ಗೃಹ ಜ್ಯೋತಿ ಮರು ಪರಿಶೀಲನೆಗೆ ಅಪಾರ್ಟ್ಮೆಂಟ್ ಮಾಲೀಕರ ಅಸಹಕಾರ
ಅಪಾರ್ಟ್ಮೆಂಟ್ ಮಾಲೀಕರ ಅಸಹಕಾರ
ಗೃಹ ಜ್ಯೋತಿ ಮರು ಪರಿಶೀಲನೆಗೆ ಅಪಾರ್ಟ್ಮೆಂಟ್ ಮಾಲೀಕರ ಅಸಹಕಾರ


ಬೆಂಗಳೂರು, 29 ಆಗಸ್ಟ್ (ಹಿ.ಸ.)

ಆ್ಯಂಕರ್:

ಗೃಹ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕಗಳ ಮರು ಪರಿಶೀಲನೆ ಕಾರ್ಯಕ್ಕೆ ಅಪಾರ್ಟ್ಮೆಂಟ್ ಮಾಲೀಕರ ಅಸಹಕಾರ ಇದೀಗ ಬೆಸ್ಕಾಂ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ. ಜುಲೈ 1ರಿಂದ ಆರಂಭವಾಗಿರುವ ಮರು ಪರಿಶೀಲನೆ ಕಾರ್ಯವನ್ನು ಆಗಸ್ಟ್ 31ರೊಳಗೆ ಪೂರ್ಣಗೊಳಿಸಲು ಗಡುವು ನಿಗದಿಪಡಿಸಲಾಗಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ ಇದುವರೆಗೆ ಶೇ.60ರಷ್ಟು ಮಾತ್ರ ಪರಿಶೀಲನೆ ಪೂರ್ಣಗೊಂಡಿದೆ.

ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ವಿದ್ಯುತ್ ಸಂಪರ್ಕ ಹಾಗೂ ದಾಖಲೆಗಳ ಪರಿಶೀಲನೆಗಾಗಿ ಬೆಸ್ಕಾಂ ಸಿಬ್ಬಂದಿ ಮನೆಗಳಿಗೆ ತೆರಳುತ್ತಿದ್ದಾರೆ. ಆದರೆ ನಗರದ ಹಲವು ಅಪಾರ್ಟ್ಮೆಂಟ್ಗಳಲ್ಲಿ ಮೀಟರ್ ರೀಡರ್ಗಳು ಹಾಗೂ ಬೆಸ್ಕಾಂ ಸಿಬ್ಬಂದಿಗೆ ಒಳ ಪ್ರವೇಶ ನೀಡದಿರುವ ಘಟನೆಗಳು ನಡೆಯುತ್ತಿವೆ. ಕೆಲವೆಡೆ ಅಗತ್ಯ ದಾಖಲೆಗಳನ್ನು ನೀಡಲು ಕೂಡ ಮಾಲೀಕರು ನಿರಾಕರಿಸುತ್ತಿರುವುದಾಗಿ ತಿಳಿದುಬಂದಿದೆ.

ಒಂದೇ ಮನೆ ಅಥವಾ ಅಪಾರ್ಟ್ಮೆಂಟ್ಗೆ ಎರಡು-ಮೂರು ಬಾರಿ ತೆರಳಿ ಪರಿಶೀಲನೆ ನಡೆಸಲು ಪ್ರಯತ್ನಿಸಿದರೂ ಸಹಕಾರ ಸಿಗದೆ ಸಿಬ್ಬಂದಿ ವಾಪಸ್ ಆಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಿಗದಿತ ಗಡುವಿನೊಳಗೆ ಮರು ಪರಿಶೀಲನೆ ಪೂರ್ಣಗೊಳಿಸುವುದು ಬೆಸ್ಕಾಂಗೆ ಸವಾಲಾಗಿದೆ.

ಮರು ಪರಿಶೀಲನೆಗೆ ಸಹಕರಿಸದ ಹಾಗೂ ಸಿಬ್ಬಂದಿಗೆ ಪ್ರವೇಶ ನೀಡದ ಮನೆಗಳು ಮತ್ತು ದೊಡ್ಡ ಅಪಾರ್ಟ್ಮೆಂಟ್ಗಳ ವಿರುದ್ಧ ಸ್ಥಳ ಮಹಜರ್ ನಡೆಸಲು ಬೆಸ್ಕಾಂ ಮುಂದಾಗಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳ ಮಹಜರ್ ಮಾಡಿ, ಅದರ ಆಧಾರದ ಮೇಲೆ ಸಂಬಂಧಪಟ್ಟ ಮನೆಗಳಿಗೆ ನೋಟಿಸ್ ಅಂಟಿಸುವ ಕುರಿತು ಬೆಸ್ಕಾಂ ನಿರ್ಧಾರ ಕೈಗೊಂಡಿದೆ.

ಮರು ಪರಿಶೀಲನೆಗೆ ಹಲವು ಬಾರಿ ತೆರಳಿದರೂ ದಾಖಲೆ ನೀಡದ ಅಥವಾ ಪರಿಶೀಲನೆಗೆ ಅವಕಾಶ ನೀಡದ ಮನೆಗಳ ವಿವರಗಳನ್ನು ದಾಖಲಿಸಿಕೊಂಡು, ನಿಯಮಾನುಸಾರ ಸ್ಥಳ ಮಹಜರ್ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಗೃಹ ಜ್ಯೋತಿ ಯೋಜನೆಯ ಮರು ಪರಿಶೀಲನೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳು ಬೆಸ್ಕಾಂ ಸಿಬ್ಬಂದಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ, ಮನೆ ಹಾಗೂ ವಿದ್ಯುತ್ ಮೀಟರ್ ಪರಿಶೀಲನೆಗೆ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಆಗಸ್ಟ್ 31ರ ಗಡುವಿನೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವ ಉದ್ದೇಶದಿಂದ, ಮರು ಪರಿಶೀಲನೆಗೆ ಸಹಕರಿಸದ ಮನೆಗಳ ವಿರುದ್ಧ ಸ್ಥಳ ಮಹಜರ್ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಲು ಬೆಸ್ಕಾಂ ಸಿದ್ಧತೆ ನಡೆಸುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande