
ಬಳ್ಳಾರಿ, 25 ಆಗಸ್ಟ್ (ಹಿ.ಸ.)
ಆ್ಯಂಕರ್ : ಪ್ರವಾದಿ ಮೊಹಮ್ಮದ್ ಅವರ ಜನ್ಮದಿನ ಪ್ರಯುಕ್ತ ಕ್ರಾಂತಿ ಜ್ಯೋತಿ ಸೀರತ್ ಅಭಿಯಾನವನ್ನು ಆಗಸ್ಟ್ 26ರ ಗುರುವಾರದಿಂಧ ಸೆಪ್ಟಂಬರ್ 13ರವರೆಗೆ ಜಮಾತೆ ಇಸ್ಲಾಂ ಹಿಂದ್ ಬಳ್ಳಾರಿ ಹಮ್ಮಿಕೊಂಡಿದ್ದು, ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಗುರುವಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಮಾತೆ ಇಸ್ಲಾಂ ಹಿಂದ್ ಬಳ್ಳಾರಿ ಇದರ ಮಾಜಿ ಅಧ್ಯಕ್ಷ ಸೈಯದ್ ನಿಜಾಮುದ್ದೀನ್ ಅವರು ತಿಳಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮಾತೆ ಇಸ್ಲಾಂ ಹಿಂದ್ ವತಿಯಿಂದ ಹಮ್ಮಿಕೊಳ್ಳಲಾದ ಈ ಅಭಿಯಾನದಲ್ಲಿ `ಕ್ರಾಂತಿ ಜ್ಯೋತಿ ಪ್ರವಾದಿ ಮೊಹಮ್ಮದ್' ಶೀರ್ಷಿಕೆ ಅಡಿಯಲ್ಲಿ ವಿಚಾರಗೋಷ್ಠಿಗಳು, ಸಾರ್ವಜನಿಕ ಸಮಾವೇಶಗಳು, ಸಂವಾದಗಳು, ಚರ್ಚಾ ಗೋಷ್ಠಿಗಳು, ಸೀರತ್ ಪ್ರವಚನ, ಪ್ರದರ್ಶನ, ಸಮಾಜ ಸೇವಾ ಚಟುವಟಿಕೆಗಳು, ಸೌಹಾರ್ದ ಸಂದೇಶ ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರವಾದಿ ಮಹಮ್ಮದ್ ಅವರ ಕುರಿತು ವಿಜಯನಗರ ಮತ್ತು ಬಳ್ಳಾರಿ ಜಿಲ್ಲಾ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆಯನ್ನು ನಡೆಸಲಾಗುವುದು. ಈ ಸ್ಪರ್ಧೆಯಲ್ಲಿ 16 ವರ್ಷ ಮೇಲ್ಪಟ್ಟ ಎಲ್ಲಾ ಜಾತಿ ಧರ್ಮದವರು ಭಾಗವಹಿಸಬಹುದು. ಈ ಪ್ರಬಂಧ ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 15 ಸಾವಿರ, ಎರಡನೇ ಬಹುಮಾನವಾಗಿ ಹತ್ತು ಸಾವಿರ, ಮೂರನೇ ಬಹುಮಾನವಾಗಿ ಐದು ಸಾವಿರ ರೂಪಾಯಿಗಳನ್ನು ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು.
ಅಲ್ಲದೇ, ತಲಾ ಎರಡು ಸಾವಿರ ರೂಪಾಯಿಗಳ ಐದು ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು ಎಂದರು.
ಆಸಕ್ತರು, ಪ್ರಬಂಧಗಳನ್ನು ಬರೆದು ಹಸ್ತಾಕ್ಷರ ಪ್ರತಿಯನ್ನು ಸಂಗಮ್ ಸರ್ಕಲ್ ನಲ್ಲಿರುವ ಸುರಭಿ ಜೆರಾಕ್ಸ್ ಅಂಗಡಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸೆಪ್ಟಂಬರ್ ಮೂವತ್ತರ ಒಳಗೆ ಕಳಿಸಬಹುದು ಎಂದರು.
ಸಾಹಿತಿ ಯೋಗೇಶ್ ಮಾಸ್ಟರ್ ಅವರು ಬರೆದ ಮಾನವ ಮನಸ್ಸಿನ ಕೃಷಿಕ ಮನದೊಡೆಯ ಪ್ರವಾದಿ ಮಹಮ್ಮದ್ ಎಂಬ ಪುಸ್ತಕ ಹಾಗೂ ವಾರ್ತಾ ಭಾರತಿ ದಿನಪತ್ರಿಕೆ ಸಂಪಾದಕರಾದ ಅಬೂ ಸಲಾಂ ಕುತ್ತಿಗೆಯವರು ಬರೆದ ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮಹಮ್ಮದ್ ಎಂಬ ಕೃತಿಗಳನ್ನು ಬಿಡುಗಡೆಗೊಳಿಸಿದರು.
ಕಾರ್ಯದರ್ಶಿ ಸೈಯದ್ ಅಮ್ಜದ್ ಹುಸೇನ್ ಅವರು, ಸರ್ವಧರ್ಮ ಸಹಬಾಳ್ವೆ ಸಂಕೇತವಾಗಿ ಎಲ್ಲಾ ಧರ್ಮದ ಜನರು ಸುಖ ಶಾಂತಿಯಿಂದ ಸಹಬಾಳ್ವೆ ನಡೆಸಲು ಅನುಕೂಲವಾಗುವಂತೆ ಹಮ್ಮಿಕೊಳ್ಳಲಾಗಿದೆ ಎಂದರು.
ಸೈಯದ್ ನಾಸಿರ್ ಅಲಿ, ಆರ್ ಲತಿಫ್ ಅಹಮದ್, ಅಬ್ದುಲ್ ಖಾಲಿದ್ ಸೈಯದ್ ಅಮ್ಜದ್ ಹುಸೇನ್ ನಯಾಜ್ ಬೆಳಗಾಮಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್