

ನಾಗ್ಪುರ, 25 ಆಗಸ್ಟ್ (ಹಿ.ಸ.):
ಆ್ಯಂಕರ್:‘ನೇತ್ರದಾನ’ ಎಂಬ ಪದದ ಬದಲಾಗಿ ‘ನೇತ್ರಸಂಕಲ್ಪ’ ಅಥವಾ ಪರ್ಯಾಯ ಪದ ಬಳಕೆಯ ಕುರಿತು ಚಿಂತನೆ ನಡೆಸಬೇಕು. ಪ್ರಸ್ತುತ ನಡೆಯುತ್ತಿರುವ ‘ನೇತ್ರದಾನ ಪಾಕ್ಷಿಕ’ವನ್ನು ‘ನೇತ್ರದಾನ ಸಂಕಲ್ಪ ಪಾಕ್ಷಿಕ’ ಎಂದು ಕರೆಯುವುದು ಹೆಚ್ಚು ಸೂಕ್ತ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ಭಯ್ಯಾಜಿ ಜೋಶಿ ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರದ ನಾಗಪುರದ ಮಾಧವ ನೇತ್ರಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನು ಸ್ವತಃ ಸಂಪಾದಿಸಿದ ಹಣ, ಗಳಿಸಿದ ಜ್ಞಾನ ಅಥವಾ ತನ್ನ ಸ್ವಂತ ವಸ್ತುಗಳನ್ನು ಇತರರಿಗೆ ನೀಡುವುದನ್ನು ದಾನ ಎಂದು ಕರೆಯಬಹುದು. ಆದರೆ ಕಣ್ಣುಗಳು ಅಥವಾ ದೇಹದ ಅಂಗಗಳು ದೇವರು ನಮಗೆ ನೀಡಿರುವ ಅಮೂಲ್ಯ ಕೊಡುಗೆಗಳಾಗಿವೆ. ಹೀಗಾಗಿ ವ್ಯಕ್ತಿಯ ಮರಣದ ಬಳಿಕ ಆತನ ಕಣ್ಣುಗಳು ಅಥವಾ ಅಂಗಗಳನ್ನು ಅಗತ್ಯವಿರುವವರಿಗೆ ನೀಡುವ ಪ್ರಕ್ರಿಯೆಯನ್ನು ‘ದಾನ’ ಎಂದು ಕರೆಯುವುದು ಎಷ್ಟು ಸೂಕ್ತ ಎಂಬುದರ ಕುರಿತು ಚಿಂತನೆ ಅಗತ್ಯ ಎಂದು ಹೇಳಿದರು.
ಭಾಷೆಯ ಬಳಕೆಯಲ್ಲಿ ಕೆಲವೊಮ್ಮೆ ತಪ್ಪು ಪದಗಳು ರೂಢಿಗೆ ಬರುತ್ತವೆ. ದೈಹಿಕ ನ್ಯೂನತೆ ಹೊಂದಿರುವ ವ್ಯಕ್ತಿಯನ್ನು ‘ಪಂಗು’ ಎಂದು ಕರೆಯಬೇಕಾದ ಸಂದರ್ಭದಲ್ಲಿ ‘ಅಪಂಗ’ ಎಂಬ ಪದ ಬಳಕೆಯಲ್ಲಿದೆ. ಸಂತ ತುಕಾರಾಮ ಮಹಾರಾಜರ ಅಭಂಗದಲ್ಲಿಯೂ ‘ಜ್ಯಾಸಿ ಅಪಂಗಿತಾ ನಾಹಿ, ತ್ಯಾಸಿ ಧರಿ ಜೋ ಹೃದಯೀಂ’ ಎಂಬ ಉಲ್ಲೇಖವಿದೆ. ಆದರೆ ಪ್ರಸ್ತುತ ದೈಹಿಕ ನ್ಯೂನತೆ ಹೊಂದಿರುವವರನ್ನು ‘ಅಪಂಗ’ ಎಂದು ಕರೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯವಾಗಿ ‘ದಿವ್ಯಾಂಗ’ ಎಂಬ ಪದ ಬಳಕೆಗೆ ಬಂದಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದರು.
ಅದೇ ರೀತಿ ‘ನೇತ್ರದಾನ’ ಎಂಬ ಪದದ ಬಗ್ಗೆಯೂ ಚಿಂತನೆ ನಡೆಸುವ ಅಗತ್ಯವಿದೆ. ವ್ಯಕ್ತಿಯು ಸ್ವತಃ ಸಂಪಾದಿಸಿದ ವಸ್ತು, ಹಣ ಅಥವಾ ಜ್ಞಾನವನ್ನು ಇತರರಿಗೆ ನೀಡುವುದನ್ನು ದಾನ ಎಂದು ಕರೆಯುವುದು ಸೂಕ್ತ. ಆದರೆ ಕಣ್ಣುಗಳು ಅಥವಾ ದೇಹದ ಅಂಗಗಳನ್ನು ನಾವು ಸ್ವತಃ ಸಂಪಾದಿಸಿಲ್ಲ. ಅವು ಜನ್ಮದಿಂದಲೇ ದೇವರು ನೀಡಿರುವ ಕೊಡುಗೆಗಳು. ಆದ್ದರಿಂದ ವ್ಯಕ್ತಿಯ ಮರಣದ ಬಳಿಕ ಆತನ ಪೂರ್ವ ಇಚ್ಛೆಯಂತೆ ಕುಟುಂಬದವರು ಕಣ್ಣು ಅಥವಾ ಅಂಗಗಳನ್ನು ಅಗತ್ಯವಿರುವವರಿಗೆ ನೀಡಿದರೆ ಅದನ್ನು ‘ದಾನ’ ಎಂದು ಕರೆಯುವುದು ಎಷ್ಟು ಸಮಂಜಸ ಎಂಬುದು ವಿಚಾರಣೀಯ ಎಂದು ಭಯ್ಯಾಜಿ ಜೋಶಿ ತಿಳಿಸಿದರು.
