
ಮೈಸೂರು, 24 ಆಗಸ್ಟ್ (ಹಿ.ಸ.)
ಆ್ಯಂಕರ್:
ಭಾರತವು ಅತ್ಯಂತ ವೈವಿಧ್ಯಮಯದೇಶವಾಗಿದ್ದು, ಬುಡಕಟ್ಟು ಸಮುದಾಯ ಹಾಗೂ ಅವರ ಭಾಷೆ, ಸಂಸ್ಕೃತಿಯು ವಿಭಿನ್ನ ಮತ್ತು ಅಪರೂಪವಾದುದು. ಇವುಗಳನ್ನು ಮುಂದಿನ ಪೀಳಿಗೆಗಾಗಿ ಕಾಪಾಡಿಕೊಳ್ಳಬೇಕಾದ ಅಗತ್ಯ ನಮ್ಮ ಮುಂದಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಟಿ. ರಘುಮೂರ್ತಿ ತಿಳಿಸಿದ್ದಾರೆ.ಮೈಸೂರಿನಲ್ಲಿ ಸೋಮವಾರದಿಂದ ಆರಂಭವಾದ ಮೂರು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಬುಡಕಟ್ಟು ಭಾಷೆಗಳು ನಶಿಸಿದರೆ ಕೇವಲ ಭಾಷೆಯಷ್ಟೇ ಅಲ್ಲದೆ, ಸಮುದಾಯದ ಸಂಸ್ಕೃತಿ, ಪರಂಪರೆ ಹಾಗೂ ಪಾರಂಪರಿಕ ಜ್ಞಾನವೂ ನಷ್ಟವಾಗುತ್ತದೆ. ಹೀಗಾಗಿ ಭಾಷೆಗಳ ದಾಖಲಾತಿ ಮತ್ತು ಪುನರುಜ್ಜೀವನಕ್ಕೆ ಒತ್ತು ನೀಡಬೇಕಿದೆ.
ಬುಡಕಟ್ಟು ಭಾಷೆ ಎಂದರೆ ಕೇವಲ ಸಂವಹನವಲ್ಲ; ಅದರಲ್ಲಿ ದಶಕಗಳಿಂದ ಪಾಲಿಸಿಕೊಂಡು ಬಂದಿರುವ ಸಾಂಪ್ರದಾಯಿಕತೆ, ಅರಣ್ಯ ಮತ್ತು ಜೀವವೈವಿಧ್ಯತೆ ಅಡಗಿದೆ.
ಇಂದಿನ ಕೆಲವು ಬುಡಕಟ್ಟು ಸಮುದಾಯದ ಯುವಕರು ತಮ್ಮ ಮೂಲ ಭಾಷೆಯಿಂದ ದೂರ ಹೋಗುತ್ತಿರುವುದು ಕಂಡುಬಂದಿದ್ದು, ಈ ಬಗ್ಗೆ ಎಲ್ಲರೂ ಗಮನಹರಿಸಬೇಕಿದೆ.
ಭಾಷೆಗಳ ಜೀವಂತಿಕೆ, ಮಾತನಾಡುವವರ ಸಂಖ್ಯೆ, ಭೌಗೋಳಿಕ ವ್ಯಾಪ್ತಿ, ಶಿಕ್ಷಣ ಹಾಗೂ ಡಿಜಿಟಲ್ ಸಂಪನ್ಮೂಲಗಳನ್ನು ಒಳಗೊಂಡ ಸಮಗ್ರ ಪ್ರೊಫೈಲ್ ರೂಪಿಸುವ ಮೂಲಕ ವೈಜ್ಞಾನಿಕವಾಗಿ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬಹುದು.
ಈ ರಾಷ್ಟ್ರೀಯ ಸಮಾವೇಶದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವರಾದ ದುರ್ಗಾದಾಸ್ ಉಯಿಕಿ, ಮೈಸೂರು ಹಾಗೂ ಕೊಡಗು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿವಿಧ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಬುಡಕಟ್ಟು ಸಮುದಾಯಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R