
ಗದಗ, 27 ಆಗಸ್ಟ್ (ಹಿ.ಸ.)
ಆ್ಯಂಕರ್:- ನೇಪಾಳದಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪ ಹಾಗೂ ದಿಢೀರ್ ಪ್ರವಾಹದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಮೂಲದ ಪ್ರವಾಸಿಗರು, ನಾಗರಿಕರು ಯಾರಾದರೂ ನಾಪತ್ತೆಯಾಗಿದ್ದರೆ ಅಥವಾ ಕುಟುಂಬಸ್ಥರ ಸಂಪರ್ಕಕ್ಕೆ ಸಿಗದೇ ಇದ್ದರೆ, ತಕ್ಷಣವೇ ಅವರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡುವಂತೆ ಮನವಿ ಮಾಡಲಾಗಿದೆ.
ನೇಪಾಳದಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದಿಂದಾಗಿ ಹಲವರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಸ್ಥಿತಿಯ ಕುರಿತು ನಿರಂತರವಾಗಿ ಮಾಹಿತಿ ಪಡೆಯುತ್ತಿದೆ. ಕೇಂದ್ರ ಗೃಹ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ರಾಜ್ಯ ಸರ್ಕಾರ ಸತತ ಸಂಪರ್ಕದಲ್ಲಿದ್ದು, ನೇಪಾಳದಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ ಹಾಗೂ ನಾಪತ್ತೆಯಾಗಿರುವವರ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ.
ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸುವುದು ಹಾಗೂ ನಾಪತ್ತೆಯಾದವರನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ನಾಪತ್ತೆಯಾದವರ ಮಾಹಿತಿ ನೀಡಲು ಮನವಿ
ಗದಗ ಜಿಲ್ಲೆಯ ಯಾವುದೇ ಕುಟುಂಬದ ಸದಸ್ಯರು, ಸ್ನೇಹಿತರು ಅಥವಾ ಪರಿಚಿತರು ನೇಪಾಳಕ್ಕೆ ಪ್ರವಾಸ ಅಥವಾ ಇತರ ಕಾರಣಗಳಿಗಾಗಿ ತೆರಳಿ, ಇದೀಗ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಅನುಮಾನವಿದ್ದಲ್ಲಿ ಕೂಡಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು.
ನಾಪತ್ತೆಯಾಗಿರುವ ವ್ಯಕ್ತಿಯ ಪೂರ್ಣ ಹೆಸರು, ಮೊಬೈಲ್ ಸಂಖ್ಯೆ, ನೇಪಾಳದಲ್ಲಿ ಕೊನೆಯದಾಗಿ ಸಂಪರ್ಕಿಸಿದ ಸ್ಥಳ ಹಾಗೂ ಸಮಯ ಮತ್ತು ಖಾಯಂ ವಿಳಾಸ ಸೇರಿದಂತೆ ಲಭ್ಯವಿರುವ ಮಾಹಿತಿಯನ್ನು ಒದಗಿಸುವಂತೆ ಸೂಚಿಸಲಾಗಿದೆ.
ಈ ಮಾಹಿತಿಯ ಆಧಾರದ ಮೇಲೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ನಾಪತ್ತೆಯಾದವರ ಬಗ್ಗೆ ಮಾಹಿತಿ ಕಲೆಹಾಕಲು ಹಾಗೂ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಆನ್ಲೈನ್ ಮೂಲಕವೂ ಮಾಹಿತಿ ಸಲ್ಲಿಕೆ
ನಾಪತ್ತೆಯಾದವರ ವಿವರಗಳನ್ನು ಸಾರ್ವಜನಿಕರು ಆನ್ಲೈನ್ ಮೂಲಕವೂ ಸರ್ಕಾರಕ್ಕೆ ಸಲ್ಲಿಸಬಹುದಾಗಿದೆ. ರಾಜ್ಯ ಸರ್ಕಾರವು ಈ ಉದ್ದೇಶಕ್ಕಾಗಿ ವಿಶೇಷ ಗೂಗಲ್ ಫಾರ್ಮ್ ವ್ಯವಸ್ಥೆ ಮಾಡಿದೆ.
ನಾಪತ್ತೆಯಾದವರ ಮಾಹಿತಿ ಸಲ್ಲಿಸುವ ಗೂಗಲ್ ಫಾರ್ಮ್
ನಾಪತ್ತೆಯಾದವರ ಬಗ್ಗೆ ಮಾಹಿತಿ ಇರುವವರು ವಿಳಂಬ ಮಾಡದೆ ಈ ಫಾರ್ಮ್ನಲ್ಲಿ ಅಗತ್ಯ ವಿವರಗಳನ್ನು ದಾಖಲಿಸುವಂತೆ ಮನವಿ ಮಾಡಲಾಗಿದೆ.
