
ಧಾರವಾಡ, 29 ಆಗಸ್ಟ್ (ಹಿ.ಸ.):
ಆ್ಯಂಕರ್:ಮೇಜರ್ ಧ್ಯಾನಚಂದ್ ಅವರು ಹಾಕಿ ಕ್ರೀಡೆಯಲ್ಲಿ ತಮ್ಮ ಅದ್ಭುತ ಪ್ರತಿಭೆ ಹಾಗೂ ಆಟದ ವೈಖರಿಯಿಂದ ವಿಶ್ವದ ಗಮನ ಸೆಳೆದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರ ಜೀವನ ಮತ್ತು ಸಾಧನೆಗಳು ಇಂದಿನ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿವೆ ಎಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಚಂದ್ರಕಾಂತ ಬೆಲ್ಲದ ಹೇಳಿದರು.
ಧಾರವಾಡದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ನೂತನ ಸಿಂಥೆಟಿಕ್ ಬಾಸ್ಕೆಟ್‌ಬಾಲ್ ಮೈದಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಧ್ಯಾನಚಂದ್ ಅವರು ದೇಶಕ್ಕೆ ಕೀರ್ತಿ ತಂದಿದ್ದರು. ಅವರ ಕ್ರೀಡಾ ಪ್ರತಿಭೆಯಿಂದ ಪ್ರಭಾವಿತರಾದ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಜರ್ಮನಿಯ ಪೌರತ್ವ ನೀಡುವುದಾಗಿ ಹೇಳಿದ್ದರೂ, ಧ್ಯಾನಚಂದ್ ಅದನ್ನು ತಿರಸ್ಕರಿಸಿ ಭಾರತಕ್ಕೆ ಮರಳಿದ್ದರು ಎಂದು ಬೆಲ್ಲದ ಸ್ಮರಿಸಿದರು.
ಧ್ಯಾನಚಂದ್ ಅವರ ಕ್ರೀಡಾ ಸಾಧನೆ ಹಾಗೂ ಹಾಕಿ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ 10 ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಖೇಲೋ ಇಂಡಿಯಾ ಅಥ್ಲೆಟಿಕ್ಸ್‌ನ 31 ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು. ಇತ್ತೀಚೆಗೆ ನಿವೃತ್ತರಾದ ಹಿರಿಯ ಬಾಸ್ಕೆಟ್‌ಬಾಲ್ ತರಬೇತುದಾರ ಪಿ.ಕೆ. ಹಾಸನ್ ಅವರನ್ನು ಗೌರವಿಸಲಾಯಿತು.
ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ 10 ಪುರುಷ ಮತ್ತು ಮಹಿಳಾ ತಂಡಗಳ ನಡುವೆ ಸ್ಪರ್ಧೆ ಆಯೋಜಿಸಿ, ವಿಜೇತರಿಗೆ ಟ್ರೋಫಿ ವಿತರಿಸಲಾಯಿತು.
ಹಿರಿಯ ತರಬೇತುದಾರರಾದ ಆರ್.ಕೆ. ಮೊಕಾಶಿ, ವಸಂತ ಮುರ್ತಗುಡ್ಡೆ, ರಾಮಚಂದ್ರ ಪಡತಾರೆ, ಪಿ.ಕೆ. ಹಾಸನ್ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ ಕುಸ್ತಿ ತರಬೇತುದಾರ ಶಂಕರ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸದಾನಂದ ಎಚ್. ಅಮರಾಪೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.