
ಬೆಂಗಳೂರು, 29 ಆಗಸ್ಟ್ (ಹಿ.ಸ.)
ಆ್ಯಂಕರ್:
ನಗರದ ಪ್ರತಿಭಾವಂತ ವಿದ್ಯಾರ್ಥಿಗಳೇ ಬೆಂಗಳೂರಿನ ಹೆಮ್ಮೆ ಹಾಗೂ ರಾಜ್ಯ, ದೇಶದ ಭವಿಷ್ಯ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ನಗರದ ಐತಿಹಾಸಿಕ ಟೌನ್‌ಹಾಲ್‌ನಲ್ಲಿ ನಡೆದ ‘ನಮ್ಮೂರು ಹೆಮ್ಮೆ’ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಜಿಬಿಎ ಹಾಗೂ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವತಿಯಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಜಿಬಿಎ ಶಾಲೆಗಳ 181 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ 106 ಎಸ್‌ಎಸ್‌ಎಲ್‌ಸಿ, 45 ಪಿಯುಸಿ ಹಾಗೂ ಜಿಬಿಎ ಶಾಲೆಗಳ 30 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಾಧಕರಿಗೆ ಪ್ರಮಾಣಪತ್ರ, ಪದಕ ಹಾಗೂ ಸ್ಮರಣಿಕೆಗಳನ್ನು ವಿತರಿಸಲಾಯಿತು. ಅತ್ಯುತ್ತಮ ಸಾಧನೆ ಮಾಡಿದ ಐವರು ಎಸ್‌ಎಸ್‌ಎಲ್‌ಸಿ ಹಾಗೂ ಮೂವರು ಪಿಯುಸಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ಗಳನ್ನು ವಿಶೇಷ ಬಹುಮಾನವಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣ ಬೈರೇಗೌಡ, ಶೇ.99ಕ್ಕಿಂತ ಹೆಚ್ಚು ಅಂಕ ಗಳಿಸುವುದು ಸಾಮಾನ್ಯ ಸಾಧನೆಯಲ್ಲ. ಇದಕ್ಕೆ ವರ್ಷಗಳ ಶಿಸ್ತು, ಪರಿಶ್ರಮ ಮತ್ತು ನಿರಂತರ ಪ್ರಯತ್ನ ಅಗತ್ಯ ಎಂದರು.
ಸೌಲಭ್ಯಗಳ ಕೊರತೆ ಸಾಧನೆಗೆ ಅಡ್ಡಿಯಾಗಬಾರದು. ಕಲಿಯುವ ಆಸಕ್ತಿ, ಗುರಿ ಮತ್ತು ಪರಿಶ್ರಮ ಇದ್ದರೆ ಯಾವುದೇ ಹಿನ್ನೆಲೆಯ ವಿದ್ಯಾರ್ಥಿಯೂ ಶ್ರೇಷ್ಠ ಸಾಧನೆ ಮಾಡಬಹುದು. ಸೀಮಿತ ಆರ್ಥಿಕ ಹಿನ್ನೆಲೆಯ ಕುಟುಂಬಗಳ ಮಕ್ಕಳು ಉತ್ತಮ ಅಂಕ ಗಳಿಸಿರುವ ಹಲವು ಉದಾಹರಣೆಗಳಿವೆ ಎಂದು ಹೇಳಿದರು.
ವಿದ್ಯಾರ್ಥಿಗಳ ಪ್ರತಿಭೆಯನ್ನು ಕೇವಲ ಪರೀಕ್ಷಾ ಅಂಕಗಳಿಂದ ಅಳೆಯಬಾರದು. ಕ್ರೀಡೆ, ಕಲೆ, ವಿಜ್ಞಾನ, ತಂತ್ರಜ್ಞಾನ ಹಾಗೂ ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರಗಳ ಪ್ರತಿಭೆ ಮತ್ತು ಕೌಶಲ್ಯಕ್ಕೂ ಸಮಾನ ಮಾನ್ಯತೆ ದೊರೆಯಬೇಕು. ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸಮರ್ಪಣೆ ಮತ್ತು ಪರಿಶ್ರಮದಿಂದ ಶ್ರೇಷ್ಠತೆ ಸಾಧಿಸಬೇಕು ಎಂದು ಸಚಿವರು ಕಿವಿಮಾತು ಹೇಳಿದರು.
ಐತಿಹಾಸಿಕ ಟೌನ್‌ಹಾಲ್‌ನಲ್ಲಿ ವಿದ್ಯಾರ್ಥಿಗಳನ್ನು ಗೌರವಿಸಿರುವುದು ಅವರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಇತರ ವಿದ್ಯಾರ್ಥಿಗಳಿಗೂ ಸಾಧನೆಯ ಸ್ಫೂರ್ತಿ ನೀಡಲಿದೆ ಎಂದು ಅವರು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R