
ಬೆಂಗಳೂರು, 24 ಆಗಸ್ಟ್ (ಹಿ.ಸ.):
ಆ್ಯಂಕರ್:
ರಾಜಾಜಿನಗರದ ಪ್ರತಿಷ್ಠಿತ ಲೂಲು ಹೈಪರ್ ಮಾರ್ಕೆಟ್ನಲ್ಲಿರುವ ಕೆಎಫ್ ಸಿ ಮಳಿಗೆಯ ವಿರುದ್ಧ ಗ್ರಾಹಕರಿಗೆ ಕೊಳೆತ ಚಿಕನ್ ಸರಬರಾಜು ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ದೊಡ್ಡ ಬ್ರ್ಯಾಂಡ್ಗಳು ಮತ್ತು ಮಾಲ್ಗಳ ಮೇಲಿನ ನಂಬಿಕೆಯನ್ನು ಹುಸಿಗೊಳಿಸುವಂತೆ ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಲೂಲು ಹೈಪರ್ ಮಾರ್ಕೆಟ್ನ ಎರಡನೇ ಮಹಡಿಯಲ್ಲಿರುವ ಕೆಎಫ್ಸಿ ಮಳಿಗೆಗೆ ತೆರಳಿದ್ದ ಗ್ರಾಹಕರೊಬ್ಬರು ಎಂದಿನಂತೆ ಚಿಕನ್ ಆರ್ಡರ್ ಮಾಡಿದ್ದರು. ಆದರೆ, ಆಹಾರ ಸೇವಿಸುವ ವೇಳೆ ಅದರಿಂದ ತೀವ್ರ ರೀತಿಯ ಕೊಳೆತ ಹಾಗೂ ಕೆಟ್ಟ ವಾಸನೆ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಗ್ರಾಹಕರು ಮಳಿಗೆಯ ಸಿಬ್ಬಂದಿ ಹಾಗೂ ಮ್ಯಾನೇಜರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗ್ರಾಹಕರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವಲ್ಲಿ ಮ್ಯಾನೇಜರ್ ವಿಫಲರಾಗಿದ್ದಾರೆ. ತಪ್ಪನ್ನು ಒಪ್ಪಿಕೊಳ್ಳುವ ಬದಲು, ಘಟನೆಯ ಸಾಕ್ಷಿಯನ್ನು ಮುಚ್ಚಿಹಾಕುವ ಧಾವಂತದಲ್ಲಿ ಆ ಕೊಳೆತ ಚಿಕನ್ ತುಂಡುಗಳನ್ನು ತಕ್ಷಣವೇ ಡಸ್ಟ್ಬಿನ್ಗೆ ಎಸೆದು ಬೇಜವಾಬ್ದಾರಿ ಮೆರೆದಿದ್ದಾರೆ. ಮಳಿಗೆಯ ಈ ವರ್ತನೆಯನ್ನು ಸ್ಥಳದಲ್ಲಿದ್ದ ಇತರ ಗ್ರಾಹಕರು ತೀವ್ರವಾಗಿ ಖಂಡಿಸಿದ್ದಾರೆ.
ಬೆಂಗಳೂರಿನ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ಸರಣಿ ದಾಳಿ ನಡೆಸಿ ಕೆಟ್ಟ ಆಹಾರವನ್ನು ವಶಪಡಿಸಿಕೊಳ್ಳುತ್ತಿರುವ ಬೆನ್ನಲ್ಲೇ, ಈ ಘಟನೆ ಬೆಳಕಿಗೆ ಬಂದಿದೆ. ಹೆಸರಾಂತ ಬ್ರ್ಯಾಂಡ್ಗಳ ಮಳಿಗೆಗಳಲ್ಲಿ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಕನಿಷ್ಠ ಕಾಳಜಿಯೂ ಇಲ್ಲದಿರುವುದು ಗ್ರಾಹಕರನ್ನು ಆತಂಕಕ್ಕಿಡು ಮಾಡಿದೆ.ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ಪ್ರಭಾವಿ ಸಂಸ್ಥೆಗಳು ಹಾಗೂ ಮಳಿಗೆಗಳ ಮೇಲೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R