
ಕೋಲಾರ, 29 ಆಗಸ್ಟ್ (ಹಿ.ಸ.)
ಆಂಕರ್ : ಡಿಸೆಂಬರ್ ೨೫ ರಿಂದ ೨೭ರವರೆಗೆ ಬೆಂಗಳೂರಿನ ಬಿಐಇಸಿ ಮೈದಾನದಲ್ಲಿ ಮೂರು ದಿನಗಳ ಕಾಲ 'ಗ್ಲೋಬಲ್ ಆಕ್ಸಿಲರೇಟರ್ ವಿಷನ್ ಸಮಿಟ್' ನಡೆಯಲಿದೆ. ಇದು ದೇಶ-ವಿದೇಶಗಳ ಪ್ರತಿನಿಧಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮಹತ್ವದ ಕಾರ್ಯಕ್ರಮವಾಗಿದೆ. ಯುವ ಉದ್ದಿಮೆದಾರರನ್ನು ಉತ್ತೇಜಿಸುವುದು, ಜಾಗತಿಕ ವಾಣಿಜ್ಯ ಮತ್ತು ಬಂಡವಾಳ ಹೂಡಿಕೆಯಲ್ಲಿ ಯುವ ಪೀಳಿಗೆಯನ್ನು ತೊಡಗಿಸುವುದು ಹಾಗೂ ಮಹಿಳಾ ಉದ್ಯಮಿಗಳಲ್ಲಿ ಜಾಗೃತಿ ಮೂಡಿಸುವುದು ಈ ಸಮಾವೇಶದ ಪ್ರಮುಖ ಉದ್ದೇಶವಾಗಿದೆ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಸ್.ಈ.ಸುಧೀಂದ್ರ ತಿಳಿಸಿದರು.
ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ವತಿಯಿಂದ ಮುಂಬರುವ ಡಿಸೆಂಬರ್ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಗ್ಲೋಬಲ್ ಆಕ್ಸಿಲರೇಟರ್ ವಿಷನ್ ಸಮಿಟ್ನ ಪ್ರಚಾರ ಅಭಿಯಾನಕ್ಕೆ ನಗರದ ಸುವರ್ಣ ಕನ್ನಡ ಭವನದಲ್ಲಿ ಶನಿವಾರ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದರು.
ಕಳೆದ ಭಾನುವಾರ ಫ್ರೀಡಂ ಪಾರ್ಕ್ನಲ್ಲಿ ಮುಖ್ಯಮಂತ್ರಿಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದ ಯಶಸ್ಸನ್ನು ಸ್ಮರಿಸಿದರು. ರಾಜ್ಯದಲ್ಲಿ ನೂತನ ಜೈವಿಕ ಇಂಧನ ನೀತಿಗೆ ಸರ್ಕಾರದಿಂದ ಅನುಮೋದನೆ ದೊರೆತರೆ, ಕೈಗಾರಿಕೆಗಳ ಸ್ಥಾಪನೆಗೆ ದೇಶ-ವಿದೇಶಗಳಿಂದ ಬಂಡವಾಳ ಹರಿದುಬರಲಿದೆ. ಕಂಪ್ರೆಸ್ಡ್ ಬಯೋಗ್ಯಾಸ್ ಉತ್ಪಾದಿಸಿ, ಮುಂದಿನ ೩ ವರ್ಷಗಳಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಶೇ. ೬ರಷ್ಟು ಬಳಕೆಯ ಗುರಿ ಹೊಂದಲಾಗಿದೆ. ಇದಕ್ಕಾಗಿ ನೇಪಾಳ, ಜರ್ಮನಿ, ಅಮೆರಿಕದ ಕೈಗಾರಿಕೆಗಳಿಗೆ ಭೇಟಿ ನೀಡಿ ನೀತಿ ನಿರೂಪಕರು ಹಾಗೂ ಬಂಡವಾಳ ಹೂಡಿಕೆದಾರರೊಂದಿಗೆ ಚರ್ಚಿಸಲಾಗಿದೆ. ಆರ್ಯವೈಶ್ಯ ಸಮಾಜದ ಯುವಜನರು ಮತ್ತು ಮಹಿಳೆಯರು ಈ ನೂತನ ಆವಿಷ್ಕಾರ ಮತ್ತು ಬಂಡವಾಳ ಹೂಡಿಕೆಯ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು, ಎಂದು ಸುಧೀಂದ್ರ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ. ರಾಮಪ್ರಸಾದ್ ಮಾತನಾಡಿ, ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಜಿ. ಪರಮೇಶ್ವರ್ ಅವರು ೨೦೨೬-೨೭ನೇ ಸಾಲಿನಲ್ಲಿ ಸಮಾಜದ ಕಲ್ಯಾಣಕ್ಕಾಗಿ ಸ್ವಯಂ ಉದ್ಯೋಗ ನೇರ ಸಾಲ, ಅರಿವು ಶಿಕ್ಷಣ ಸಾಲ, ವಾಸವಿ ಗಂಗಾ ಕಲ್ಯಾಣ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಯುವಕರು ಈ ಸಾಲ ಸೌಲಭ್ಯ ಪಡೆದು ಕ್ರಿಯಾಶೀಲ ಉದ್ಯಮಿಗಳಾಗಿ ಬೆಳೆಯಬೇಕು, ಎಂದು ಸಲಹೆ ನೀಡಿದರು.
ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ರಾಜ್ಯಾಧ್ಯಕ್ಷರಾದ ಆರ್.ಪಿ. ರವಿಶಂಕರ್ ಮಾತನಾಡಿ ಮುಂಬರುವ ಸಮಿಟ್ ಕೈಗಾರೀಕರಣದಲ್ಲಿ ಸಮಾಜದ ಯುವ ಉದ್ಯಮಿಗಳು ಮುಂಚೂಣಿಯಲ್ಲಿರಲು ಅತ್ಯುತ್ತಮ ವೇದಿಕೆಯಾಗಲಿದೆ ಎಂದರು. ಅನಿಲ್ ಗುಪ್ತ ಅವರು ಮಾತನಾಡಿ, ಈ ಸಂವಾದವು ಗ್ಲೋಬಲ್ ಸಮಿಟ್ನ ಯಶಸ್ಸಿಗೆ ನಾಂದಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಕೋಲಾರ ಜಿಲ್ಲಾಧ್ಯಕ್ಷ ಕೆ.ಆರ್. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಆರ್. ಕೃಷ್ಣಾ, ಸಂಘಟನಾ ಕಾರ್ಯದರ್ಶಿ ಎ.ಆರ್. ರವಿಕುಮಾರ್, ಮುಳಬಾಗಿಲು ಯೋಜನಾ ಪ್ರಾಧಿಕಾರ ಹಾಗೂ ಆಂಜನೇಯಸ್ವಾಮಿ ದೇವಾಲಯ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಆರ್.ಎಸ್. ಸುಹಾಸ್ ಶೆಟ್ಟಿ, ಬೆಂಗಳೂರು ವಿಭಾಗದ ಉಪಾಧ್ಯಕ್ಷ ಬಿ.ಎಸ್. ನಟರಾಜ್, ಕಾರ್ಯದರ್ಶಿ ಕೆ.ವಿ. ಪ್ರಸನ್ನ ಕುಮಾರ್, ನಿರ್ದೇಶಕರುಗಳಾದ ಎನ್.ಸಿ. ಸತೀಶ್, ಎಂ.ಪಿ. ಅನಿಲ್ ಕುಮಾರ್, ವೈ.ವಿ. ರಮೇಶ್, ಎಸ್. ಅಮರನಾಥ್, ಕೋಲಾರ ಜಿಲ್ಲಾ ಉಪಾಧ್ಯಕ್ಷ ಎಂ. ಆನಂದ್, ಜಿಲ್ಲಾ ಕಾರ್ಯದರ್ಶಿ ದೇವತಾ ವಿಜಯಲಕ್ಷ್ಮಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್