ಯುವ ವಿದ್ವಾಂಸ ಡಾ.ಎಂ.ಭೈರಪ್ಪ ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ
ಯುವ ವಿದ್ವಾಂಸ ಡಾ.ಎಂ.ಭೈರಪ್ಪ ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ
ಯುವ ವಿದ್ವಾಂಸ ಡಾ.ಎಂ.ಭೈರಪ್ಪ ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ


ಕೋಲಾರ,29 ಆಗಸ್ಟ್ (ಹಿ.ಸ)

ಆ್ಯಂಕರ್ : ರಾಜ್ಯಮಟ್ಟದ ಪ್ರತಿಷ್ಠಿತ ಸಂಸ್ಥೆಯಾದ ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘವು ವಿವಿಧ ಕ್ಷೇತ್ರದ ಸಾಧಕರಿಗೆ ಕೊಡಮಾಡುವ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಗೆ ಯುವ ವಿದ್ವಾಂಸ ಹಾಗೂ ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ಭಾಜನರಾಗಿದ್ದಾರೆ. ಸಾಹಿತ್ಯ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಇದೇ ಭಾನುವಾರ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು ಎಂದು ಸಂಸ್ಥೆಯ ರಾಜ್ಯಾಧ್ಯಕ್ಷರಾದ ಶ್ರೀ ತುಂಬಲ ರಾಮಣ್ಣ ಅವರು ತಿಳಿಸಿದ್ದಾರೆ.

ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕುಪ್ಪನಹಳ್ಳಿ ಗ್ರಾಮದವರು. ಕನ್ನಡದ ಪ್ರಸಿದ್ಧ ವಿದ್ವಾಂಸರಾದ ಪ್ರೊ.ಕೃಷ್ಣಮೂರ್ತಿ ಹನೂರು ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಆಧುನಿಕ ಕನ್ನಡ ನಾಟಕಗಳಲ್ಲಿ ಸಾಂಸ್ಕೃತಿಕ ಸಂಘರ್ಷ ಎಂಬ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ. ಬೇಲಿಗಿಡಗಳು ಮಾತಾಡುತಾವೆ ಎಂಬ ಕಾವ್ಯಕೃತಿಯಿಂದ ಆರಂಭಿಸಿ ಇತ್ತೀಚಿನ ಗ್ರಾಮಭಾರತ ಗಮಕಿ ಆರ್.ವಿ.ಮೇಷ್ಟ್ರುವರೆಗೆ ೩೦ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. ಕರ್ಣ ರಸಾಯನ, ಅಂತರಗAಗವ್ವ, ಬುದ್ಧನಗೆಯ ತಾಯಿನದಿ, ನುಡಿಕುಲುಮೆಯ ಕಿಡಿಗನ್ನಡಿ, ಅರಳಿನೆರಳಿನ ಗುಡಿಸಲ ಧ್ಯಾನ, ನಿಚ್ಚಂಪೊಸತು ಮೊದಲಾದವು ಅವರ ಪ್ರಮುಖ ಕೃತಿಗಳಾಗಿವೆ. ಇವರ ಸಾಹಿತ್ಯ ಹಾಗೂ ಸಂಶೋಧನ ಕೃಷಿಯು ಈಗಾಗಲೇ ಹಲವು ಗೌರವಕ್ಕೆ ಪಾತ್ರವಾಗಿದೆ.

ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ ಪದವಿ ವ್ಯಾಸಂಗದ ನಂತರ ರಾಜ್ಯದ ಪ್ರತಿಷ್ಠಿತ ಪ್ರಜಾವಾಣಿ ಪತ್ರಿಕೆಯಲ್ಲಿ ಕೆಲಕಾಲ ಪತ್ರಕರ್ತರಾಗಿದ್ದರು. ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರುವ ಶ್ರೀಯುತರು ಪ್ರಸ್ತುತ ಬೆಂಗಳೂರಿನ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಂಚಿನ ಸಮುದಾಯಗಳಿಂದ ಅರಳಿಬಂದಿರುವ ಇಂತಹ ಸಾಧಕರನ್ನು ಗೌರವಿಸುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ಸಂಗತಿ ಎಂದು ತುಂಬಲ ರಾಮಣ್ಣ ಹಾಗೂ ದಯಾನಂದ ಕಾಂಬಳೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande