
ಬೆಂಗಳೂರು, 29 ಆಗಸ್ಟ್ (ಹಿ.ಸ.):
ಆ್ಯಂಕರ್:
ಸಚಿವಸ್ಥಾನಕ್ಕೆ ಬಿ. ನಾಗೇಂದ್ರ ಅವರ ರಾಜೀನಾಮೆ ಬಿಜೆಪಿ–ಜೆಡಿಎಸ್ ನಡೆಸಿದ ಹೋರಾಟದ ಫಲ ಎಂದು ವಿಧಾನಸಭೆ ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗೇಂದ್ರ ಪ್ರಕರಣವನ್ನು ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿವೆ ಎಂದರು. ಸದನದಲ್ಲಿ ನಾಗೇಂದ್ರ ವಿರುದ್ಧ 37 ದಾಖಲೆಗಳನ್ನು ಬಿಡುಗಡೆ ಮಾಡಿದ್ದಾಗಿ ತಿಳಿಸಿದ ಅವರು, ಜಾರಿ ನಿರ್ದೇಶನಾಲಯ ನಾಲ್ಕು ಆರೋಪಪಟ್ಟಿಗಳನ್ನು ಸಲ್ಲಿಸಿದ್ದು, ಪ್ರಕರಣದಲ್ಲಿ ನಾಗೇಂದ್ರ ವಿರುದ್ಧ ಆರೋಪಗಳಿವೆ ಎಂದು ಹೇಳಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬಕ್ಕೆ ಪಿಂಚಣಿ, ಗ್ರಾಚ್ಯುಯಿಟಿ ಹಾಗೂ ಮಗನಿಗೆ ಸರ್ಕಾರಿ ಉದ್ಯೋಗ ನೀಡಿಲ್ಲ. ಆದರೆ ನಾಗೇಂದ್ರ ಅವರಿಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿರುವುದು ಯಾವ ರೀತಿಯ ದಲಿತ ಕಾಳಜಿ ಎಂದು ಅಶೋಕ್ ಪ್ರಶ್ನಿಸಿದರು.
600 ಖಾತೆಗಳಿಗೆ ₹187 ಕೋಟಿ ಹಣವನ್ನು ಒಬ್ಬ ಗುಮಾಸ್ತ ವರ್ಗಾವಣೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಚಂದ್ರಶೇಖರ್ ಅವರ ಮರಣಪತ್ರದಲ್ಲಿ ಸಚಿವರ ಮೌಖಿಕ ಸೂಚನೆಯ ಮೇರೆಗೆ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಉಲ್ಲೇಖವಿದೆ ಎಂದು ಆರೋಪಿಸಿದರು.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿವೆ. ರಾಜ್ಯಪಾಲರ ಅನುಮತಿ ದೊರೆತ ಬಳಿಕ ಕಾನೂನು ಕ್ರಮ ಮುಂದುವರಿಯಲಿದೆ ಎಂದರು. ನಾಗೇಂದ್ರ ಅಮಾಯಕರೆಂದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪುಟದಿಂದ ಏಕೆ ಕೈಬಿಟ್ಟರು ಎಂಬುದಕ್ಕೂ ಕಾಂಗ್ರೆಸ್ ನಾಯಕರು ಉತ್ತರಿಸಬೇಕು ಎಂದು ಆಗ್ರಹಿಸಿದರು.
ನಾಗೇಂದ್ರ ರಾಜೀನಾಮೆ ಬಿಜೆಪಿ ಜಯಕ್ಕಿಂತಲೂ ದಲಿತ ಸಮುದಾಯದ ಜಯ. ದಲಿತರ ಹಣ ದುರುಪಯೋಗ ಮಾಡಿದರೆ ಉಳಿಗಾಲವಿಲ್ಲ ಎಂಬುದು ಕಾಂಗ್ರೆಸ್‌ಗೆ ಅರ್ಥವಾಗಬೇಕು. ಅಧಿವೇಶನದಲ್ಲಿ ಚರ್ಚೆಯಾಗದ ಇತರ ವಿಚಾರಗಳನ್ನು ಜನರ ಬಳಿಗೆ ಪಾದಯಾತ್ರೆ ಮೂಲಕ ಕೊಂಡೊಯ್ಯುತ್ತೇವೆ ಎಂದು ಆರ್. ಅಶೋಕ್ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.