24x7 ಸಹಾಯವಾಣಿ ಸಂಪರ್ಕಿಸಿ
ನೇಪಾಳ ದುರಂತದಿಂದ ಸಂತ್ರಸ್ತರಾಗಿರುವವರು ಹಾಗೂ ಅವರ ಕುಟುಂಬಸ್ಥರಿಗೆ ನೆರವು ನೀಡಲು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ವತಿಯಿಂದ 24x7 ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ.
ಸಾರ್ವಜನಿಕರು 1070 ಟೋಲ್ಫ್ರೀ ಸಂಖ್ಯೆಗೆ ಅಥವಾ 080-22253707 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು. ಗದಗ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ 08372-239177 (1077) ಸಂಖ್ಯೆಯನ್ನೂ ಸಂಪರ್ಕಿಸಬಹುದಾಗಿದೆ.
ನೇಪಾಳದಲ್ಲಿರುವ ಭಾರತೀಯರಿಗೆ ತುರ್ತು ಸಂಪರ್ಕ
ನೇಪಾಳದಲ್ಲಿ ಸಿಲುಕಿರುವ ಭಾರತೀಯರಿಗೆ ತುರ್ತು ನೆರವು ಒದಗಿಸುವ ನಿಟ್ಟಿನಲ್ಲಿ ಅಲ್ಲಿನ ಭಾರತೀಯ ರಾಯಭಾರ ಕಚೇರಿಯೂ ತುರ್ತು ಸಂಪರ್ಕ ವ್ಯವಸ್ಥೆ ಕಲ್ಪಿಸಿದೆ.
ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು +977 9851316807, +977 9709107500 ಹಾಗೂ +977 9810326117 ಸಂಖ್ಯೆಗೆ ನೇರವಾಗಿ ಕರೆ ಮಾಡಬಹುದು ಅಥವಾ ವಾಟ್ಸಾಪ್ ಮೂಲಕ ಸಂಪರ್ಕಿಸಬಹುದು.
ನೇಪಾಳದಲ್ಲಿ ಸಿಲುಕಿರುವ ಗದಗ ಜಿಲ್ಲೆಯ ನಿವಾಸಿಗಳ ಕುಟುಂಬಸ್ಥರು ಈ ತುರ್ತು ಸಂಪರ್ಕ ಸಂಖ್ಯೆಗಳನ್ನು ಬಳಸಿಕೊಂಡು ಅಗತ್ಯ ಮಾಹಿತಿ ಪಡೆಯಬಹುದಾಗಿದೆ.
ಕುಟುಂಬಸ್ಥರಲ್ಲಿ ಆತಂಕ
ನೇಪಾಳದಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ವಿದೇಶ ಪ್ರವಾಸಕ್ಕೆ ತೆರಳಿರುವ ತಮ್ಮ ಕುಟುಂಬಸ್ಥರು, ಸ್ನೇಹಿತರು ಹಾಗೂ ಪರಿಚಿತರ ಸುರಕ್ಷತೆ ಬಗ್ಗೆ ಹಲವರಲ್ಲಿ ಆತಂಕ ಮೂಡಿದೆ. ಸಂಪರ್ಕಕ್ಕೆ ಸಿಗದವರ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವುದು ಅತ್ಯಂತ ಅಗತ್ಯವಾಗಿದೆ.
ನಾಪತ್ತೆಯಾದ ವ್ಯಕ್ತಿಯ ಬಗ್ಗೆ ಯಾವುದೇ ಸಣ್ಣ ಮಾಹಿತಿ ಇದ್ದರೂ ಅದನ್ನು ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಹೆಸರು, ಮೊಬೈಲ್ ಸಂಖ್ಯೆ, ಕೊನೆಯದಾಗಿ ಮಾತನಾಡಿದ ಸಮಯ ಮತ್ತು ಸ್ಥಳ ಸೇರಿದಂತೆ ನಿಖರ ಮಾಹಿತಿ ನೀಡುವುದರಿಂದ ಪತ್ತೆ ಕಾರ್ಯಕ್ಕೆ ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳದಲ್ಲಿರುವ ಗದಗ ಮೂಲದ ನಾಗರಿಕರ ಸುರಕ್ಷತೆ ಹಾಗೂ ಅಗತ್ಯ ನೆರವಿಗಾಗಿ ಜಿಲ್ಲಾಡಳಿತವು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.
ಆದ್ದರಿಂದ ನೇಪಾಳದಲ್ಲಿ ಕುಟುಂಬಸ್ಥರು ಅಥವಾ ಪರಿಚಿತರು ನಾಪತ್ತೆಯಾಗಿರುವ ಬಗ್ಗೆ ಅನುಮಾನವಿರುವವರು ಆತಂಕಕ್ಕೊಳಗಾಗದೆ ತಕ್ಷಣವೇ ಜಿಲ್ಲಾಡಳಿತದ ಸಹಾಯವಾಣಿ ಅಥವಾ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP