
ಬೆಂಗಳೂರು, 27 ಆಗಸ್ಟ್ (ಹಿ.ಸ.):
ಆ್ಯಂಕರ್:ಕೇಂದ್ರ ಸರ್ಕಾರದ ಬರ ಘೋಷಣೆ ಮಾನದಂಡಗಳನ್ವಯ ಸಮಗ್ರ ಪರಿಶೀಲನೆ ನಡೆಸಿರುವ ರಾಜ್ಯ ಸರ್ಕಾರ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಈ ಪೈಕಿ 89 ತಾಲೂಕುಗಳು ತೀವ್ರ ಬರಪೀಡಿತ ಹಾಗೂ 12 ತಾಲೂಕುಗಳು ಸಾಧಾರಣ ಬರಪೀಡಿತ ಎಂದು ವರ್ಗೀಕರಿಸಲಾಗಿದೆ.
ಬರ ಘೋಷಣೆ ತಕ್ಷಣದಿಂದ ಜಾರಿಗೆ ಬರಲಿದ್ದು, ರಾಜ್ಯ ವಿಪತ್ತು ನಿರ್ವಹಣಾ ನಿಧಿ ಮಾರ್ಗಸೂಚಿಯಂತೆ ಪರಿಹಾರ ಹಾಗೂ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಬೆಳೆ ನಷ್ಟದ ಸಮೀಕ್ಷೆ ನಡೆಸಲಿದೆ.
ಖಾರಿಫ್ ಹಂಗಾಮು ಮುಗಿಯುವವರೆಗೆ ಪ್ರತಿ ವಾರ ಬರ ಪರಿಸ್ಥಿತಿ ಪರಿಶೀಲಿಸಲಾಗುವುದು. ಮಾನದಂಡಗಳಿಗೆ ಒಳಪಡುವ ಹೆಚ್ಚುವರಿ ತಾಲೂಕುಗಳನ್ನೂ ಮುಂದಿನ ದಿನಗಳಲ್ಲಿ ಬರಪೀಡಿತ ಎಂದು ಘೋಷಿಸಲಾಗುವುದು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ರೈತರ ಹಿತ ರಕ್ಷಣೆ, ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಒದಗಿಸುವುದು ಸೇರಿದಂತೆ ಬರಪೀಡಿತ ಜನರಿಗೆ ಅಗತ್ಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.