹರಿಸಲಿದ್ದಾರೆ.
ಯೋಜನೆಯ ಪ್ರಧಾನ ಸಂಶೋಧಕರಾದ ಡಾ. ವಂಶೀಕೃಷ್ಣ ಯೆನಮಂದ್ರ ಮಾತನಾಡಿ, ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಸರಿಯಾದ ಸಮಯದಲ್ಲಿ ರೋಗಪತ್ತೆ ಹಾಗೂ ವಿಶೇಷ ವೈದ್ಯಕೀಯ ಸೇವೆಗಳು ಲಭ್ಯವಾಗದಿರುವುದು ದೊಡ್ಡ ಸವಾಲಾಗಿದೆ. ಕಡಿಮೆ ವೆಚ್ಚದಲ್ಲಿ, ಎಲ್ಲೆಡೆ ಅಪರೂಪದ ಕಾಯಿಲೆಗಳಿಗೆ ನಿರ್ದಿಷ್ಟ ಚಿಕಿತ್ಸಾ ಕ್ರಮಗಳು ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿ ಎಂದು ಹೇಳಿದರು.
ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ವೈದ್ಯಕೀಯ ಶಿಕ್ಷಣ ಹಾಗೂ ಸೇವೆಗಳ ಜೊತೆಗೆ ಸಂಶೋಧನೆಗೂ ಆದ್ಯತೆ ನೀಡುತ್ತಿದೆ. ಸಂಸ್ಥೆಯ ಸಂಶೋಧನಾ ವಿಭಾಗವು ಅಪರೂಪದ ಆನುವಂಶಿಕ ಕಾಯಿಲೆಗಳು, ಮಾನಸಿಕ ಆರೋಗ್ಯ, ದೀರ್ಘಕಾಲೀನ ಅಸಾಂಕ್ರಾಮಿಕ ಕಾಯಿಲೆಗಳು ಹಾಗೂ ತಾಯಿ-ಮಗು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೂಲಭೂತ, ಅನ್ವಯಿಕ ಮತ್ತು ಕ್ಲಿನಿಕಲ್ ಸಂಶೋಧನೆಗಳನ್ನು ನಡೆಸುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R