ವಚನವೆಂದರೆ ಸಾಮಾಜಿಕ ಸಾಮರಸ್ಯದ ಚಿಂತನೆಯಾಗಿದೆ : ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ
ವಚನವೆಂದರೆ ಸಾಮಾಜಿಕ ಸಾಮರಸ್ಯದ ಚಿಂತನೆಯಾಗಿದೆ : ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ
ಮೈಸೂರು ಜಿಲ್ಲೆಯ ನಂಜನಗೂಡಿನ ಜೆಎಸ್ಎಸ್ ಕಾಲೇಜಿನಲ್ಲಿ “ವಚನ ಸಾಹಿತ್ಯ ಮತ್ತು ವ್ಯಕ್ತಿತ್ವ ವಿಕಸನ” ಕುರಿತು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಮಾತನಾಡಿದರು.


ಕೋಲಾರ, ೨೯ ಆಗಸ್ಟ್ (ಹಿ.ಸ)

ಆ್ಯಂಕರ್ : ವಚನವೆಂದರೆ ಸಾಹಿತ್ಯ ಪ್ರಕಾರ ಮಾತ್ರವಲ್ಲ ಅದೊಂದು ಮಹೋನ್ನತ ಜೀವನದೃಷ್ಟಿ. ಸಾಮಾಜಿಕ ಸಾಮರಸ್ಯದ ಚಿಂತನೆಯಾಗಿವೆ. ಕಾಯಕಜೀವಿಗಳ ಅಧ್ಯಾತ್ಮಿಕ ಅನುಭವ ಮತ್ತು ವಿಶ್ವಮಾನವತೆಯನ್ನೇ ಕೇಂದ್ರದಲ್ಲಿಟ್ಟುಕೊಂಡ ಸಾಂಸ್ಕೃತಿಕ ಚಳವಳಿ. ಆದ್ದರಿಂದಲೇ ವಿಶ್ವಸಾಹಿತ್ಯದ ಚರಿತ್ರೆಯಲ್ಲಿ ಶ್ರೀಸಾಮಾನ್ಯರ ಬದುಕು, ಕಾಯಕ, ಅನುಭವ, ಅಂತರಂಗಶೋಧನೆ ಮತ್ತು ಸಾಮಾಜಿಕ ಸಮಾನತೆಯನ್ನು ಇಷ್ಟು ಪ್ರಖರವಾಗಿ ಹಾಗೂ ನಿರ್ಭೀತವಾಗಿ ಅಭಿವ್ಯಕ್ತಿಸಿದ ಸಾಹಿತ್ಯ ಪರಂಪರೆ ಅಪರೂಪ ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅಭಿಪ್ರಯಾಪಟ್ಟರು.

ಮೈಸೂರು ಜಿಲ್ಲೆಯ ನಂಜನಗೂಡಿನ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಘಟಕದ ಸಹಯೋಗದಲ್ಲಿ “ವಚನ ಸಾಹಿತ್ಯ ಮತ್ತು ವ್ಯಕ್ತಿತ್ವ ವಿಕಸನ” ಕುರಿತು ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಅಂತರಂಗದೊಳಗಿನ ಭೇದಮೂಲದ ವಿಷ ಹಾಗೂ ದ್ವೇಷ ಪ್ರವೃತ್ತಿಗಳನ್ನು ಅಳಿಸಿ ವಿಕಾರವಿಲ್ಲದ ವ್ಯಕ್ತಿತ್ವ ಬೆಳಗುವ ನುಡಿದೀಪಗಳು ಬಸವಾದಿ ಶರಣರ ವಚನಗಳು. ಮಧ್ಯಯುಗೀನ ಭಾರತದಲ್ಲಿ ಬಹು ಜನಸಮುದಾಯಗಳನ್ನು ಹಾಗೂ ಬಹು ಕಾಯಕಜೀವಿಗಳನ್ನು ಸಾಂಸ್ಕೃತಿಕ ಒಳಗೊಳ್ಳುವಿಕೆಯ ಮೂಲಕ ಸ್ವಾತಂತ್ರ್ಯ-ಸಮಾನತೆ-ಸೋದರತೆ ಅಡಿಯಲ್ಲಿ ಸಮಾವೇಶಗೊಳಿಸಿದ ಕನ್ನಡನೆಲದ ಕ್ರಾಂತಿಕಾರಕ ನುಡಿಯಾನವಿದು ಎಂದರು.

ಭಾರತೀಯ ಸಮಾಜದ ಜಾತಿ, ವರ್ಣ, ಲಿಂಗ, ವೃತ್ತಿ ಮೊದಲಾದ ಸ್ಥಾಪಿತ ಅಸಮಾನತೆಗಳಿಗೆ ಸಾಂಸ್ಕೃತಿಕ ಪ್ರತಿರೋಧ ಒಡ್ಡಿದ ಶರಣರು ಮಾನವಲೋಕದ ಅಂತರಂಗವನ್ನು ಮರುಶೋಧಿಸಿದರು. ಭಾರತೀಯ ಅಧ್ಯಾತ್ಮಿಕ ಪರಂಪರೆಯಲ್ಲಿ ಸತ್ಯಾನ್ವೇಷಣೆ ಮತ್ತು ಮುಕ್ತಿಯ ಪ್ರಶ್ನೆಗಳು ಬಹಳ ಹಿಂದಿನಿ0ದಲೂ ಇದ್ದರೂ, ವಚನಕಾರರು ಅವುಗಳನ್ನು ಸಾಮಾನ್ಯ ಮನುಷ್ಯನ ಬದುಕಿನೊಂದಿಗೆ ಜೋಡಿಸಿದರು. ಅಧ್ಯಾತ್ಮವೆಂದರೆ ಲೋಕತ್ಯಾಗವಲ್ಲ; ಜನಬದುಕಿನ ಮಧ್ಯದಲ್ಲಿಯೇ ಸತ್ಯ, ಶುದ್ಧತೆ, ಕಾಯಕ, ದಾಸೋಹ ಮತ್ತು ಮಾನವೀಯತೆಯನ್ನು ಅನುಷ್ಠಾನಗೊಳಿಸುವುದು ಎಂಬ ಹೊಸ ಅರ್ಥವನ್ನು ವಚನಗಳ ಮೂಲಕ ನೀಡಿದರು. ಈ ಮೂಲಕ ಶ್ರೀಸಾಮಾನ್ಯರ ಅಧ್ಯಾತ್ಮಿಕ ಸಾಧನಮಾರ್ಗಕ್ಕೆ ಸಾಕ್ಷಿಪ್ರಜ್ಞೆಯಾದರು ಎಂದು ತಿಳಿಸಿದರು.

