
ನವದೆಹಲಿ, 25 ಆಗಸ್ಟ್ (ಹಿ.ಸ.):
ಆ್ಯಂಕರ್:
ಈರುಳ್ಳಿ ಬೆಲೆ ಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶದಿಂದ ನಾಸಿಕ್‌ನಿಂದ ಐದು ಪ್ರಮುಖ ನಗರಗಳಿಗೆ 800 ಮೆಟ್ರಿಕ್ ಟನ್ ಈರುಳ್ಳಿಯನ್ನು ‘ಕಂದಾ ಎಕ್ಸ್‌ಪ್ರೆಸ್’ ವಿಶೇಷ ರೈಲುಗಳ ಮೂಲಕ ಪೂರೈಸಲಾಗುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಆರಂಭಿಕವಾಗಿ ಚೆನ್ನೈ, ಮಧುರೈ, ದೆಹಲಿ, ಎರ್ನಾಕುಲಂ ಹಾಗೂ ಗುವಾಹಟಿ ನಗರಗಳಿಗೆ ಕಂದಾ ಎಕ್ಸ್‌ಪ್ರೆಸ್ ರೈಲುಗಳ ಮೂಲಕ ಈರುಳ್ಳಿ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಮಾರುಕಟ್ಟೆಯ ಬೇಡಿಕೆ ಹಾಗೂ ಅಗತ್ಯಕ್ಕೆ ಅನುಗುಣವಾಗಿ ದೇಶದ ಇತರ ನಗರಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ಕೆ.ಜಿ.ಗೆ ₹35ರ ದರದಲ್ಲಿ ಈರುಳ್ಳಿ
ಕೇಂದ್ರ ಸರ್ಕಾರದ ಬಫರ್ ದಾಸ್ತಾನಿನಲ್ಲಿರುವ ಈರುಳ್ಳಿಯನ್ನು ಕೆ.ಜಿ.ಗೆ ₹35ರ ದರದಲ್ಲಿ ಗ್ರಾಹಕರಿಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ, ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಹಾಗೂ ಕೇಂದ್ರೀಯ ಭಂಡಾರ್ ಮೂಲಕ ಈರುಳ್ಳಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ನಾಸಿಕ್‌ನಿಂದ ಐದು ಪ್ರಮುಖ ನಗರಗಳಿಗೆ 800 ಮೆಟ್ರಿಕ್ ಟನ್ ಈರುಳ್ಳಿಯನ್ನು ‘ಕಂದಾ ಎಕ್ಸ್‌ಪ್ರೆಸ್’ ವಿಶೇಷ ರೈಲುಗಳ ಮೂಲಕ ಸಾಗಿಸಲಾಗುತ್ತಿದೆ. ಈ ರೈಲು ಸುಮಾರು 40 ಟ್ರಕ್‌ಗಳಿಗೆ ಸಮನಾದ ಸರಕು ಸಾಗಿಸುವ ಸಾಮರ್ಥ್ಯ ಹೊಂದಿದ್ದು, ಕಡಿಮೆ ಅವಧಿಯಲ್ಲಿ ದೊಡ್ಡ ಪ್ರಮಾಣದ ಈರುಳ್ಳಿಯನ್ನು ಪ್ರಮುಖ ನಗರಗಳ ಮಾರುಕಟ್ಟೆಗಳಿಗೆ ತಲುಪಿಸಲು ನೆರವಾಗಲಿದೆ.
ಪೂರೈಕೆ ಹೆಚ್ಚಿಸಿ ಬೆಲೆ ಸ್ಥಿರತೆಗೆ ಕ್ರಮ
ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಮತ್ತು ಲಭ್ಯತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಈರುಳ್ಳಿ ಬೆಲೆಯಲ್ಲಿ ಏರಿಳಿತ ಉಂಟಾಗದಂತೆ ಹಾಗೂ ಗ್ರಾಹಕರಿಗೆ ಸಮರ್ಪಕ ಪ್ರಮಾಣದಲ್ಲಿ ಈರುಳ್ಳಿ ಲಭ್ಯವಾಗುವಂತೆ ಬಫರ್ ದಾಸ್ತಾನಿನ ಬಳಕೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈರುಳ್ಳಿ ಬೆಲೆ ಸ್ಥಿರತೆ ಕಾಯ್ದುಕೊಳ್ಳುವ ಜತೆಗೆ ರೈತರ ಹಿತಾಸಕ್ತಿಯನ್ನೂ ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಸಮಂಜಸ ದರದಲ್ಲಿ ಈರುಳ್ಳಿ ದೊರೆಯುವಂತೆ ಮತ್ತು ರೈತರಿಗೆ ಸೂಕ್ತ ಬೆಲೆ ದೊರೆಯುವಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಮಾರುಕಟ್ಟೆಯ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದ್ದು, ಅಗತ್ಯಕ್ಕೆ ಅನುಗುಣವಾಗಿ ಇತರ ನಗರಗಳಿಗೂ ಈರುಳ್ಳಿ ಪೂರೈಕೆ ಮಾಡುವ ಮೂಲಕ ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಮುಂದುವರಿದ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.