ಬೆಂಗಳೂರಿನ ರಸ್ತೆ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡ ಬೈಕ್ ಸವಾರ,ಚಿಕಿತ್ಸೆಗೆ ಹಣವಿಲ್ಲದೆ ಪರದಾಟ
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾದ ಬಡ ಕುಟುಂಬ
bengaluru-pothole-accident-sudhamanagar-rider-fractures-leg-family-struggles-for-treatment-funds


ಬೆಂಗಳೂರು, 27 ಆಗಸ್ಟ್ (ಹಿ.ಸ.):

ಆ್ಯಂಕರ್:

ರಸ್ತೆ ಗುಂಡಿಗಳ ಅವಾಂತರಕ್ಕೆ ಮತ್ತೊಬ್ಬ ಅಮಾಯಕ ನಾಗರಿಕ ಬಲಿಯಾಗಿರುವ ದಾರುಣ ಘಟನೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಸುಧಾಮ ನಗರದಲ್ಲಿ ನಡೆದಿದೆ. ರಸ್ತೆಯಲ್ಲಿದ್ದ ದೊಡ್ಡ ಗುಂಡಿ ಕಾಣದೆ ದ್ವಿಚಕ್ರ ವಾಹನ ಸವಾರರೊಬ್ಬರು ಬಿದ್ದು ಕಾಲು ಮುರಿದುಕೊಂಡಿದ್ದು, ವೈದ್ಯರು ತುರ್ತು ಶಸ್ತ್ರಚಿಕಿತ್ಸೆಗೆ 2 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ಬಡತನದ ಬೇಗೆಯಲ್ಲಿರುವ ಕುಟುಂಬವು ಹಣವಿಲ್ಲದೆ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಸೋಮವಾರ ಬೆಳಿಗ್ಗೆ 10:30ರ ಸುಮಾರಿಗೆ ಸುಧಾಮ ನಗರದಲ್ಲಿ ಈ ದುರ್ಘಟನೆ ಸಂಭವಿಸಿದೆ. 52 ವರ್ಷದ ವಿಶ್ವನಾಥ್ ಎಂಬುವವರು ತಮ್ಮ ಹೆಂಡತಿ ಮತ್ತು ಮೊಮ್ಮಗನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿಯೊಂದು ಇತ್ತು. ಆದರೆ, ಮಳೆ ನೀರು ತುಂಬಿಕೊಂಡಿದ್ದರಿಂದ ಗುಂಡಿ ಇರುವುದು ವಿಶ್ವನಾಥ್ ಅವರ ಕಣ್ಣಿಗೆ ಬಿದ್ದಿಲ್ಲ. ಪರಿಣಾಮವಾಗಿ ವಾಹನದ ಬ್ಯಾಲೆನ್ಸ್ ತಪ್ಪಿ ಅವರು ನೇರವಾಗಿ ಗುಂಡಿಗೆ ಬಿದ್ದಿದ್ದು, ಬಲಗಾಲು ಮುರಿದುಕೊಂಡು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಸಂಪೂರ್ಣ ದೃಶ್ಯಾವಳಿ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸದ್ಯ ಗಾಯಾಳು ವಿಶ್ವನಾಥ್ ಅವರನ್ನು ನೃಪತುಂಗ ರಸ್ತೆಯಲ್ಲಿರುವ ಸೈಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.ಮೊನ್ನೆ ಒಂದೇ ದಿನ ಆಸ್ಪತ್ರೆ ಬಿಲ್ ರೂಪ 30,000 ಪಾವತಿಸಲಾಗಿದೆ.ಪ್ರತಿದಿನ ಆಸ್ಪತ್ರೆ ಖರ್ಚಿಗಾಗಿಯೇ 5,000 ದಿಂದ 10,000 ರೂಪಾಯಿ ವರೆಗೆ ಖರ್ಚಾಗುತ್ತಿದೆ.ವೈದ್ಯರು ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕು ಎಂದಿದ್ದು, ಅದಕ್ಕೆ ಕನಿಷ್ಠ 2 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ.ದಿನಗೂಲಿ ಅಥವಾ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಹೊಟ್ಟೆಹೊರೆದುಕೊಳ್ಳುವ ಈ ಕುಟುಂಬಕ್ಕೆ ಇಷ್ಟು ದೊಡ್ಡ ಮೊತ್ತವನ್ನು ಭರಿಸುವುದು ಅಸಾಧ್ಯವಾಗಿದ್ದು, ದಿಕ್ಕು ತೋಚದಂತಾಗಿದೆ.

ರಸ್ತೆಗಳ ದುಸ್ಥಿತಿಯಿಂದ ಪ್ರಾಣ ಕಳೆದುಕೊಳ್ಳುವ ಮತ್ತು ಅಂಗವಿಕಲರಾಗುವ ಪರಿಸ್ಥಿತಿ ಬಂದಿದ್ದರೂ, ಸಂಬಂಧಪಟ್ಟ ಜಿಬಿಎ (ಗೌ.ಬೆಂ.ಪಾ/ಸ್ಥಳೀಯ ಆಡಳಿತ) ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇತ್ತ ತಲೆಹಾಕಿಲ್ಲ. ಆಸ್ಪತ್ರೆಗೆ ಬಂದು ಗಾಯಾಳುವಿನ ಆರೋಗ್ಯವನ್ನಾಗಲಿ ಅಥವಾ ಕುಟುಂಬದವರ ಯೋಗಕ್ಷೇಮವನ್ನಾಗಲಿ ಇಲ್ಲಿಯವರೆಗೆ ಯಾರೂ ವಿಚಾರಿಸಿಲ್ಲ ಎಂದು ಸಂತ್ರಸ್ತರ ಕುಟುಂಬ ಗಂಭೀರ ಆರೋಪ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande