


ಭೋಪಾಲ್/ರಾಜಗಢ, 28 ಆಗಸ್ಟ್ (ಹಿ.ಸ.):
ಆ್ಯಂಕರ್:ಆರೋಪಿಗಳಿಗಾಗಿ ಶೋಧ ನಡೆಸಲು ಉತ್ತರ ಪ್ರದೇಶದತ್ತ ತೆರಳುತ್ತಿದ್ದ ಬೆಂಗಳೂರು ಪೊಲೀಸರ ತಂಡದ ವಾಹನ ಮತ್ತು ಉತ್ತರ ಪ್ರದೇಶದ ಪ್ರಯಾಣಿಕರ ಬಸ್ ನಡುವೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಬಿಯಾವರದಲ್ಲಿ ಶುಕ್ರವಾರ ಬೆಳಗ್ಗೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಬೆಂಗಳೂರು ಪೊಲೀಸರ ಸೈಬರ್ ವಿಭಾಗದ ಪೊಲೀಸ್ ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಐವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಭೋಪಾಲ್‌ಗೆ ರವಾನಿಸಲಾಗಿದೆ.
ರಾಜಗಢ ಜಿಲ್ಲಾ ಕೇಂದ್ರದ ಸಮೀಪ ರಾಷ್ಟ್ರೀಯ ಹೆದ್ದಾರಿಯ ಭೋಪಾಲ್ ಬೈಪಾಸ್ ಸೇತುವೆ ಮೇಲೆ ಅಪಘಾತ ಸಂಭವಿಸಿದೆ. ಬೆಂಗಳೂರು ಪೊಲೀಸರ ವಾಹನ ಮತ್ತು ಯುಪಿ ನೋಂದಣಿ ಸಂಖ್ಯೆಯ ಪ್ರಯಾಣಿಕರ ಬಸ್ ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು, ಢಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ.
ಮೃತರನ್ನು ಬೆಂಗಳೂರು ನಿವಾಸಿ ಹಾಗೂ ಕರ್ನಾಟಕ ಪೊಲೀಸ್ ಇನ್‌ಸ್ಪೆಕ್ಟರ್ ರವಿ ಕೆ.ವಿ. (45), ಉತ್ತರ ಪ್ರದೇಶದ ಫತೇಹ್‌ಪುರ ಜಿಲ್ಲೆಯ ತೆಂದುಲಿ ನಿವಾಸಿ ಹಾಗೂ ಬಸ್ ಚಾಲಕ ವಿಕಾಸ್ ಶುಕ್ಲಾ (29), ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಸಾಥಿ ನಿವಾಸಿ ಬೆಲಾಲ್ ಅಲಿ (23) ಹಾಗೂ ಬಿಜ್ವಾಡ್ ನಿವಾಸಿ ಜ್ಯೋತಿರಾದಿತ್ಯ ಸಿಂಗ್ ಗೌಡ್ ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಮೂವರು ಕರ್ನಾಟಕ ಪೊಲೀಸರು ಸೇರಿದಂತೆ 12 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಬಿಯಾವರದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಗಂಭೀರವಾಗಿ ಗಾಯಗೊಂಡ ಬೆಂಗಳೂರು ಪೊಲೀಸ ಸಹಾಯಕ ಉಪನಿರೀಕ್ಷಕ ಶ್ರೀನಿವಾಸ್ (50) ಸೇರಿದಂತೆ ಐವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಭೋಪಾಲ್‌ಗೆ ಸ್ಥಳಾಂತರಿಸಲಾಗಿದೆ.
ಗಾಯಗೊಂಡವರಲ್ಲಿ ಉತ್ತರ ಪ್ರದೇಶದ ಅಮಿತ್ ಕುಮಾರ್ (40), ಸುರೇಂದ್ರ ಪ್ರತಾಪ್ ಸಿಂಗ್ (68), ಸುಮನ್ ಶರ್ಮಾ (36), ಕೇಶವ (28), ಮೀನೂ ಸಿಂಗ್ (37), ರಕ್ಷಿತ್ ಸಿಂಗ್ (13), ರವಿ ಶರ್ಮಾ (42), ಪಾರ್ಥ್ ಶರ್ಮಾ (8), ಸೋನು (39) ಹಾಗೂ ಕರ್ನಾಟಕ ಪೊಲೀಸ ಇಲಾಖೆ ರಮೇಶ್ ನಾಯಕ್ ಮತ್ತು ಸೈಬರ್ ವಿಭಾಗದ ಪೊಲೀಸ್ ಸಿಬ್ಬಂದಿ ವಿಶ್ವನಾಥ್ (39) ಸೇರಿದ್ದಾರೆ. ಬಸ್‌ನ ಸಹಚಾಲಕ ಗುಡ್ಡು ಕೂಡ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಆರೋಪಿಗಳಿಗಾಗಿ ತೆರಳುತ್ತಿದ್ದ ಪೊಲೀಸ್ ತಂಡ
ಬೆಂಗಳೂರು ಸೈಬರ್ ವಿಭಾಗ ಹಾಗೂ ಪೊಲೀಸ್ ತಂಡವು ಅಪರಾಧ ಪ್ರಕರಣವೊಂದರಲ್ಲಿ ಆರೋಪಿಗಳ ಸ್ಥಳ ಪತ್ತೆಹಚ್ಚಿ, ಅವರಿಗಾಗಿ ಶೋಧ ನಡೆಸಲು ಉತ್ತರ ಪ್ರದೇಶದತ್ತ ತೆರಳುತ್ತಿತ್ತು. ಈ ವೇಳೆ ರಾಜಗಢ ಜಿಲ್ಲೆಯ ಬಿಯಾವರ ಸಮೀಪ ಎದುರಿನಿಂದ ಬರುತ್ತಿದ್ದ ಉತ್ತರ ಪ್ರದೇಶದ ಬಸ್‌ಗೆ ಪೊಲೀಸ್ ವಾಹನ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.
ಅಪಘಾತದ ಮಾಹಿತಿ ಲಭಿಸಿದ ತಕ್ಷಣ ಜಿಲ್ಲಾ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಕ್ರೇನ್ ಸಹಾಯದಿಂದ ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮೃತಪಟ್ಟವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.
ಗಾಯಾಳುಗಳ ಆರೋಗ್ಯ ವಿಚಾರಿಸಿದ ಎಸ್‌ಪಿ, ಸಚಿವ
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ರಾಜಗಢ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ತೋಲಾನಿ ಹಾಗೂ ರಾಜ್ಯ ಸಚಿವ ನಾರಾಯಣ ಸಿಂಗ್ ಪಂವಾರ್ ಬಿಯಾವರದ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಈ ವೇಳೆ ಸಚಿವ ನಾರಾಯಣ ಸಿಂಗ್ ಪಂವಾರ್, “ಮೃತರ ಕುಟುಂಬದವರಿಗೆ ನಮ್ಮ ಆಳವಾದ ಸಂತಾಪಗಳು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಆಸ್ಪತ್ರೆ ಆಡಳಿತಕ್ಕೆ ಸೂಚಿಸಲಾಗಿದೆ. ಗಾಯಗೊಂಡ ಎಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ” ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.