ಇಳೆಯನ್ನು ಬೆಳಗುವ ಮಳೆಯಂತೆ, ಬರಡು ಭೂಮಿಗೆ ಜೀವಕಳೆ ತರುವಂತೆ ಮಾನವಲೋಕದ ಮನೋಭೂಮಿಗಳನ್ನು ಬೆಳಗುವಂಥದ್ದು ವಚನಸುಧೆ. ನಮ್ಮನ್ನು ಜಾತಿಯಿಂದ ಮಾನವತ್ವದ ಕಡೆಗೆ, ದ್ವೇಷದಿಂದ ಪ್ರೀತಿಯ ಕಡೆಗೆ, ಅಹಂಕಾರದಿ0ದ ವಿನಯದ ಕಡೆಗೆ, ಸ್ವಾರ್ಥದಿಂದ ದಾಸೋಹದ ಕಡೆಗೆ, ಅಂಧಾಚರಣೆಯಿಂದ ವಿವೇಕದ ಕಡೆಗೆ ಹಾಗೂ ವಿಭಜನೆಯಿಂದ ವಿಶ್ವಸೋದರತೆಯ ಕಡೆಗೆ ನಡೆಸುವ ವಚನಗಳು ಆನುಭಾವಿಕ ದಿವ್ಯೌಷಧಿಯಂತೆ. ಇಂದಿನ ಜಗತ್ತು ಯುದ್ಧದಾಹ, ಅಧಿಕಾರದಾಹ, ಧನದಾಹಗಳಿಂದ ದಿಕ್ಕೆಟ್ಟಿರುವಾಗ ಶಾಂತಿ, ಸರಳತೆ ಮತ್ತು ಸಮತಾಭಾವದ ಸರ್ವೋದಯಕ್ಕೆ ಶರಣರ ಚಿರನುಡಿಗಳು ಜೀವಸೆಲೆಯಾಗಿವೆ. ಜನಾಂತರಂಗದ ಪರಿವರ್ತನೆಯಿಂದ ಜಗಪರಿವರ್ತನೆ ಸಾಧ್ಯವೆಂಬ ಅರಿವಿನ ಅಕ್ಷಯ ನಿಧಿಯಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಮಹಾದೇವಸ್ವಾಮಿ ಅವರು ಮಾತನಾಡಿ, ಮನುಷ್ಯ ಮನುಷ್ಯನಿಂದ ದೂರ ಮಾಡುವ ಪೂರ್ವಗ್ರಹಗಳು, ಅಹಂಕಾರ, ದ್ವೇಷ, ಅಸೂಯೆ ಮತ್ತು ಶ್ರೇಷ್ಠತೆಯ ಭಾವನೆಗಳನ್ನು ನಿರಸನಗೊಳಿಸಿ ಮನಸ್ಸುಗಳನ್ನು ಬೆಳಗುವ ಶಕ್ತಿ ವಚನಗಳಲ್ಲಿದೆ. ನಮ್ಮ ಸಂವಿಧಾನದಲ್ಲಿ ಹೇಳಲಾಗಿರುವ ಜಾತಿ ಹಾಗೂ ಲಿಂಗ ಸಮಾನತೆಯ ಅಂಶಗಳು ವಚನಗಳಲ್ಲಿ ಅರ್ಥಪೂರ್ಣವಾಗಿ ಅಭಿವ್ಯಕ್ತಗೊಂಡಿವೆ. ವಚನಗಳು ಕೇವಲ ನುಡಿಗಳಲ್ಲ; ಅವು ಬದುಕಿನ ದಾರಿಗಳು. ಅವು ಕೇವಲ ಭಕ್ತಿಯ ಅಭಿವ್ಯಕ್ತಿಗಳಲ್ಲ; ಅವು ಮಾನವೀಯತೆಯ ಬೆಳಕಿನಕಿರಣಗಳು. ವಚನಗಳ ಮಾನವೀಯ ಸಂದೇಶವು ಕಾಲ, ದೇಶ ಮತ್ತು ಸಮಾಜದ ಗಡಿಗಳನ್ನು ಮೀರಿ ವಿಶ್ವಮಾನವೀಯ ಮೌಲ್ಯವಾಗಿ ರೂಪುಗೊಂಡಿವೆ ಎಂದು ತಿಳಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ವೇತ ಜಿ.ಎಂ. ಅವರು ಉಪಸ್ಥಿತರಿದ್ದರು. ಕನ್ನಡ ಪ್ರಾಧ್ಯಾಪಕರಾದ ಆರ್.ಉಮೇಶ್ ಅನಿತ ಬಿ.ಎಸ್. ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande