
ಗದಗ, 29 ಆಗಸ್ಟ್ (ಹಿ.ಸ.)
ಆ್ಯಂಕರ್:- ಕಾರ್ಮಿಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಿಬಿ ಜಿ ರಾಮ್ ಜಿ ಯೋಜನೆಯಡಿ ಸೆ.15ರವರೆಗೆ ತಾಲೂಕಿನಾದ್ಯಂತ ಜಾಬ್ ಕಾರ್ಡ್ ಮೇಳ ಹಾಗೂ ವಿಶೇಷ ಜಾಗೃತಿ ಮನೆ- ಮನೆ ಭೇಟಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಚ್.ಎಸ್. ಜನಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಕಡಿಮೆಯಾಗಿರುವ ಸಂದರ್ಭದಲ್ಲಿ ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ವಿಬಿ ಜಿ ರಾಮ್ ಜಿ ಯೋಜನೆಯಡಿ ಅರ್ಹ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗಕ್ಕೆ ಲಭ್ಯವಿರುವ ನಾನಾ ಕಾಮಗಾರಿಗಳ ಕುರಿತು ಮಾಹಿತಿ ನೀಡಲಾಗುವುದು. ಜಾಬ್ ಕಾರ್ಡ್ ಹೊಂದಿರುವವರು, ಹೊಸದಾಗಿ ಜಾಬ್ ಕಾರ್ಡ್ ಪಡೆಯಲು ಅರ್ಹರಾಗಿರುವ ಕುಟುಂಬಗಳನ್ನು ಗುರುತಿಸಿ, ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವಂತೆ ಪ್ರೇರೇಪಿಸಲಾಗುವುದು. ಸ್ವಗ್ರಾಮದಲ್ಲೇ ಉದ್ಯೋಗಾವಕಾಶ ದೊರೆಯುವುದರಿಂದ ಗ್ರಾಮೀಣ ಜನರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆ ಯುವ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರ್ಮಿಕರನ್ನು ಯೋಜನೆಯಡಿ ತೊಡಗಿಸಿಕೊಂಡು, ನಿರಂತರವಾಗಿ ಉದ್ಯೋಗ ಒದಗಿಸುವುದಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಈಗಾಗಲೇ ತಾಲೂಕಿನ 27 ಗ್ರಾಪಂಗಳಲ್ಲಿ ಜಾಬ್ ಕಾರ್ಡ್ ಮೇಳ ಪ್ರಗತಿಯಲ್ಲಿದೆ. ಗ್ರಾಮೀಣ ಕುಟುಂಬಗಳಿಗೆ ಸಮಗ್ರ ಮಾಹಿತಿ ನೀಡಲು ವಿಶೇಷ ಜಾಗೃತಿ ಅಭಿಯಾನ ನಡೆಸಲಾಗುವುದು. ಗ್ರಾಪಂ ವ್ಯಾಪ್ತಿಯ ಗ್ರಾಮ ಕಾಯಕ ಮಿತ್ರರು, ಬಿಎಫ್ಟಿ, ಗ್ರಾಪಂ ಸಿಬ್ಬಂದಿ ಮನೆ- ಮನೆಗೆ ಭೇಟಿ ನೀಡಿ ಅರ್ಹ ಫಲಾನುಭವಿಗಳನ್ನು ಗುರುತಿಸುವುದು, ಉದ್ಯೋಗ ಬೇಡಿಕೆ ಸಂಗ್ರಹಿಸುವುದು, ಯೋಜನೆಯಡಿ ಲಭ್ಯವಿರುವ ಕಾಮಗಾರಿಗಳ ಕುರಿತು ಜನರಿಗೆ ಮಾಹಿತಿ ನೀಡುವ ಕಾರ್ಯಕ್ಕೂ ಒತ್ತು ನೀಡುವಂತೆ ಸೂಚಿಸಲಾಗಿದೆ. ಈ ಬಗ್ಗೆ ಮೇಲ್ವಿಚಾರಣೆ ಮಾಡಲು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು. ಗ್ರಾಮೀಣ ಕುಟುಂಬಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವುದರ ಜತೆಗೆ ಹೆಚ್ಚಿನ ಮಾನವ ದಿನಗಳನ್ನು ಸೃಜಿಸುವುದು ಜಾಬ್ ಕಾರ್ಡ್ ಮೇಳದ ಪ್ರಮುಖ ಉದ್ದೇಶವಾಗಿದೆ. ಪ್ರತಿಯೊಬ್ಬ ಅರ್ಹ ಕೂಲಿಕಾರ್ಮಿಕರೂ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಗ್ರಾಪಂ ಮಟ್ಟದಲ್ಲಿ ವ್ಯಾಪಕವಾಗಿ ಪ್ರಚಾರ, ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜಾಬ್ ಕಾರ್ಡ್ ಹೊಂದಿರುವ ಹಾಗೂ ಇ-ಕೆವೈಸಿ ಪೂರ್ಣಗೊಳಿಸಿರುವ ಪ್ರತಿಯೊಬ್ಬ ಅರ್ಹ ಕೂಲಿಕಾರರೂ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು. ಗ್ರಾಪಂಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಿ, ಗ್ರಾಮೀಣ ಕುಟುಂಬಗಳಿಗೆ ಆದಾಯದ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು
ಕಾರ್ಯನಿರ್ವಾಹಕ ಅಧಿಕಾರಿ, ಡಾ. ಎಚ್.ಎಸ್ ಜನಗಿ ತಿಳಿಸಿದ್ದಾರೆ.
ಬರ ಪರಿಸ್ಥಿತಿಯಿಂದ ಗ್ರಾಮೀಣ ಭಾಗದಲ್ಲಿ ಕೃಷಿ ಕೆಲಸದ ಅವಕಾಶಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಾಬ್ ಕಾರ್ಡ್ ಮೇಳ ಮಹತ್ವ ಪಡೆದಿದೆ. ಗ್ರಾಮದಲ್ಲಿಯೇ ಕೂಲಿ ಕೆಲಸ ದೊರೆಯುವುದರಿಂದ ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿ ತಪ್ಪಲಿದೆ. ಜಾಬ್ ಕಾರ್ಡ್ ಹೊಂದಿರುವವರು ಇ-ಕೆವೈಸಿ ಪೂರ್ಣಗೊಳಿಸಿ, ಲಭ್ಯವಿರುವ ಉದ್ಯೋಗಾವಕಾಶ ಉಪಯೋಗಿಸಿಕೊಳ್ಳಬೇಕು. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಗ್ರಾಪಂ ಸ್ವಚ್ಚ ವಾಹಿನಿ ಪ್ರಚಾರ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು
ಸಹಾಯಕ ನಿರ್ದೇಶಕ ಕುಮಾರ ಪುಜಾರ, ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP