ಬಡವರಿಗೆ ಡಿಸೆಂಬರ್ಗೂ ಮುನ್ನ 5 ಲಕ್ಷ ನಿವೇಶನ ಹಂಚಿಕೆ: ಜಿ. ಪರಮೇಶ್ವರ್
ಬೆಂಗಳೂರು, 27 ಆಗಸ್ಟ್ (ಹಿ.ಸ.): ಆ್ಯಂಕರ್: ಬಡವರಿಗೆ ನಿವೇಶನದ ಹಕ್ಕು ನೀಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಮೊದಲ ಹಂತದಲ್ಲಿ ಡಿಸೆಂಬರ್‌ಗೂ ಮುನ್ನ ಕನಿಷ್ಠ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ವಿಕಾಸಸೌಧದ
DCM meeting


ಬೆಂಗಳೂರು, 27 ಆಗಸ್ಟ್ (ಹಿ.ಸ.):

ಆ್ಯಂಕರ್:

ಬಡವರಿಗೆ ನಿವೇಶನದ ಹಕ್ಕು ನೀಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಮೊದಲ ಹಂತದಲ್ಲಿ ಡಿಸೆಂಬರ್‌ಗೂ ಮುನ್ನ ಕನಿಷ್ಠ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ವಿಕಾಸಸೌಧದಲ್ಲಿ ಇಂದು ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿದ ಅವರು, ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50 ಸಾವಿರ ನಿವೇಶನಗಳಿಗೆ ಅಗತ್ಯವಿರುವ ಸರ್ಕಾರಿ ಭೂಮಿಯನ್ನು ಸೆಪ್ಟೆಂಬರ್ 15ರೊಳಗೆ ಗುರುತಿಸುವಂತೆ ಸೂಚಿಸಿದರು. ಗ್ರಾಮಗಳಿಗೆ ಸಮೀಪದಲ್ಲಿದ್ದು, ರಸ್ತೆ ಮತ್ತು ನೀರಿನ ಸೌಲಭ್ಯ ಕಲ್ಪಿಸಲು ಸಾಧ್ಯವಾಗುವ ಜಮೀನಿಗೆ ಆದ್ಯತೆ ನೀಡಬೇಕು ಎಂದರು.

ರಾಜ್ಯದಲ್ಲಿ ಒಟ್ಟು 15.50 ಲಕ್ಷ ವಸತಿ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ. ವಸತಿ ಹಾಗೂ ನಿವೇಶನ ರಹಿತರ ಪಟ್ಟಿ ಸಿದ್ಧಪಡಿಸಿ, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಅಂಗವಿಕಲರು, ವಿಧವೆಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುವಂತೆ ಸೂಚಿಸಿದರು.

ಕಂದಾಯ ಗ್ರಾಮಗಳ ಘೋಷಣೆಗೆ ವೇಗ: ರಾಜ್ಯದಲ್ಲಿ 10,896 ಕಂದಾಯ ಗ್ರಾಮಗಳನ್ನು ಘೋಷಿಸುವ ಗುರಿಯಿದ್ದು, ಈವರೆಗೆ 3,354 ಗ್ರಾಮಗಳನ್ನು ಮಾತ್ರ ಘೋಷಿಸಲಾಗಿದೆ. ಪ್ರಾಥಮಿಕ ಅಧಿಸೂಚನೆಗೆ ಸಂಬಂಧಿಸಿದ 5,768 ಪ್ರಸ್ತಾವನೆಗಳು ಹಾಗೂ ಅಂತಿಮ ಅಧಿಸೂಚನೆಗೆ ಸಂಬಂಧಿಸಿದ 702 ಪ್ರಸ್ತಾವನೆಗಳು ಜಿಲ್ಲಾಧಿಕಾರಿಗಳ ಹಂತದಲ್ಲಿ ಬಾಕಿ ಇವೆ. ಪ್ರಾಥಮಿಕ ಅಧಿಸೂಚನೆ ಪ್ರಸ್ತಾವನೆಗಳನ್ನು 15 ದಿನಗಳೊಳಗೆ ಸರ್ಕಾರಕ್ಕೆ ಕಳುಹಿಸಿ, ಸಾಧ್ಯವಿರುವ ಕಡೆ ಅಂತಿಮ ಅಧಿಸೂಚನೆ ಹೊರಡಿಸುವಂತೆ ನಿರ್ದೇಶಿಸಿದರು.