ನೇತ್ರದಾನದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಅದರ ಹಿಂದಿನ ಪರಿಕಲ್ಪನೆಗೆ ಸೂಕ್ತ ಪದ ಬಳಕೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ‘ನೇತ್ರದಾನ’ಕ್ಕೆ ಪರ್ಯಾಯ ಪದ ಹುಡುಕುವ ಅಗತ್ಯವಿದೆ. ನೇತ್ರದಾನ ಪಾಕ್ಷಿಕದ ಅವಧಿಯಲ್ಲಿ ವಾಸ್ತವವಾಗಿ ನೇತ್ರದಾನ ನಡೆಯುವುದಿಲ್ಲ; ಬದಲಾಗಿ ನಾಗರಿಕರು ನೇತ್ರದಾನ ಮಾಡುವ ಸಂಕಲ್ಪ ಕೈಗೊಳ್ಳುತ್ತಾರೆ. ಹೀಗಾಗಿ ‘ನೇತ್ರದಾನ ಸಂಕಲ್ಪ ಪಾಕ್ಷಿಕ’ ಎನ್ನುವುದು ಹೆಚ್ಚು ಸೂಕ್ತ ಎಂದು ಅವರು ಹೇಳಿದರು.
ಕಾರಂಜಾದಲ್ಲಿ ಅತ್ಯಾಧುನಿಕ ನೇತ್ರ ಸೇವೆ
ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಲಾಂಜಿ ತಾಲ್ಲೂಕಿನ ಕಾರಂಜಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರನೇ ಸರಸಂಘಚಾಲಕ ಬಾಲಾಸಾಹೇಬ ದೇವರಸ್ ಅವರ ಪಿತೃಗ್ರಾಮವಾಗಿದೆ. ಇಲ್ಲಿ ಪ್ರಸ್ತುತ ಬಾಲಾಸಾಹೇಬ ಭಾವುರಾವ್ ದೇವರಸ್ ಸೇವಾ ನ್ಯಾಸ ಕಾರ್ಯನಿರ್ವಹಿಸುತ್ತಿದೆ.
ಪ್ರದೇಶದಲ್ಲಿ ವಿವಿಧ ಸೌಲಭ್ಯಗಳಿದ್ದರೂ ಕಣ್ಣಿನ ಕಾಯಿಲೆಗಳ ತಪಾಸಣೆ ಮತ್ತು ಚಿಕಿತ್ಸೆಗೆ ಅಗತ್ಯ ಸೌಲಭ್ಯಗಳ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಮಾಧವ ನೇತ್ರಾಲಯವು ಕಾರಂಜಾ ಹಾಗೂ ಸುತ್ತಮುತ್ತಲಿನ ಜನರಿಗೆ ಅತ್ಯಾಧುನಿಕ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯ ಒದಗಿಸಲು ಮುಂದಾಗಿದೆ.
ಈ ಉದ್ದೇಶಕ್ಕಾಗಿ ಮಾಧವ ನೇತ್ರಾಲಯ ಮತ್ತು ಬಾಲಾಸಾಹೇಬ ಭಾವುರಾವ್ ದೇವರಸ್ ಸೇವಾ ನ್ಯಾಸದ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಮಾಧವ ನೇತ್ರಾಲಯದ ಪರವಾಗಿ ಅವಿನಾಶ ಅಗ್ನಿಹೋತ್ರಿ ಹಾಗೂ ಬಾಲಾಸಾಹೇಬ ಭಾವುರಾವ್ ದೇವರಸ್ ಸೇವಾ ನ್ಯಾಸದ ಪರವಾಗಿ ಅರವಿಂದ್ ಮಾರ್ಡೀಕರ್ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಯೋಜನೆಯ ಮೂಲಕ ಕಾರಂಜಾ ಹಾಗೂ ಸುತ್ತಮುತ್ತಲಿನ ನಾಗರಿಕರಿಗೆ ಸ್ಥಳೀಯವಾಗಿಯೇ ಅತ್ಯಾಧುನಿಕ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಸೇವೆಗಳು ಲಭ್ಯವಾಗಲಿವೆ.
ಕಾರ್ಯಕ್ರಮದಲ್ಲಿ ನಾಗಪುರ ಏಮ್ಸ್ ನಿರ್ದೇಶಕ ಡಾ. ಪ್ರಶಾಂತ್ ಜೋಶಿ, ಪಿಕ್ಸ್ ಟ್ರಾನ್ಸ್‌ಮಿಷನ್ ಲಿಮಿಟೆಡ್ ನಿರ್ದೇಶಕ ಜೋ. ಪಾಲ್, ಮಾಧವ ನೇತ್ರಾಲಯದ ಉಪಾಧ್ಯಕ್ಷ ನಿಖಿಲ್ ಮುಂಡಲೆ, ಕಾರ್ಯದರ್ಶಿ ಅವಿನಾಶ ಅಗ್ನಿಹೋತ್ರಿ, ಮೇಜರ್ ಬಾಮ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
----------
ಹಿಂದೂಸ್ತಾನ್ ಸಮಾಚಾರ್ / Rakesh.M.B.