
ಬಳ್ಳಾರಿ, 27 ಆಗಸ್ಟ್ (ಹಿ.ಸ.)
ಆ್ಯಂಕರ್ : ಶ್ರೀ ರಾಘವೇಂದ್ರತೀರ್ಥಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವನ್ನು ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನಾಧೀಶ್ವರರಾದ ಪ್ರಾತಃ ಸ್ಮರಣೀಯ ಶ್ರೀ ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರು, ಪ್ರಸ್ತುತ ಮಂತ್ರಾಲಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ 1008 ಶ್ರೀ ಶ್ರೀ ಡಾ. ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ ಇದೇ ಶ್ರೀ ಪರಾಭವನಾಮ ಸಂವತ್ಸರದ ಶ್ರಾವಣ ಬಹುಳ ಪ್ರತಿಪದ, ದ್ವಿತೀಯ ಹಾಗೂ ತೃತೀಯ ದಿನತ್ರಯಗಳಲ್ಲಿ ನಡೆಸಲು ಸಿದ್ಧತೆಗಳು ನಡೆದಿವೆ.
ಈ ಕುರಿತು ನಗರದ ಶ್ರೀ ಸತ್ಯನಾರಾಯಣ ಪೇಟೆಯ ರಾಯರ ಮಠದ ಅಧ್ವರ್ಯುಗಳು, ಆಗಸ್ಟ್ 29, 30 ಮತ್ತು 31ರ ಶನಿವಾರ, ಭಾನುವಾರ, ಸೋಮವಾರದಂದು ಶ್ರೀ ಹರಿವಾಯು ಗುರುಗಳ ಪ್ರೇರಣಾನುಸಾರ ಶ್ರೀ ಸತ್ಯನಾರಾಯಣ ಪೇಟೆಯ 1ನೇ ಅಡ್ಡರಸ್ತೆಯಲ್ಲಿರುವ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮೂಲ ಮೃತ್ತಿಕ ಬೃಂದಾವನ ಸನ್ನಿಧಾನದಲ್ಲಿ ನೆರವೇರಿಸಲಾಗುತ್ತಿದೆ. ಆ.29ರ ಶನಿವಾರ ಪೂರ್ವಾರಾಧನೆ, 30ರ ಭಾನುವಾರ ಮಧ್ಯಾರಾಧನೆ ಮತ್ತು 31ರ ಸೋಮವಾರ ಉತ್ತರಾರಾಧನೆಯನ್ನು ಅತ್ಯಂತ ವೈಭವ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ.
ಶ್ರೀಹರಿ ಆಜ್ಞೆಯಂತೆ ಶ್ರೀಶಂಕುಕರ್ಣರೇ ಶ್ರೀ ಪ್ರಹ್ಲಾದರಾಜರಾಗಿ, ಶ್ರೀ ಪಾಕ್ಷೀಕರಾಜರಾಗಿ, ಶ್ರೀ ವ್ಯಾಸರಾಜರಾಗಿ ಅವತರಿಸಿ ವೈದಿಕ ಸಿದ್ಧಾಂತ ತತ್ವ ಧರ್ಮಗಳ ಪ್ರಚಾರಕ್ಕಾಗಿ ಲೋಕಮಾನ್ಯ ಗ್ರಂಥಗಳನ್ನು ರಚಿಸಿ ಸತತ ಪವನ ಆವೇಶಯುಕ್ತರಾದ ವಿಭೂತಿಪುರುಷರೇ ಶ್ರೀಶ್ರೀಶ್ರೀರಾಘವೇಂದ್ರತೀರ್ಥ ಶ್ರೀಪಾದಂಗಳವರು. ಈ ಮಹಾ ಮಹಿಮರು ತಮ್ಮನ್ನು ಆಶ್ರಯಿಸಿ ಬಂದ ಎಲ್ಲಾ ಭಕ್ತರ ರೋಗರುಜಿನಗಳನ್ನು ನಾಶಮಾಡಿ ಸಕಲ ಸಂಪತ್ತನ್ನು ನೀಡಿ ಭಕ್ತರ ಹಾಗೂ ಮಾನವ ಜನಾಂಗದ ಕಲ್ಯಾಣ ಮಾಡುತ್ತಾ ಜಗತ್ತಿನ ಶಾಂತಿ ಸ್ಥಾಪನೆಗಾಗಿ ತಮ್ಮ ಅಖಂಡ ಪುಣ್ಯ ರಾಶಿಯನ್ನು ಕಾಮಧೇನು ಕಲ್ಪವೃಕ್ಷವಂತೆ ಧಾರೆಯೆರೆಯುತ್ತಾ ಮಂತ್ರಾಲಯ ಮಹಾಕ್ಷೇತ್ರದಲ್ಲಿ ಸಶರೀರವಾಗಿ ಬೃಂದಾವನ ಪ್ರವೇಶ ಮಾಡಿರುವ ಅಗಮ್ಯ ಮಹಿಮರು.
ಆಗಸ್ಟ್ 26 ರಂದು ಬುಧವಾರ ಋಗ್ವೇದ ನಿತ್ಯ ನೂತನ ಉಪಾಕರ್ಮ, 28ರಂದು ಶುಕ್ರವಾರ ಯಜುರ್ವೇದ ನಿತ್ಯ ನೂತನ ಉಪಾಕರ್ಮ, ಬೆಳಿಗ್ಗೆ 10 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ 6.00 ಗಂಟೆಗೆ ಧ್ವಜಾರೋಹಣ ಗೋಪೂಜಾ, ಪ್ರಾರ್ಥನೋತ್ಸವ, ಶಾಕೋತ್ಸವ, ಧನ-ಧಾನ್ಯಪೂಜಾ, ಶ್ರೇಯಃ ಪ್ರಾರ್ಥನೆ, ಮಹಾಮಂಗಳಾರತಿ. ಆ.31ರಂದು ಸೋಮವಾರ ಉತ್ತರಾರಾಧನೆ ನಿಮಿತ್ತ ಬೆಳಗ್ಗೆ 9.00 ಕ್ಕೆ ಮಹಾ ರಥೋತ್ಸವ, ಸೆ. 01ರಂದು ಮಂಗಳವಾರ ಸಾಮಾಹಿಕ ಶ್ರೀ ಪವಮಾನ ಹೋಮ ಬೆಳಗ್ಗೆ 9.00 ರಿಂದ 11.30 ರ ವರೆಗೆ ಜರುಗಲಿದೆ.
ಈ ದಿನಗಳಲ್ಲಿ ಸದ್ಭಕ್ತರು ಶ್ರೀ ಗುರುರಾಯರ ಸೇವೆಮಾಡಿ ತೀರ್ಥ-ಪ್ರಸಾದ, ಫಲಮಂತ್ರಾಕ್ಷತೆಗಳನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಗೌರವ ವಿಚಾರಣಾಕರ್ತರು, ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್