ಈವರೆಗೆ ವಿತರಿಸಿರುವ 2,05,175 ಹಕ್ಕುಪತ್ರಗಳಲ್ಲಿ 1,55,575 ಹಕ್ಕುಪತ್ರಗಳು ಮಾತ್ರ ನೋಂದಣಿಯಾಗಿದ್ದು, ಉಳಿದವುಗಳ ನೋಂದಣಿ ಪ್ರಕ್ರಿಯೆಯನ್ನು ಸೆಪ್ಟೆಂಬರ್ 30ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.

ಭೂದಾಖಲೆಗಳ ಡಿಜಿಟಲೀಕರಣ: 10 ಜಿಲ್ಲೆಗಳಲ್ಲಿ ಭೂದಾಖಲೆಗಳ ಡಿಜಿಟಲೀಕರಣ ಪೂರ್ಣಗೊಂಡಿದ್ದು, 21 ಜಿಲ್ಲೆಗಳಲ್ಲಿ ಇನ್ನೂ ಕಾರ್ಯ ಬಾಕಿಯಿದೆ. ಒಟ್ಟು 71.78 ಕೋಟಿ ಪುಟಗಳ ಪೈಕಿ 47.35 ಕೋಟಿ ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಬಾಕಿ ಇರುವ 24.43 ಕೋಟಿ ಪುಟಗಳ ಡಿಜಿಟಲೀಕರಣವನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ನಿಗದಿತ ದೈನಂದಿನ ಗುರಿಗಿಂತ ಕಡಿಮೆ ಸಾಧನೆ ಮಾಡಿರುವ ಜಿಲ್ಲಾಧಿಕಾರಿಗಳು ವಿವರಣೆ ನೀಡಬೇಕು ಎಂದು ಪರಮೇಶ್ವರ್ ಹೇಳಿದರು.

ಬಗರ್‌ಹುಕುಂ ಅರ್ಜಿಗಳ ವಿಲೇವಾರಿಗೆ ಸೂಚನೆ: ಬಗರ್‌ಹುಕುಂ ಯೋಜನೆಯಡಿ 14,37,181 ಅರ್ಜಿಗಳು ಸ್ವೀಕೃತವಾಗಿದ್ದು, 6,98,933 ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ತಾಲೂಕು ಕಚೇರಿಗಳಲ್ಲಿರುವ 24,684 ಅರ್ಜಿಗಳನ್ನು ಒಳಗೊಂಡಂತೆ ಬಾಕಿ ಪ್ರಕರಣಗಳನ್ನು ಪ್ರತಿ ತಿಂಗಳ ಗುರಿ ನಿಗದಿಪಡಿಸಿಕೊಂಡು ತ್ವರಿತವಾಗಿ ವಿಲೇವಾರಿ ಮಾಡುವಂತೆ ತಹಶೀಲ್ದಾರರಿಗೆ ಸೂಚಿಸಿದರು.

ಮೇವಿನ ಲಭ್ಯತೆ ಪರಿಶೀಲನೆ: ಮಳೆಯ ಕೊರತೆಯಿಂದ ಹಲವು ಜಿಲ್ಲೆಗಳಲ್ಲಿ ಬಿತ್ತನೆ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಮೇವಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. 30 ವಾರಗಳಿಗಿಂತ ಕಡಿಮೆ ಅವಧಿಗೆ ಸಾಕಾಗುವಷ್ಟು ಮೇವು ಸಂಗ್ರಹವಿರುವ ಜಿಲ್ಲೆಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಕೆಎಂಎಫ್ ಮೂಲಕ ಮೇವಿನ ಬೀಜದ ಕಿಟ್‌ಗಳನ್ನು ವಿತರಿಸಲಾಗುತ್ತಿದ್ದು, ರೈತರಿಗೆ ಕಿಟ್ ನೀಡಲು 25 ಕೋಟಿ ರೂಪಾಯಿ ಒದಗಿಸಲಾಗುವುದು. ಪಶುಸಂಗೋಪನಾ ಇಲಾಖೆ ಕೂಡಲೇ ಕಿಟ್‌ಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

ಸಭೆಯಲ್ಲಿ ಹಿರಿಯ ಅಧಿಕಾರಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಮನೋಜ್ ಕುಮಾರ್ ಮೀನಾ, ಮೀನಾ ನಾಗರಾಜ್, ವೆಂಕಟರಾಜ್, ಎಂ.ಎನ್. ಅನುಚೇತ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande