ಕರ್ನಾಟಕದ ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ಕಠಿಣ ಕ್ರಮಕ್ಕೆ ಗೋವಿಂದ ಕಾರಜೋಳ ಆಗ್ರಹ
ನವದೆಹಲಿ, 27 ಆಗಸ್ಟ್ (ಹಿ.ಸ.): ಆ್ಯಂಕರ್:ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಆಧುನಿಕ ತಂತ್ರಜ್ಞಾನ ಬಳಸುವ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ. ನವದೆಹಲಿಯ
Meeting


ನವದೆಹಲಿ, 27 ಆಗಸ್ಟ್ (ಹಿ.ಸ.):

ಆ್ಯಂಕರ್:ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಆಧುನಿಕ ತಂತ್ರಜ್ಞಾನ ಬಳಸುವ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ಕಲ್ಲಿದ್ದಲು, ಗಣಿ ಮತ್ತು ಉಕ್ಕು ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಕರ್ನಾಟಕ ಹಾಗೂ ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದ ಹಲವು ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿದರು.

ಕರ್ನಾಟಕದಲ್ಲಿ 2023ರಿಂದ 2025ರವರೆಗೆ 23,575 ಅಕ್ರಮ ಗಣಿಗಾರಿಕೆ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ, ಎಷ್ಟು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿದೆ, ಎಷ್ಟು ದಂಡ ವಿಧಿಸಲಾಗಿದೆ ಹಾಗೂ ಎಷ್ಟು ಮೊತ್ತ ವಸೂಲಾಗಿದೆ ಎಂಬ ಬಗ್ಗೆ ವಿವರವಾದ ಚರ್ಚೆ ನಡೆಯಿತು. ಅಕ್ರಮ ಗಣಿಗಾರಿಕೆ ತಡೆಗೆ ಆಧುನಿಕ ತಂತ್ರಜ್ಞಾನಗಳ ಬಳಕೆ ಹೆಚ್ಚಿಸುವಂತೆ ಒತ್ತಾಯಿಸಿದರು.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ ಹಾಗೂ ಚಿತ್ರದುರ್ಗ ತಾಲೂಕುಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ಬಂದಿರುವ ದೂರುಗಳನ್ನು ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗಣಿಗಾರಿಕೆ ವಾಹನಗಳ ಸಂಚಾರದಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆಗಳ ದುರಸ್ತಿ, ಧೂಳಿನ ಮಾಲಿನ್ಯದಿಂದ ಕೃಷಿ ಬೆಳೆಗಳು ಹಾಗೂ ಭೂಮಿಗೆ ಉಂಟಾಗುತ್ತಿರುವ ಹಾನಿ ತಡೆ, ಬ್ಲಾಸ್ಟಿಂಗ್‌ನಿಂದ ಅಂತರ್ಜಲ ಮತ್ತು ಕುಡಿಯುವ ನೀರಿನ ಮೂಲಗಳ ಮೇಲಾಗುತ್ತಿರುವ ಪರಿಣಾಮದ ವೈಜ್ಞಾನಿಕ ಪರಿಶೀಲನೆಗೂ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕು. ಅಕ್ರಮ ಖನಿಜ ಸಾಗಣೆ ಹಾಗೂ ಅನುಮತಿಗಿಂತ ಹೆಚ್ಚಿನ ಪ್ರಮಾಣದ ಗಣಿಗಾರಿಕೆ ಕಂಡುಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಮಸ್ಯೆಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲು ಪರಿಣಾಮಿತ ಪ್ರದೇಶಗಳಿಗೆ ಸಂಸದೀಯ ಸ್ಥಾಯಿ ಸಮಿತಿಯ ಸ್ಥಳ ಪರಿಶೀಲನಾ ತಂಡವನ್ನು ಕಳುಹಿಸುವಂತೆ ಮನವಿ ಮಾಡಿದರು. ಚಿತ್ರದುರ್ಗದ ರೈತರು, ಕಾರ್ಮಿಕರು ಹಾಗೂ ಜನಸಾಮಾನ್ಯರ ಹಿತಾಸಕ್ತಿಗಾಗಿ ಸಂಸತ್ತಿನಲ್ಲೂ ಮತ್ತು ಸಂಸದೀಯ ಸಮಿತಿಯಲ್ಲೂ ನಿರಂತರವಾಗಿ ಧ್ವನಿ ಎತ್ತುವುದಾಗಿ ಗೋವಿಂದ ಕಾರಜೋಳ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande