ಸರ್ಕಾರಿ ನೌಕರರಿಗೆ ಗುಣಮಟ್ಟದ ಆರೋಗ್ಯ ಸೇವೆ: ಜಿಲ್ಲಾಧಿಕಾರಿ ಸ್ನೇಹಲ್ ಆರ್.
ಧಾರವಾಡ, 27 ಆಗಸ್ಟ್ (ಹಿ.ಸ.): ಆ್ಯಂಕರ್:ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವಂತೆ ಹೆಚ್ಚಿನ ಆಸ್ಪತ್ರೆಗಳು ಯೋಜನೆಯೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮನವಿ ಮಾಡಿದರು. ಜಿಲ್ಲಾಧಿ
ಆರೋಗ್ಯ ಸಂಜೀವಿನಿ ಯೋಜನೆ ಕಾರ್ಯಾಗಾರ


ಧಾರವಾಡ, 27 ಆಗಸ್ಟ್ (ಹಿ.ಸ.):

ಆ್ಯಂಕರ್:ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವಂತೆ ಹೆಚ್ಚಿನ ಆಸ್ಪತ್ರೆಗಳು ಯೋಜನೆಯೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮನವಿ ಮಾಡಿದರು.

ಜಿಲ್ಲಾಧಿಕಾರಿ ನೂತನ ಸಭಾಭವನದಲ್ಲಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುವರ್ಣ ಆರೋಗ್ಯ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ಸಂಜೀವಿನಿ ಯೋಜನೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ 24 ಆಸ್ಪತ್ರೆಗಳು ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಣಿಯಾಗಿದ್ದು, ಈ ಪೈಕಿ 20 ಆಸ್ಪತ್ರೆಗಳು ಆರೋಗ್ಯ ಸಂಜೀವಿನಿ ಯೋಜನೆಯಲ್ಲೂ ನೋಂದಣಿಯಾಗಿವೆ. ಉಳಿದ ನಾಲ್ಕು ಆಸ್ಪತ್ರೆಗಳು ನೋಂದಣಿಯಾಗಬೇಕು. ಅರ್ಹತೆ ಹೊಂದಿರುವ ಇತರೆ ಆಸ್ಪತ್ರೆಗಳೂ ಯೋಜನೆಗೆ ಸೇರ್ಪಡೆಯಾಗಬೇಕು ಎಂದರು.

ಯೋಜನೆಯಡಿ ಚಿಕಿತ್ಸಾ ಪಾವತಿ ಪ್ರಕ್ರಿಯೆಯಲ್ಲಿ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ದರಗಳಿಗೆ ಅನುಗುಣವಾಗಿ ಚಿಕಿತ್ಸಾ ದರ ನಿಗದಿಪಡಿಸಲಾಗಿದೆ. ಇದರಿಂದ ಆಸ್ಪತ್ರೆಗಳಿಗೆ ಅನುಕೂಲವಾಗಲಿದೆ. ಧಾರವಾಡ ಜಿಲ್ಲೆಯಲ್ಲಿ 15 ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರಿದ್ದು, ನೆರೆಯ ಜಿಲ್ಲೆಗಳ ನೌಕರರೂ ಚಿಕಿತ್ಸೆಗಾಗಿ ಧಾರವಾಡದ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ ಎಂದು ಹೇಳಿದರು.

ಹುಬ್ಬಳ್ಳಿ ಭಾರತೀಯ ವೈದ್ಯಕೀಯ ಸಂಘದ ಡಾ. ಬಸವರಾಜ ಸರ್ಜನ ಮಾತನಾಡಿ, ಪರಿಷ್ಕೃತ ಚಿಕಿತ್ಸಾ ದರ ಹಾಗೂ ಸುಧಾರಿತ ಮರುಪಾವತಿ ವ್ಯವಸ್ಥೆಯಿಂದ ಹೆಚ್ಚಿನ ಆಸ್ಪತ್ರೆಗಳು ಯೋಜನೆಯಡಿ ನೋಂದಣಿಯಾಗುವ ನಿರೀಕ್ಷೆಯಿದೆ. ಸರ್ಕಾರಿ ನೌಕರರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ವೈದ್ಯಕೀಯ ಸಮುದಾಯ ಸಹಕಾರ ನೀಡಲಿದೆ ಎಂದರು.

ಯೋಜನೆಯ ನೋಡಲ್ ಅಧಿಕಾರಿ ಡಾ. ಶಶಿಧರ ಕಳಸನೂರಮಠ ಅವರು ಯೋಜನೆಯ ಪ್ರಮುಖ ಅಂಶಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪರಶುರಾಮ ಎಫ್.ಕೆ., ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ್ ಸೇರಿದಂತೆ ಅಧಿಕಾರಿಗಳು, ವೈದ್ಯರು ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande