ಅನ್ನಪೂರ್ಣ ಸಚಿವರಾದರೂ ಹೋರಾಟ ನಿಲ್ಲದು: ಜನಾರ್ದನರೆಡ್ಡಿ
ಬಳ್ಳಾರಿ, 29 ಆಗಸ್ಟ್ (ಹಿ.ಸ.): ಆ್ಯಂಕರ್: ಸಂಡೂರು ಶಾಸಕಿ ಈ. ಅನ್ನಪೂರ್ಣ ತುಕಾರಾಂ ಅವರನ್ನು ಕಾಂಗ್ರೆಸ್ ಸಚಿವರನ್ನಾಗಿ ಮಾಡಿದರೂ, ಅವರ ವಿರುದ್ಧವೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ಶಾಸಕ ಜಿ. ಜನಾರ್ದನರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಶನಿವಾರ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದ
ಅನ್ನಪೂರ್ಣ ಸಚಿವರಾದರೂ ಹೋರಾಟ ನಿಲ್ಲದು: ಜನಾರ್ದನರೆಡ್ಡಿ


ಬಳ್ಳಾರಿ, 29 ಆಗಸ್ಟ್ (ಹಿ.ಸ.):

ಆ್ಯಂಕರ್:

ಸಂಡೂರು ಶಾಸಕಿ ಈ. ಅನ್ನಪೂರ್ಣ ತುಕಾರಾಂ ಅವರನ್ನು ಕಾಂಗ್ರೆಸ್ ಸಚಿವರನ್ನಾಗಿ ಮಾಡಿದರೂ, ಅವರ ವಿರುದ್ಧವೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ಶಾಸಕ ಜಿ. ಜನಾರ್ದನರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಶನಿವಾರ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದರು ಹಾಗೂ ಹಣ ಪಡೆದಿರುವ ಆರೋಪ ಎದುರಿಸುತ್ತಿರುವ 10 ಶಾಸಕರ ವಿರುದ್ಧವೂ ಹೋರಾಟ ಮುಂದುವರಿಯಲಿದೆ ಎಂದರು. ಅನ್ನಪೂರ್ಣ ತುಕಾರಾಂ ಅವರನ್ನು ಸಚಿವರನ್ನಾಗಿ ಮಾಡಿದರೆ, ಅವರು ರಾಜೀನಾಮೆ ನೀಡುವವರೆಗೂ ಹೋರಾಟ ನಡೆಸುವುದಾಗಿ ಹೇಳಿದರು. ಬಳ್ಳಾರಿ ಜಿಲ್ಲೆಯಲ್ಲಿ ಯಾರೊಬ್ಬರೂ ಸಚಿವರಾಗಲು ಅರ್ಹತೆ ಹೊಂದಿಲ್ಲ ಎಂದರು.

ಬಿ. ನಾಗೇಂದ್ರ ಅವರನ್ನು ಶಾಸಕರನ್ನಾಗಿ ಮಾಡಿದ್ದು ಬಿಜೆಪಿ ಮತ್ತು ತಾವು ಎಂಬುದನ್ನು ಮರೆತು ಬಿಜೆಪಿ ಹಾಗೂ ತಮ್ಮ ವಿರುದ್ಧ ಟೀಕೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಜನಾರ್ದನರೆಡ್ಡಿ ಹೇಳಿದರು. ಬಿ. ಶ್ರೀರಾಮುಲು ಅವರು ಮನುವಾದಿಗಳು, ಮನುಸ್ಮೃತಿ, ಸಂವಿಧಾನ, ವಾಲ್ಮೀಕಿ ಹಾಗೂ ರಾಮಾಯಣದ ಕುರಿತು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಿರುವುದು ಮೂಲವನ್ನು ಮರೆತ ದುರಹಂಕಾರದ ಪರಮಾವಧಿ ಎಂದು ಟೀಕಿಸಿದರು.

ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಾಗೇಂದ್ರ ಪದೇಪದೇ ಶಂಭೂಕನ ಹೆಸರನ್ನು ಪ್ರಸ್ತಾಪಿಸಿರುವುದು ವಿಪರ್ಯಾಸ. ತಮ್ಮನ್ನು ತಾವು ಸ್ವಯಂ ಘೋಷಿತ ಶಂಭೂಕ ಎಂದು ಬಿಂಬಿಸಿಕೊಳ್ಳುತ್ತಿರುವ ನಾಗೇಂದ್ರ ಅವರ ನಾಟಕಗಳು ನಮ್ಮಲ್ಲಿ ನಡೆಯುವುದಿಲ್ಲ. ಪ್ರಕರಣದ ಪ್ರತಿಯೊಂದು ವಿಚಾರವೂ ನಮಗೆ ಚೆನ್ನಾಗಿ ತಿಳಿದಿದೆ. ಶಂಭೂಕನ ಹತ್ಯೆ ಏತಕ್ಕಾಗಿ ನಡೆಯಿತು ಎಂಬ ವಿಚಾರ ನಾಗೇಂದ್ರ ಅವರಿಗೆ ಸ್ಪಷ್ಟವಾಗಿ ತಿಳಿದಿದೆಯೇ ಎಂದು ಪ್ರಶ್ನಿಸಿದರು.

‘ನಿನ್ನ ಕಣ್ಣೀರು ಕರ್ಮದ ಕಣ್ಣೀರು. ನಿನ್ನ ಈ ಕಣ್ಣೀರಿನಿಂದ ಆತ್ಮಹತ್ಯೆ ಮಾಡಿಕೊಂಡಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ನೌಕರ ಪಿ. ಚಂದ್ರಶೇಖರ್ ಅವರ ಆತ್ಮಕ್ಕೆ ಶೇ.1ರಷ್ಟಾದರೂ ಶಾಂತಿ ಸಿಕ್ಕಿರಬೇಕು’ ಎಂದು ನಾಗೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ಪಿ. ಚಂದ್ರಶೇಖರ್ ಅವರನ್ನು ಕಲಿಯುಗದ ಶಂಭೂಕ ಎಂದು ಬಣ್ಣಿಸಿದ ಅವರು, ಕಾಂಗ್ರೆಸ್ ಹಾಗೂ ನಾಗೇಂದ್ರ ಅವರ ಆತ್ಮಹತ್ಯೆಗೆ ನೇರ ಹೊಣೆ ಎಂದು ಆರೋಪಿಸಿದರು. ಕರ್ನಾಟಕ, ತೆಲಂಗಾಣ, ಗೋವಾ ಮತ್ತು ಮುಂಬೈ ಸೇರಿದಂತೆ ವಿವಿಧೆಡೆ ಒಟ್ಟು 800 ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಲ್ಯಾಂಬೋರ್ಗಿನಿ ಕಾರು, ಚಿನ್ನಾಭರಣ ಹಾಗೂ ಆಸ್ತಿಗಳ ಖರೀದಿಗೆ ಹಣ ಬಳಕೆಯಾಗಿದೆ. ಗೋವಾ, ತೆಲಂಗಾಣ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲೂ ಹಗರಣದ ಹಣ ಬಳಕೆಯಾಗಿದೆ ಎಂದು ಆರೋಪಿಸಿದರು.

ನಾಗೇಂದ್ರ ವಿರುದ್ಧದ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಅವರಿಂದಾಗಲಿ ಅಥವಾ ಕಾಂಗ್ರೆಸ್ ಪಕ್ಷದಿಂದಾಗಲಿ ಸಾಧ್ಯವಾಗುತ್ತಿಲ್ಲ. ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡುತ್ತಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನಾಗೇಂದ್ರ ಭಾಗಿಯಾಗಿರುವುದು ಶೇ.100ರಷ್ಟು ಖಚಿತ ಎಂದು ಜನಾರ್ದನರೆಡ್ಡಿ ಆರೋಪಿಸಿದರು.

ಈ ಪ್ರಕರಣದಿಂದ ನಾಗೇಂದ್ರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಅವರಿಗೆ ತಲೆದಂಡ ನೀಡಿದೆ. ನಾಗೇಂದ್ರ ಸಚಿವರಾಗಿದ್ದೇ ತಪ್ಪು, ಅದರಲ್ಲೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಎರಡನೇ ಬಾರಿಗೆ ಸಚಿವರನ್ನಾಗಿ ಮಾಡಿದ್ದು ಮತ್ತಷ್ಟು ತಪ್ಪು ಎಂದು ಟೀಕಿಸಿದರು. ಬಳ್ಳಾರಿಯ ಮುಸ್ಲಿಮರು ಹಾಗೂ ಮಾಧ್ಯಮದವರ ಮುಂದೆ ನಾಗೇಂದ್ರ ದಾಖಲೆಗಳ ಸಮೇತ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಹಗರಣದಲ್ಲಿ ನಾಗೇಂದ್ರ ಅವರೊಂದಿಗೆ ಭಾಗಿಯಾಗಿರುವ 24 ಮಂದಿಯ ಸ್ಪಷ್ಟ ಮಾಹಿತಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಬಳಿ ಇದೆ ಎಂದು ಜನಾರ್ದನರೆಡ್ಡಿ ಹೇಳಿದರು.

‘ಬಳ್ಳಾರಿ ರಾಜಕೀಯದಲ್ಲಿ ರಿಜೆಕ್ಟೆಡ್ ಪೀಸ್‌ಗಳಾ?’

ಬಿ. ನಾಗೇಂದ್ರ ಅವರು ಪದೇಪದೇ ಬಳ್ಳಾರಿ ರಾಜಕೀಯಕ್ಕಾಗಿ ತಮ್ಮನ್ನು ಬಲಿಕೊಡಲಾಗಿದೆ, ತಮ್ಮ ರಾಜೀನಾಮೆ ಪಡೆಯಲಾಗಿದೆ ಎಂದು ಹೇಳುತ್ತಿದ್ದಾರೆ. ಅಲ್ಲದೆ, ತಮ್ಮನ್ನು ‘ರಿಜೆಕ್ಟೆಡ್ ಪೀಸ್‌ಗಳು’ ಎಂದು ಟೀಕಿಸುತ್ತಿದ್ದಾರೆ ಎಂದು ಜನಾರ್ದನರೆಡ್ಡಿ ಹೇಳಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ‘ರಿಜೆಕ್ಟೆಡ್ ಪೀಸ್’ ಎಂದು ಕರೆಯುತ್ತೀರಾ ಎಂದು ಪ್ರಶ್ನಿಸಿದ ಅವರು, ಅನೇಕ ಘಟಾನುಘಟಿ ನಾಯಕರು ಚುನಾವಣೆಯಲ್ಲಿ ಸೋಲುತ್ತಾರೆ, ಗೆಲ್ಲುತ್ತಾರೆ. ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ. ಚುನಾವಣೆಯಲ್ಲಿ ಸೋತ ಕೂಡಲೇ ಅವರನ್ನು ‘ರಿಜೆಕ್ಟೆಡ್’ ಎಂದು ಕರೆಯುವುದಾದರೆ ಕಾಂಗ್ರೆಸ್‌ನಲ್ಲಿ ಚುನಾವಣೆಯಲ್ಲಿ ಸೋತವರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.

ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ನಾಗೇಂದ್ರ, ಸಂಬಂಧಿತ ಸಂಸದರು ಹಾಗೂ 10 ಶಾಸಕರು ರಾಜೀನಾಮೆ ನೀಡಿ ಚುನಾವಣೆಗೆ ಬರಲಿ. ಬಿಜೆಪಿ ಚುನಾವಣೆಗೆ ನಾಳೆಯೇ ಸಿದ್ಧವಿದೆ. ತಾಕತ್ತಿದ್ದರೆ ತಕ್ಷಣ ರಾಜೀನಾಮೆ ನೀಡಿ ಚುನಾವಣೆ ಎದುರಿಸಿ, ನಿಮ್ಮೆಲ್ಲರ ಠೇವಣಿ ಕಳೆದುಕೊಳ್ಳುವಂತೆ ಮಾಡುತ್ತೇವೆ ಎಂದು ಜನಾರ್ದನರೆಡ್ಡಿ ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ, ಮುಖಂಡರಾದ ಓಬಳೇಶ್, ಕೆ.ಎಸ್. ದಿವಾಕರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande