
ಕೋಲಾರ, ೨೫ ಆಗಸ್ಟ್ (ಹಿ.ಸ.)
ಆ್ಯಂಕರ್: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕ ಕೊರತೆ ನೀಗಿಸಲು ಸ್ಯಾಮಸಂಗ್ ಕಂಪನಿ ಸದಾ ನೆರವಿಗೆ ಸಿದ್ದವಿದ್ದು, ಮಕ್ಕಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಂಪನಿಯ ಸಿಎಸ್ಆರ್ ಘಟಕದ ಅಧಿಕಾರಿಗಳಾದ ಅಂಜಲಿ ತಿಳಿಸಿದರು.
ನಗರದ ಪಿಸಿ ಬಡಾವಣೆಯ ಸರ್ಕಾರಿ ಶಾಲೆ ಆವರಣದಲ್ಲಿ ಸ್ಯಾಮಸಂಗ್ ಆರ್ ಅಂಡ್ ಡಿ ಇನ್ಸಿಟ್ಯೂಟ್ ಇಂಡಿಯಾ ಬೆಂಗಳೂರು ಇವರ ವತಿಯಿಂದ ತಾಲ್ಲೂಕಿನ ೫೫ ಸರ್ಕಾರಿ ಶಾಲೆಗಳಿಗೆ ೧೪೪ ಸ್ಮಾರ್ಟ್ ಬೋರ್ಡ್ಗಳನ್ನು ವಿತರಿಸಿ ಮಾತನಾಡಿದರು.
ದಾನಿಗಳು ನೀಡುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ, ಪ್ರತಿ ಮಗುವಿಗೂ ಸೌಲಭ್ಯ ತಲುಪಿಸಿ ಎಂದ ಅವರು,ಸ್ಯಾಮಸಂಗ್ ಈಗಾಗಲೇ ಜಿಲ್ಲೆಯಲ್ಲಿ ಸಿಎಸ್ಆರ್ ನಿಧಿಯ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ, ಬ್ಯಾಗ್, ಸಮವಸ್ತç, ನೂತನ ಕಟ್ಟಡಗಳ ನಿರ್ಮಾಣ ಮಾಡಿದೆ.ಇಂದು ಸಾಧಕರೆಲ್ಲಾ ನಿಮ್ಮ ಹಾಗೆ ಸರ್ಕಾರಿ ಶಾಲೆಯಲ್ಲಿ ಓದಿ ನಂತರ ಇಂಜಿನಿಯರ್, ಡಾಕ್ಟರ್,ಶಿಕ್ಷಕರಾಗಿದ್ದಾರೆ. ಮುಂದೆ ನಿಮ್ಮ ಕಲಿಕೆಯಲ್ಲಿ ಓದುತ್ತಿರುವ ಮಕ್ಕಳು ಸಹಾ ಈ ಸಾಧನೆ ಮಾಡಬೇಕು ಎಂಬ ಬದ್ದತೆಯೊಂದಿಗೆ ಶ್ರಮಿಸಿ ಎಂದು ಶಿಕ್ಷಕರಿಗೆ ಕರೆ ನೀಡಿದರು.
ಕಷ್ಟಪಟ್ಟು ಓದಿ ಸಾಧನೆಗೆ ಯಾವುದೂ ಅಡ್ಡಿಯಲ್ಲ ಎಂದ ಅವರು, ವಿದ್ಯೆ ಸಾಧಕನ ಸ್ವತ್ತು ಎಂಬುದನ್ನು ಮರೆಯದಿರಿ. ಸ್ಯಾಮಸಂಗ್ ಕಂಪನಿ ಸುಮಾರು ಇಪ್ಪತ್ತು ವರ್ಷಗಳಿಂದ ಒಂದಲ್ಲಾ ಒಂದು ರೀತಿ ಜಿಲ್ಲೆಯ ಮಕ್ಕಳಿಗೆ ಸಹಾಯ ಮಾಡುತ್ತ ಬಂದಿದೆ, ಚೆನ್ನಾಗಿ ಓದಿ ಗುರಿ ಮುಟ್ಟಿ ನಿಮ್ಮ ತಂದೆ ತಾಯಿಗೆ ಕೀರ್ತಿ ತನ್ನಿ ಮುಂದೆ ಸಮಾಜಕ್ಕೆ ನೀವು ಸಹಾಯ ಮಾಡಿ. ನನಗೆ ತಳಮಟ್ಟದಿಂದ ನಿಮ್ಮ ಸಮಸ್ಯೆಗಳು ಗೊತ್ತಿವೆ ಅದಕ್ಕೆ ಬೇಕಾದ ಪೂರಕ ಸಾಮಗ್ರಿಗಳನ್ನು ಕೊಡಲು ಅನೇಕ ದಾನಿಗಳ ನೆರವು ಯಾಚಿಸಿ ತಂದಿದ್ದೇವೆ, ಸರ್ಕಾರಿ ಶಾಲೆ ಎಂಬ ಕೀಳಿರಿಮೆ ಬೇಡ ಇಲ್ಲಿ ಓದಿದವರೇ ಸಾಧಕರಾಗಿ ದೇಶವಾಳುತ್ತಿದ್ದಾರೆ ಎಂದರು.
ಕೋಲಾರ ತಾಲ್ಲೂಕು ಕ್ಷೇತ್ರ ಸಮನ್ವಯಾಧಿಕಾರಿ ರಾಧಮ್ಮ ಮಾತನಾಡಿ, ಶಿಕ್ಷಕ ಗೆಳೆಯರ ಬಳಗದಿಂದ ವಿವಿಧ ಕಂಪನಿಗಳ ನೆರವಿನಿಂದ ಈಗಾಗಲೇ ಲಕ್ಷಾಂತರ ಸಂಖ್ಯೆಯ ನೋಟ್ ಪುಸ್ತಕ, ಬ್ಯಾಗ್ ಮತ್ತಿತರ ಸೌಲಭ್ಯ ಒದಗಿಸಲಾಗಿದೆ ಎಂದ ಅವರು, ಮತ್ತಷ್ಟು ನೆರವು ಒದಗಿಸಲು ಪ್ರಯತ್ನವೂ ಸಾಗಿದ್ದು, ಸ್ಯಾಮಸಂಗ್ ಕಂಪನಿ ಹಾಗೂ ಶಿಕ್ಷಕ ಗೆಳೆಯರ ಬಳಗದ ಕಾರ್ಯವನ್ನು ಶ್ಲಾಘಿಸಿದರು.
ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ,ದಾನಿಗಳು ನೀಡುವ ನೆರವನ್ನು ಶಾಲೆಗಳಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಮತ್ತಷ್ಟು ನೆರವು ಹರಿದು ಬರಲಿದೆ ಎಂದು ಸುಳಿವು ನೀಡಿದ ಅವರು,ಶಿಕ್ಷಕರು ಬಳಗದ ಆಶಯಗಳಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಶಿಕ್ಷಕ ಗೆಳೆಯರ ಬಳಗದ ಉಪಾಧ್ಯಕ್ಷ ವೀರಣ್ಣಗೌಡ ಮಾತನಾಡಿ ಸ್ಯಾಮ್ಸಂಗ್ ಇಂಡಿಯಾ ಇಲ್ಲಿಯ ತನಕ ಶಾಲೆಗಳಿಗೆ ಕೊಟ್ಟಿರುವ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿದರು. ದಾನಿಗಳು ನೀಡಿರುವ ಈ ಸೌಲಭ್ಯ ದುರುಪಯೋಗವಾಗದಂತೆ ಎಚ್ಚರವಹಿಸಿಲು ಮನವಿ ಮಾಡಿದ ಅವರು, ನೀಡಿದ ಸೌಲಭ್ಯ ನೇರವಾಗಿ ವಿದ್ಯಾರ್ಥಿಗಳ ಕೈ ಸೇರಬೇಕು. ಮುಂದೆ ಮತ್ತಷ್ಟು ನೆರವು ಹರಿದು ಬರಲಿದೆ ಎಂದ ಅವರು, ಶಿಕ್ಷಕರು ವಿತರಣೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಿ ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಸ್ಯಾಮಸಂಗ್ ಕಂಪನಿಯ ಸಾಜಲ್, ಮುಖ್ಯಶಿಕ್ಷಕ ರವಿಚಂದ್ರ, ಸಿಆರ್ಪಿಗಳಾದ ಚಂದ್ರಶೇಖರ್, ಗಂಗಾಧರ್, ಮಂಜುನಾಥ್ ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್