ಯುಜಿ ಸಿಇಟಿ ಸೀಟು ರದ್ದತಿಗೆ ₹5 ಸಾವಿರ ದಂಡ: ವಿದ್ಯಾರ್ಥಿಗಳ ಪ್ರತಿಭಟನೆ
ಕೆಇಎ ಕಚೇರಿ ಮುಂದೆ ವಿದ್ಯಾರ್ಥಿಗಳು, ಪೋಷಕರ ಆಕ್ರೋಶ
ಯುಜಿ ಸಿಇಟಿ ಸೀಟು ರದ್ದತಿಗೆ ₹5 ಸಾವಿರ ದಂಡ: ವಿದ್ಯಾರ್ಥಿಗಳ ಪ್ರತಿಭಟನೆ


ಬೆಂಗಳೂರು, 27 ಆಗಸ್ಟ್ (ಹಿ.ಸ.):

ಆ್ಯಂಕರ್:

ಯುಜಿ ಸಿಇಟಿ-2026ರ ಎರಡನೇ ಸುತ್ತಿನ ಸೀಟು ಹಂಚಿಕೆ ಬಳಿಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಧಿಸಿರುವ ನಿಯಮಗಳ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೀಟು ರದ್ದುಗೊಳಿಸಲು ₹5 ಸಾವಿರ ದಂಡ ವಿಧಿಸಿರುವುದನ್ನು ವಿರೋಧಿಸಿ ಮಲ್ಲೇಶ್ವರಂನ ಕೆಇಎ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಎರಡನೇ ಸುತ್ತಿನಲ್ಲಿ ಸೀಟು ಪಡೆದ ಅಭ್ಯರ್ಥಿಗಳು ಮೂರನೇ ಸುತ್ತಿನಲ್ಲಿ ಭಾಗವಹಿಸಲು ಹಂಚಿಕೆಯಾದ ಸೀಟನ್ನು ರದ್ದುಗೊಳಿಸಬೇಕಿದ್ದು, ಇದಕ್ಕಾಗಿ ಪ್ರತಿ ವಿದ್ಯಾರ್ಥಿಯಿಂದ ₹5 ಸಾವಿರ ದಂಡ ವಸೂಲಿ ಮಾಡಲಾಗುತ್ತಿದೆ. ಆನ್‌ಲೈನ್ ಮೂಲಕ ಸೀಟು ರದ್ದುಗೊಳಿಸಿ ದಂಡ ಪಾವತಿಸಲು ಆ.27ರಿಂದ 29ರ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ನೀಡಲಾಗಿದೆ.

ಈಗಾಗಲೇ ವಿವಿಧ ಶುಲ್ಕಗಳ ಹೊರೆ ಎದುರಿಸುತ್ತಿರುವ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಮೇಲೆ ಹೆಚ್ಚುವರಿ ದಂಡ ವಿಧಿಸುವುದು ಸರಿಯಲ್ಲ. ಕೂಡಲೇ ನಿಯಮ ಹಿಂಪಡೆಯಬೇಕು ಎಂದು ಪೋಷಕರು ಆಗ್ರಹಿಸಿದರು.

ತಪ್ಪು ಮಾಹಿತಿ ಆರೋಪ: ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ನೀಡಲಾದ ತಪ್ಪು ಮಾಹಿತಿಯ ಆಧಾರದ ಮೇಲೆ ನರ್ಸಿಂಗ್ ಹಾಗೂ ಬಿಪಿಟಿ ಕೋರ್ಸ್‌ಗಳಿಗೆ ಕೆಲವು ಕಾಲೇಜುಗಳಲ್ಲಿ ಸೀಟು ಹಂಚಿಕೆ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಪ್ರವೇಶಕ್ಕಾಗಿ ಕಾಲೇಜುಗಳಿಗೆ ತೆರಳಿದಾಗ ಕೆಲವು ಕಡೆ ಕಾಲೇಜುಗಳೇ ಇಲ್ಲದಿರುವುದು ಹಾಗೂ ವಿಳಾಸ ಬದಲಾಗಿರುವುದು ಬೆಳಕಿಗೆ ಬಂದಿದೆ ಎಂದು ಪ್ರತಿಭಟನಾಕಾರರು ದೂರಿದರು.

ಇಂತಹ ಲೋಪಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷಕ್ಕೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು. ಕೆಇಎ ಹಾಗೂ ಸರ್ಕಾರದಿಂದ ಸ್ಪಷ್ಟನೆ ದೊರೆಯುವವರೆಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಆತಂಕ ಮುಂದುವರಿದಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande