ಆ.೩೧ರಂದು ನೌಕಾಪಡೆಗೆ ನಿಪುಣ್ ಡೈವಿಂಗ್ ಸಪೋರ್ಟ್ ನೌಕೆ ಸೇರ್ಪಡೆ
ಭಾರತೀಯ ನೌಕಾಪಡೆಗೆ ಬಲ
ನಿಪುಣ್ ನೌಕೆಯ ಚಿತ್ರ


ನವದೆಹಲಿ, 25 ಆಗಸ್ಟ್ (ಹಿ.ಸ.):

ಆ್ಯಂಕರ್:

ಭಾರತೀಯ ನೌಕಾಪಡೆಯ ಕಡಲ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ‘ನಿಸ್ತಾರ್’ ವರ್ಗದ ಎರಡನೇ ಅತ್ಯಾಧುನಿಕ ಡೈವಿಂಗ್ ಸಪೋರ್ಟ್ ವೆಸೆಲ್ (ಡಿಎಸ್‌ವಿ) ‘ನಿಪುಣ್’ ನೌಕೆ ಆಗಸ್ಟ್ 31ರಂದು ಮುಂಬೈನ ನೇವಲ್ ಡಾಕ್‌ಯಾರ್ಡ್‌ನಲ್ಲಿ ಭಾರತೀಯ ನೌಕಾಪಡೆಯ ಪಾಳೆಯಕ್ಕೆ ಸೇರ್ಪಡೆಯಾಗಲಿದೆ.

ವಿಶಾಖಪಟ್ಟಣದ ಪ್ರತಿಷ್ಠಿತ ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಬಳಸಿ ವಿನ್ಯಾಸಗೊಳಿಸಿ ನಿರ್ಮಿಸಲಾಗಿರುವ ‘ನಿಪುಣ್’ ನೌಕೆಯ ಸೇರ್ಪಡೆಯು ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತದತ್ತ ಮಹತ್ವದ ಹೆಜ್ಜೆಯಾಗಿದೆ. ಅಗತ್ಯವಿರುವ ಎಲ್ಲ ಕಠಿಣ ಪರೀಕ್ಷೆಗಳು ಹಾಗೂ ಸಜ್ಜುಗೊಳಿಸುವಿಕೆ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ, ಜುಲೈ 30ರಂದು ನೌಕೆಯನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿತ್ತು.

ಅತ್ಯಾಧುನಿಕ ವ್ಯವಸ್ಥೆಗಳು

‘ನಿಪುಣ್’ ನೌಕೆಯಲ್ಲಿ ಅತ್ಯಾಧುನಿಕ ಮುಳುಗು ವ್ಯವಸ್ಥೆಗಳು, ಸಮುದ್ರದ ಅಡಿಯಲ್ಲಿ ತ್ವರಿತವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹಾಗೂ ತುರ್ತು ವೈದ್ಯಕೀಯ ನೆರವು ಘಟಕಗಳನ್ನು ಅಳವಡಿಸಲಾಗಿದೆ. ಇದರಿಂದ ಆಳ ಸಮುದ್ರದಲ್ಲಿ ಕಠಿಣ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುವ ಮುಳುಗು ತಜ್ಞರಿಗೆ ನಿರಂತರ ಬೆಂಬಲ ದೊರೆಯಲಿದೆ.

ಜಲಾಂತರ್ಗಾಮಿ ರಕ್ಷಣೆಗೆ ನೆರವು

ಜಲಾಂತರ್ಗಾಮಿ ಅಪಘಾತಗಳಂತಹ ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ‘ನಿಪುಣ್’ ಪ್ರಮುಖ ಪಾತ್ರ ವಹಿಸಲಿದೆ. ಸಮುದ್ರದ ಆಳದಲ್ಲಿ ಮುಳುಗು ಕಾರ್ಯಾಚರಣೆ ನಡೆಸುವ ತಜ್ಞರಿಗೆ ಅಗತ್ಯ ಸೌಲಭ್ಯ ಮತ್ತು ತಾಂತ್ರಿಕ ನೆರವು ಒದಗಿಸುವ ಸಾಮರ್ಥ್ಯವನ್ನು ನೌಕೆ ಹೊಂದಿದೆ.

ನಿಖರ ಕಾರ್ಯಾಚರಣೆಗೆ ತಂತ್ರಜ್ಞಾನ

ನೌಕೆಯಲ್ಲಿ ನ್ಯಾವಿಗೇಷನ್, ವೇದಿಕೆ ನಿರ್ವಹಣೆ ಹಾಗೂ ನಿಖರ ಸ್ಥಾನ ನಿರ್ಣಯಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದರಿಂದ ಸಮುದ್ರದ ಆಳದಲ್ಲಿ ನಡೆಯುವ ಸಂಕೀರ್ಣ ಕಾರ್ಯಾಚರಣೆಗಳನ್ನು ಹೆಚ್ಚಿನ ನಿಖರತೆಯಿಂದ ನಿರ್ವಹಿಸಲು ಸಾಧ್ಯವಾಗಲಿದೆ.

ಧೈರ್ಯ, ವೃತ್ತಿಪರತೆಗೆ ಸಂಕೇತ

ನೌಕೆಯ ಕುರಿತು ಮಾತನಾಡಿದ ನೌಕಾಪಡೆಯ ಕ್ಯಾಪ್ಟನ್ ವಿವೇಕ್ ಮಧ್ವಾಲ್, ‘ನಿಪುಣ್’ ಮೇಲಿನ ಲಾಂಛನವು ಆಳ ಸಮುದ್ರದಲ್ಲಿ ಮುಳುಗು ಕಾರ್ಯಾಚರಣೆ ನಡೆಸುವವರ ಧೈರ್ಯ ಮತ್ತು ವೃತ್ತಿಪರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ. ಆಧುನಿಕ ಮುಳುಗು ಹೆಲ್ಮೆಟ್ ಹಾಗೂ ತಿಮಿಂಗಿಲದ ಚಿತ್ರವು ಮುಳುಗು ತಜ್ಞರನ್ನು ಸಮುದ್ರದ ಆಳಕ್ಕೆ ಸುರಕ್ಷಿತವಾಗಿ ಕರೆದೊಯ್ದು, ಯಶಸ್ವಿಯಾಗಿ ವಾಪಸ್ ಕರೆತರುವ ನೌಕೆಯ ಬದ್ಧತೆಯನ್ನು ಸಾರುತ್ತದೆ ಎಂದು ಅವರು ಹೇಳಿದ್ದಾರೆ.

ಒಟ್ಟಾರೆ, ‘ನಿಪುಣ್’ ಸೇರ್ಪಡೆಯಿಂದ ಭಾರತೀಯ ನೌಕಾಪಡೆಯ ಆಳ ಸಮುದ್ರದ ಮುಳುಗು ಹಾಗೂ ನೀರೊಳಗಿನ ರಕ್ಷಣಾ ಸಾಮರ್ಥ್ಯ ಮತ್ತಷ್ಟು ಬಲಗೊಳ್ಳಲಿದೆ. ಜೊತೆಗೆ, ಸ್ವದೇಶಿ ಹಡಗು ನಿರ್ಮಾಣ ಕ್ಷೇತ್ರದ ತಾಂತ್ರಿಕ ಪ್ರಗತಿ ಮತ್ತು ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಆತ್ಮನಿರ್ಭರತೆಯನ್ನು ಇದು ಮತ್ತಷ್ಟು ಬಿಂಬಿಸಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande