ಬೆಂಗಳೂರಿನ ಮೊದಲ ಟೋಲ್ ಫ್ಲೈಓವರ್ ಕಾರಿಡಾರ್ ಗೆ ಟೆಂಡರ್ ಆಹ್ವಾನ
ಬೆಂಗಳೂರಿನ ಮೊದಲ ಟೋಲ್ ಫ್ಲೈಓವರ್
ಬೆಂಗಳೂರಿನ ಮೊದಲ ಟೋಲ್ ಫ್ಲೈಓವರ್ ಕಾರಿಡಾರ್ ಗೆ ಟೆಂಡರ್ ಆಹ್ವಾನ


ಬೆಂಗಳೂರು, 27 ಆಗಸ್ಟ್ (ಹಿ.ಸ.):

ಆ್ಯಂಕರ್:

ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಸಿಲಿಕಾನ್ ಸಿಟಿಯ ಮೊದಲ ಟೋಲ್ ಫ್ಲೈಓವರ್ ನಿರ್ಮಾಣಕ್ಕಾಗಿ ಆಗಸ್ಟ್ 24 ರಂದು ಅಧಿಕೃತವಾಗಿ ಟೆಂಡರ್ ಆಹ್ವಾನಿಸಿದೆ.

ಯಶವಂತಪುರದಿಂದ ಕೆ.ಆರ್.ಪುರದವರೆಗೆ ನಿರ್ಮಾಣವಾಗಲಿರುವ ಈ 28 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ಗೆ ಟೋಲ್ ಸಂಗ್ರಹ ಅವಧಿಯನ್ನು ಗರಿಷ್ಠ 32 ವರೆ ವರ್ಷಗಳಿಗೆ ಖಚಿತವಾಗಿ 11,863 ದಿನಗಳು ಮಿತಿಗೊಳಿಸಲಾಗಿದೆ.

ಮಾರ್ಗದ ವಿವರ: ಈ ಕಾರಿಡಾರ್ ಯಶವಂತಪುರದ ಮಥಿಕೆರೆ ಕ್ರಾಸ್ನಿಂದ ಆರಂಭಗೊಂಡು, ಭಾರತೀಯ ವಿಜ್ಞಾನ ಸಂಸ್ಥೆ , ಮೇಖ್ರಿ ವೃತ್ತ, ಜಯಮಹಲ್, ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮತ್ತು ಹಲಸೂರು ಕೆರೆಯ ಮೂಲಕ ಸಾಗಿ ಒಟ್ಟು 28 ಕಿ.ಮೀ ದೂರವನ್ನು ಕ್ರಮಿಸಿ ಕೆ.ಆರ್.ಪುರ ಬಳಿ ಅಂತ್ಯಗೊಳ್ಳಲಿದೆ.

ಅಂದಾಜು ವೆಚ್ಚ: ಈ ಯೋಜನೆಯನ್ನು ಒಟ್ಟು ₹3,536 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಇದರಲ್ಲಿ ಸಿವಿಲ್ ಕಾಮಗಾರಿಗೆ ಮಾತ್ರ ₹2,710 ಕೋಟಿ ತಗುಲಲಿದ್ದು, ಸೂಪರ್ಸ್ಟ್ರಕ್ಚರ್ ಕಾಮಗಾರಿಯೇ ಶೇ. 62ಕ್ಕೂ ಅಧಿಕ ವೆಚ್ಚವನ್ನು ಹೊಂದಿದೆ.

ನಿರ್ಮಾಣ ಮಾದರಿ ಮತ್ತು ಗಡುವು: ಇದನ್ನು ಬಿಲ್ಡ್-ಓನ್-ಆಪರೇಟ್-ಟ್ರಾನ್ಸ್ಫರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಳಿಸಲು 30 ತಿಂಗಳ ಗಡುವು ವಿಧಿಸಲಾಗಿದೆ.

ಹೊಸ ಬಿಡ್ಡಿಂಗ್ ಮಾನದಂಡ: ಸಂಪ್ರದಾಯಬದ್ಧ ಒಪ್ಪಂದಗಳಂತೆ ಸರ್ಕಾರವೇ ನಿರ್ದಿಷ್ಟ ಅವಧಿಯನ್ನು ನಿಗದಿಪಡಿಸುವ ಬದಲು, BSMILE ಸಂಸ್ಥೆಯು ಈ ಬಾರಿ ರಿಯಾಯಿತಿ ಅವಧಿಯನ್ನೇ ಪ್ರಮುಖ ಆರ್ಥಿಕ ಬಿಡ್ಡಿಂಗ್ ಮಾನದಂಡವನ್ನಾಗಿ ಮಾಡಿದೆ. ಹೂಡಿಕೆ ಹಾಗೂ ಲಾಭವನ್ನು ಮರಳಿ ಪಡೆಯಲು ತಮಗೆ ಎಷ್ಟು ದಿನಗಳು ಬೇಕಾಗುತ್ತವೆ ಎಂಬುದನ್ನು ಬಿಡ್ದಾರರೇ ನಮೂದಿಸಬೇಕು. ಯಾವುದೇ ಕಾರಣಕ್ಕೂ 11,863 ದಿನಗಳಿಗಿಂತ (32.5 ವರ್ಷ) ಹೆಚ್ಚಿನ ಅವಧಿ ಕೋರುವ ಬಿಡ್ಗಳನ್ನು ತಿರಸ್ಕರಿಸಲಾಗುವುದು.

ತಾಂತ್ರಿಕ ಹಾಗೂ ಇಂಜಿನಿಯರಿಂಗ್ ವಿಶೇಷತೆಗಳು: ಈ ಮೇಲ್ಸೇತುವೆಯು 19.61 ಮೀಟರ್ ಅಗಲದ ನಾಲ್ಕು ಪಥಗಳ ವಿನ್ಯಾಸವನ್ನು ಹೊಂದಿರಲಿದ್ದು, ವಾಹನಗಳು ಗಂಟೆಗೆ 60 ರಿಂದ 80 ಕಿ.ಮೀ ವೇಗದಲ್ಲಿ ಸಂಚರಿಸಬಹುದಾಗಿದೆ.

ಪ್ರವೇಶ ಮತ್ತು ನಿರ್ಗಮನ ಮಾರ್ಗಗಳು: ಎಂಇಐ ಜಂಕ್ಷನ್ನಲ್ಲಿ ಸ್ಪ್ಲಿಟ್ ಫ್ಲೈಓವರ್ ಸೇರಿದಂತೆ ಆರ್.ಟಿ. ನಗರ ಮುಖ್ಯರಸ್ತೆ, ಇಂದಿರಾನಗರ ಮತ್ತು ವರ್ತೂರು ರಸ್ತೆಗಳಂತಹ ಪ್ರಮುಖ ಜಂಕ್ಷನ್ಗಳನ್ನು ಇದು ಒಳಗೊಂಡಿದೆ. ಇದರೊಂದಿಗೆ ಕಾರಿಡಾರ್ನಲ್ಲಿ ಒಟ್ಟು 10 ಅಪ್ ಹಾಗೂ 10 ಡೌನ್ ರಾಂಪ್ಗಳನ್ನು ನಿರ್ಮಿಸಲಾಗುತ್ತದೆ.

ಪ್ರಯಾಣದ ಸಮಯ ಕಡಿತ: ಸದ್ಯ ಯಶವಂತಪುರದಿಂದ ಇಂದಿರಾನಗರಕ್ಕೆ ಮೆಟ್ರೋ ಸಂಪರ್ಕವಿದ್ದರೂ, ಅದು ಮೆಜೆಸ್ಟಿಕ್ ಮೂಲಕ ಕೇಂದ್ರ ವ್ಯಾಪಾರ ಜಿಲ್ಲೆಯನ್ನು ಸುತ್ತಿಕೊಂಡು ಹೋಗುವುದರಿಂದ ಹೆಚ್ಚು ಸಮಯ ತಗುಲುತ್ತದೆ. ಆದರೆ ಈ ಹೊಸ ನೇರ ಪೂರ್ವ-ಪಶ್ಚಿಮ ಎಲಿವೇಟೆಡ್ ಕಾರಿಡಾರ್ ನಗರದ ಕೇಂದ್ರ ಭಾಗವನ್ನು ಬೈಪಾಸ್ ಮಾಡಿ, ಸಂಚಾರ ದಟ್ಟಣೆಯನ್ನು ಗಣನೀಯವಾಗಿ ತಗ್ಗಿಸಲಿದೆ ಎಂದು ವಿವರವಾದ ಯೋಜನಾ ವರದಿ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande