
ಬೆಂಗಳೂರು, 29 ಆಗಸ್ಟ್ (ಹಿ.ಸ.):
ಆ್ಯಂಕರ್:
ನಗರದಲ್ಲಿ ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಆರೋಪಿಸಲಾಗಿರುವ ಬೈಕ್ ಟ್ಯಾಕ್ಸಿ ಸೇವೆಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳು ಸಾರಿಗೆ ಇಲಾಖೆಯ ಮೊರೆ ಹೋಗಿವೆ.
ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ಸಾರಿಗೆ ಆಯುಕ್ತರ ಕಚೇರಿ ಮುಂದೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು. ಬೈಕ್ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ಮೊಬೈಲ್ ಆ್ಯಪ್ಗಳನ್ನು ಗೂಗಲ್ ಪ್ಲೇ ಸ್ಟೋರ್ ಸೇರಿದಂತೆ ವಿವಿಧ ಡಿಜಿಟಲ್ ಪ್ಲಾಟ್ಫಾರ್ಮ್ಗಳಿಂದ ತಕ್ಷಣವೇ ತೆಗೆದುಹಾಕಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
ಬೈಕ್ ಟ್ಯಾಕ್ಸಿಗಳು ಸೂಕ್ತ ಕಾನೂನು ಚೌಕಟ್ಟು ಹಾಗೂ ಸಾರಿಗೆ ಪರವಾನಗಿ ಇಲ್ಲದೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಂಘಟನೆಗಳು ಆರೋಪಿಸಿವೆ. ಖಾಸಗಿ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದರಿಂದ ಪ್ರಯಾಣಿಕರ ಸುರಕ್ಷತೆ ಪ್ರಶ್ನಾರ್ಹವಾಗಿದೆ ಎಂದು ತಿಳಿಸಿವೆ.
ಚಾಲಕರ ಪೊಲೀಸ್ ಪರಿಶೀಲನೆ, ಸೂಕ್ತ ವಿಮೆ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆಯೂ ಒಕ್ಕೂಟ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಪೊಲೀಸರಿಗೆ ದೂರು ನೀಡಿರುವ ಸಂಘಟನೆ, ಕ್ರಮ ಕೈಗೊಳ್ಳಲು 15 ದಿನಗಳ ಗಡುವು ನೀಡಿದೆ.
15 ದಿನಗಳೊಳಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತಮ್ಮ ವಾಹನಗಳಿಗೆ ಕಪ್ಪು ಬಾವುಟ ಅಳವಡಿಸಿ ಶಾಂತಿಯುತ ಪ್ರತಿಭಟನೆ ಮುಂದುವರಿಸುವುದಾಗಿ ಒಕ್ಕೂಟ ಎಚ್ಚರಿಕೆ ನೀಡಿದೆ.
‘ಒಂದು ನಗರ, ಒಂದೇ ದರ’ಕ್ಕೆ ಆಗ್ರಹಇದೇ ವೇಳೆ ಆಟೋ ಮತ್ತು ಕ್ಯಾಬ್ ಆ್ಯಪ್ಗಳು ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಶುಲ್ಕವನ್ನು ಸಾರ್ವಜನಿಕರಿಂದ ವಸೂಲಿ ಮಾಡುತ್ತಿವೆ ಎಂದು ಚಾಲಕರು ಆರೋಪಿಸಿದ್ದಾರೆ.
ನಗರದಲ್ಲಿ ‘ಒಂದು ನಗರ, ಒಂದೇ ದರ’ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.ಬೈಕ್ ಟ್ಯಾಕ್ಸಿ ಸೇವೆಗಳ ನಿಯಂತ್ರಣ, ಪ್ರಯಾಣಿಕರ ಸುರಕ್ಷತೆ ಹಾಗೂ ದರ ನಿಗದಿ ವಿಚಾರದಲ್ಲಿ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R